ಸಂಶೋಧನಾ ಕೇಂದ್ರ: ಮೀಸಲು ಜಾಗ ಹಸ್ತಾಂತರ

7
ತೀರ್ಥಹಳ್ಳಿ: ವಿವಾದಕ್ಕೆ ಕಾರಣವಾದ ಪ್ರಕರಣ; ರೈತರ ಅಸಮಾಧಾನ

ಸಂಶೋಧನಾ ಕೇಂದ್ರ: ಮೀಸಲು ಜಾಗ ಹಸ್ತಾಂತರ

Published:
Updated:
ಸಂಶೋಧನಾ ಕೇಂದ್ರ: ಮೀಸಲು ಜಾಗ ಹಸ್ತಾಂತರ

ತೀರ್ಥಹಳ್ಳಿ; ಅಡಿಕೆ ಸಂಶೋಧನಾ ಕೇಂದ್ರಕ್ಕೆಂದು ಮೀಸಲಿಟ್ಟ ಪ್ರದೇಶವನ್ನು ಈಗ ಕಂದಾಯ ಇಲಾಖೆಯು ನ್ಯಾಯಾಂಗ ಇಲಾಖೆಗೆ ಹಸ್ತಾಂತರಿಸಲು ಮುಂದಾಗಿರುವುದು ವಿವಾದ ಸೃಷ್ಟಿಸಿದೆ.ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರಕ್ಕೆಂದು ಕಾಯ್ದಿರಿಸಿ ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿರುವ ಜಮೀನನ್ನು ರೈತರ ಅಭಿಪ್ರಾಯ ಕೇಳದೇ, ರೈತರೊಂದಿಗೆ ಚರ್ಚಿಸದೇ ಕಂದಾಯ ಇಲಾಖೆ ಬೇರೆ ಇಲಾಖೆಗಳಿಗೆ ಹಸ್ತಾಂತರಿಸಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.ಮಲೆನಾಡಿನ ಅಡಿಕೆ ಬೆಳೆಗಾರರ ಬಹುದಿನದ ಕನಸೊಂದು ಅಡಿಕೆ ಸಂಶೋಧನಾ ಕೇಂದ್ರ ತೀರ್ಥಹಳ್ಳಿಯಲ್ಲಿ ಆರಂಭವಾಗುವುದರಿಂದಾಗಿ ಈಡೇರಿತ್ತು. ಆದರೆ, ಈಗ ಇಲ್ಲಿನ ಪ್ರದೇಶವನ್ನು ವ್ಯವಸಾಯೇತರ ಉದ್ದೇಶಗಳಿಗೆ ವರ್ಗಾಯಿಸುವುದರಿಂದ ಅಡಿಕೆ ಸಂಶೋಧನಾ ಕೇಂದ್ರದ ಚಟುವಟಿಕೆಗಳಿಗೆ ತೊಡಕು ಉಂಟಾಗುತ್ತದೆ ಎಂದು ಕೃಷಿಕ ಸಮಾಜ ಹೇಳುತ್ತದೆ.ತಾಲ್ಲೂಕಿನ ಕಸಬಾ ಹೋಬಳಿಯ ಯಡೇಹಳ್ಳಿ ಗ್ರಾಮದ ಸರ್ವೆ ನಂ. 120ರಲ್ಲಿನ 7 ಎಕರೆ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಂಡು ತೋಟಗಾರಿಕಾ ಇಲಾಖೆಗೆ ಸ್ವಾಧೀನತೆಯನ್ನು ಹಸ್ತಾಂತರಿಸಿ ಅಡಿಕೆ ಸಂಶೋಧನಾ ಕೇಂದ್ರಕ್ಕೆಂದೇ ಈ ಪ್ರದೇಶವನ್ನು ಕಾಯ್ದಿರಿಸಿ ಖಾತೆ ಮತ್ತು ಪಹಣಿಯನ್ನು ವರ್ಗಾಯಿಸಲಾಗಿದೆ. ತೋಟಗಾರಿಕಾ ಇಲಾಖೆ ಜಮೀನಿನ ಸುತ್ತಲೂ ಬೇಲಿ ನಿರ್ಮಿಸಿ ಅತಿಕ್ರಮಿಸದಂತೆ ರಕ್ಷಿಸಿಕೊಂಡು ಬಂದಿದೆ.ರೈತರ ಅಗತ್ಯತೆಗಳನ್ನು ಮನಗಂಡ ರಾಜ್ಯ ಸರ್ಕಾರ ಸುಮಾರು ಎರಡು ಕೋಟಿಗೂ ಹೆಚ್ಚಿನ ಹಣ ಖರ್ಚು ಮಾಡಿ 2008ರಲ್ಲಿ ಅಡಿಕೆ  ಸಂಶೋಧನಾ ಕೇಂದ್ರದ ಕಟ್ಟಡ ನಿರ್ಮಿಸಿ, ಅತ್ಯಾಧುನಿಕ ಯಂತ್ರೋಪಕರಣಗಳನ್ನು, ಪ್ರಯೋಗಾಲಯ, ಆಧುನಿಕ ಮಣ್ಣು ಪರೀಕ್ಷಾ ಕೇಂದ್ರ, ವಿಜ್ಞಾನಿಗಳನ್ನು ನೇಮಿಸಿ ಅಡಿಕೆಗೆ ತಗಲುತ್ತಿರುವ ರೋಗಗಳ ಪತ್ತೆ, ತಡೆಗಟ್ಟುವ ವಿಧಾನದ ಜತೆಗೆ ತಳಿ ಅಭಿವೃದ್ಧಿ ಚಟುವಟಿಕೆಯಲ್ಲಿ ಸಂಶೋಧನಾ ಕೇಂದ್ರ ತೊಡಗಿದೆ.ಗ್ರೀನ್‌ಹೌಸ್ ಪ್ರಯೋಗ ಘಟಕಗಳನ್ನು ಆರಂಭಿಸುವುದು, ನೀರಿನ ಮಿತ ಬಳಕೆ, ಇಳುವರಿ ಹೆಚ್ಚಳ, ರೋಗಮುಕ್ತ ತೋಟಗಳ ನಿರ್ವಹಣೆ ಮುಂತಾದ ಕ್ರಿಯಾತ್ಮಕ ಪ್ರಯೋಗಗಳಿಗೆ ಅಣಿಯಾಗಬೇಕಿದ್ದ ಅಡಿಕೆ ಸಂಶೋಧನಾ ಕೇಂದ್ರ ಈಗ ನ್ಯಾಯಾಲಯಗಳ ಕಟ್ಟಡಗಳಿಗೆ ತನ್ನ ಆಡಳಿಕ್ಕೆ ಒಳಪಟ್ಟ ಪ್ರದೇಶವನ್ನು ನೀಡಬೇಕಾಗಿರುವುದರಿಂದ ಸಂಶೋಧನೆಗಳಿಗೆ ಹಿನ್ನಡೆ ಉಂಟಾಗಲಿದೆ ಎಂದು  ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ಅಭಿಪ್ರಾಯಪಡುತ್ತಾರೆ.ತೀರ್ಥಹಳ್ಳಿ ತಾಲ್ಲೂಕು ನ್ಯಾಯಾಲಯಗಳ ಸಂಕಿರ್ಣಕ್ಕೆ ವರ್ಗಾಯಿಸಲು ಸರ್ಕಾರಕ್ಕೆ ಶಿಫಾರಸು ಮಾಡುವ ಯೋಜನೆಯನ್ನು ಜಿಲ್ಲಾಧಿಕಾರಿ ಕಚೇರಿ ಸಿದ್ಧಪಡಿಸಿದೆ.ಈಗಾಗಲೇ ಸಂಶೋಧನಾ ಕೇಂದ್ರದ ವ್ಯಾಪ್ತಿಯಲ್ಲಿರುವ 7 ಎಕರೆ ಪ್ರದೇಶದಲ್ಲಿ 1 ಎಕರೆ 3 ಗುಂಟೆ ಜಮೀನನ್ನು ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಗೆ ಹಸ್ತಾಂತರಿಸಲಾಗಿದೆ. ಉಳಿದ 5 ಎಕರೆ 3 ಗುಂಟೆ ಪ್ರದೇಶವನ್ನು ನ್ಯಾಯಾಲಯಗಳ ಸಂಕೀರ್ಣಕ್ಕೆ ಶಿಫಾರಸು ಮಾಡುವ ಯೋಜನೆ ಸಿದ್ದಗೊಳ್ಳುತ್ತಿದೆ. ಇದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry