ಸಂಶೋಧನೆಗೆ ಆದ್ಯತೆ: ಸಂಕಷ್ಟಕ್ಕೆ ಸ್ಪಂದನೆ

7

ಸಂಶೋಧನೆಗೆ ಆದ್ಯತೆ: ಸಂಕಷ್ಟಕ್ಕೆ ಸ್ಪಂದನೆ

Published:
Updated:

ಗುಲ್ಬರ್ಗ: ತೊಗರಿ ಬೆಳೆಗಾರರ ಸಮಗ್ರ ಅಭಿವೃದ್ಧಿಗಾಗಿ ಸಾವಿರ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಸೇರಿದಂತೆ ವಿವಿಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹಾಗೂ ಪ್ರಧಾನಿಯನ್ನು ಒತ್ತಾಯಿಸಲು ನಿಯೋಗವೊಂದು ತೆರಳುವ ನಿರ್ಣಯವನ್ನು ಭಾನುವಾರ ಇಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಅಂಗೀಕರಿಸಲಾಯಿತು.ಇಲ್ಲಿನ ಎಚ್‌ಕೆಸಿಸಿಐ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಪಕ್ಷಗಳ ಮುಖಂಡರು, ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ರೈತರು ತಮ್ಮ ಅಭಿಮತ ವ್ಯಕ್ತಪಡಿಸಿ, `ತೊಗರಿ ಕಣಜದಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು~ ಎಂದು ಆಗ್ರಹಿಸಿದರು. ಆಮದು ನೀತಿ, ಸಂಶೋಧನೆ, ರಾಸಾಯನಿಕ ಬಳಕೆ, ಉತ್ಪಾದನೆ ಹೆಚ್ಚಳ, ತೊಗರಿ ಬೋರ್ಡ್‌ಗೆ ಕಾಯಕಲ್ಪ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಭೆ ಚರ್ಚೆ ನಡೆಸಿತು.ಆಮದು ನೀತಿ ಬದಲಾಯಿಸಿ:  ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ಶಾಕಾಹಾರಿಗಳಿಗೆ ಪ್ರೋಟೀನ್ ಒದಗಿಸುವ ಮೂಲ ಧಾನ್ಯ ತೊಗರಿಬೇಳೆ. ಜನರ ಆರೋಗ್ಯಕ್ಕೆ ತೊಗರಿ ಬೇಳೆ ಬಳಕೆ ಅತಿ ಮುಖ್ಯ. ಆದರೆ ಇದನ್ನು ಬೆಳೆಯುವ ರೈತರು ಮಾತ್ರ ಕಂಗಾಲಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ತೊಗರಿ ಬಗ್ಗೆ ಹೆಚ್ಚಿನ ಸಂಶೋಧನೆಗಳೇ ನಡೆಯುತ್ತಿಲ್ಲ. ಸಂಶೋಧನಾ ಕೇಂದ್ರಕ್ಕೆ 500 ಎಕರೆ ಜಮೀನು ಒದಗಿಸಿ, ಈ ಕ್ಷೇತ್ರಕ್ಕೆ ಆದ್ಯತೆ ಕೊಡಬೇಕು. ಎಂ.ಎಸ್.ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.“ವಿದೇಶಗಳಿಂದ ತೊಗರಿಬೇಳೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನೀತಿ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಆಮದು- ರಫ್ತು ನೀತಿಯಲ್ಲಿ ಬದಲಾವಣೆ ತರಬೇಕು” ಎಂದು ಮಾನ್ಪಡೆ ಒತ್ತಾಯಿಸಿದರು.ಮೊದಲು ಆಮದು ನಿಷೇಧಿಸಿ: ಬೇಳೆ ಕಾಳು ಆಮದು ನಿಷೇಧಿಸುವ ಬೇಡಿಕೆಯನ್ನು ಸ್ವಾಗತಿಸಿದ ಕರ್ನಾಟಕ ಪ್ರದೇಶ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ, ಆಮದಿಗೆ ಕೇಂದ್ರ ತೋರುವ ಆಸಕ್ತಿಯನ್ನು ಖಂಡಿಸಿದರು. “ಆಮದು ಮಾಡಿಕೊಳ್ಳುವ ಪ್ರತಿ ಕಿಲೋ ಧಾನ್ಯಕ್ಕೂ ಕೇಂದ್ರ ಸರ್ಕಾರ ಪ್ರೋತ್ಸಾಹ ಧನ ಕೊಡುತ್ತಿದೆ. ಆಮದು ನೀತಿಯಿಂದ ರೈತರ ಉತ್ಪನ್ನಕ್ಕೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಆಮದು ನಿಷೇಧಿಸಬೇಕು” ಎಂದು ಆಗ್ರಹಿಸಿದರು.ಹಾಗಿದ್ದರೆ ಧಾನ್ಯ ಎಲ್ಲಿದೆ?:  ಆಮದು ನಿಷೇಧಿಸಿದರೆ ಕೊರತೆಯಾಗುವ ಆಹಾರ ಧಾನ್ಯ ಎಲ್ಲಿಂದ ತರಬೇಕು? ಎಂಬ ಪ್ರಶ್ನೆ ದಾಲ್ ಮಿಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಶಿವಶರಣಪ್ಪ ನಿಗುಡ್ಗಿ ಅವರದು.“ದೇಶದಲ್ಲಿ ಬಳಕೆಯಾಗುವುದು 11 ಲಕ್ಷ ಟನ್ ಬೇಳೆ ಕಾಳು. ಈ ಪೈಕಿ ನಮ್ಮಲ್ಲಿ ಉತ್ಪಾದನೆ ಶೇ. 75ರಷ್ಟಿದೆ. ಉಳಿದ ಪ್ರಮಾಣ ಆಮದು ಮಾಡಿಕೊಳ್ಳಬೇಕಲ್ಲವೇ? ಹೀಗಾಗಿ ಉತ್ಪಾದನೆ ಹೆಚ್ಚಳದತ್ತ ಗಮನಹರಿಸುವುದು ಅಗತ್ಯ. ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆ ಸೇರಿದಂತೆ ಸಂಶೋಧನೆಯತ್ತ ಗಮನಹರಿಸಬೇಕು” ಎಂದು ಶಿವಶರಣಪ್ಪ ಸಲಹೆ ಮಾಡಿದರು.ಸಂಶೋಧನೆಗೆ ನಿರ್ಲಕ್ಷ್ಯ: ಶಾಸಕರಾದ ಅಲ್ಲಮಪ್ರಭು ಪಾಟೀಲ ಹಾಗೂ ಶಶೀಲ ನಮೋಶಿ ಅವರ ಪ್ರತಿಪಾದನೆಯೆಂದರೆ; `ಸಂಶೋಧನೆಗೆ ಸಿಗಬೇಕಾದ ಪ್ರಾಮುಖ್ಯ ಸಿಗುತ್ತಿಲ್ಲ~.“ಬೇರೆ ಕೃಷಿ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ ಕೋಟಿಗಟ್ಟಲೇ ಹಣ ಕೊಡುತ್ತದೆ. ಆದರೆ ನಮ್ಮ ವಿವಿಗಳು ಹಣಕಾಸಿನ ತೊಂದರೆಯಿಂದ ನರಳುತ್ತಿವೆ” ಎಂದು ಅಲ್ಲಮಪ್ರಭು ಹೇಳಿದರೆ, “ಉತ್ಪಾದನೆ ಹೆಚ್ಚುವಂತಾಗುವ ನಿಟ್ಟಿನಲ್ಲಿ ಸಂಶೋಧನಾ ಚಟುವಟಿಕೆ ಅಧಿಕ ಪ್ರಮಾಣದಲ್ಲಿ ಆಗುತ್ತಿಲ್ಲ” ಎಂದು ನಮೋಶಿ ಅಭಿಪ್ರಾಯಪಟ್ಟರು.ಹಣ- ಸಿಬ್ಬಂದಿ ಇಲ್ಲ: ಈ ಅಭಿಮ ತಕ್ಕೆ ಸಮ್ಮತಿ ಸೂಚಿಸಿದ ಮಾಜಿ ಶಾಸಕ ಬಿ.ಆರ್.ಪಾಟೀಲ, “ನಮ್ಮ ಸಂಶೋಧನಾ ಕೇಂದ್ರಗಳಿಗೆ ಹಣವೂ ಇಲ್ಲ; ಸಿಬ್ಬಂದಿಯೂ ಇಲ್ಲ” ಎಂದರು. ಈ ಭಾಗದ ಜನರ ಒತ್ತಡಕ್ಕೆ ಮಣಿದು ಸ್ಥಾಪಿಸಲಾದ ತೊಗರಿ ಮಂಡಳಿಗೆ ಸಾಕಷ್ಟು ಹಣ ಕೊಡದೇ ಅದು ನಾಮ್‌ಕಾವಸ್ತೆ ಬೋರ್ಡ್ ಆಗಿದೆ ಎಂದ ಪಾಟೀಲ, ನಗರದ ಅಭಿವೃದ್ಧಿಗೆ ನೂರಿನ್ನೂರು ಕೋಟಿ ಕೊಡುವ ಸರ್ಕಾರ ಮಂಡಳಿಗೇಕೆ ನೂರು ಕೋಟಿ ಕೊಟ್ಟು ಲಕ್ಷಾಂತರ ರೈತರಿಗೆ ನೆರವಾಗಬಾರದು? ಎಂದು ಪ್ರಶ್ನಿಸಿದರು.ಎಚ್‌ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ “ತೊಗರಿ ಬೆಳೆಗಾರರ ಹಿತರಕ್ಷಣೆಗೆ ಆಂದೋಲನ ನಡೆಸುವ ಕಾಲ ಸನ್ನಿಹಿತವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷಾತೀತ ಹೋರಾಟ ನಡೆಸಬೇಕು” ಎಂದರು.ಎಪಿಎಂಸಿ ಕಾರ್ಯದರ್ಶಿ ಚಂದ್ರಮೋಹನ, ತೊಗರಿ ಮಂಡಳಿ ಅಧ್ಯಕ್ಷ ವೆಂಕಟೇಶ ಗಡ್ಡಿಮನಿ, ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೇದಾರಲಿಂಗಯ್ಯ, ಮಾಜಿ ಶಾಸಕ ಮಾರುತಿರಾವ ಮಾಲೆ, ಉದ್ಯಮಿ ಎಸ್.ಎಸ್.ಪಾಟೀಲ ಕಡಗಂಚಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry