ಸೋಮವಾರ, ಮೇ 17, 2021
28 °C

ಸಂಶೋಧನೆಗೆ ಒತ್ತು ಕ್ರೀಡೆಗೆ ತಾಕತ್ತು

ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

ಟೆನಿಸ್ ಆಟಗಾರ ಸೋಮದೇವ್ ದೇವವರ್ಮನ್ ಪದೇ ಪದೇ ಗಾಯಕ್ಕೆ ಒಳಗಾಗುತ್ತಾರೆ. ಕ್ರಿಕೆಟಿಗ ಜಹೀರ್ ಖಾನ್ ಆಡಿದ್ದಕ್ಕಿಂತ ಸ್ನಾಯುಸೆಳೆತದ ನೋವಿನಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಪದೇ ಪದೇ ಪ್ರವಾಸ ಮಾಡಿದರೆ, ಸತತ ಸೋಲು ಎದುರಾಗುತ್ತದೆ ಎನ್ನುತ್ತಾರೆ ಅರ್ಜುನ್ ಹಾಲಪ್ಪ. ಇದು ಭಾರತದ ವಿವಿಧ ಆಟಗಾರರು ಅನುಭವಿಸುತ್ತಿರುವ ಪರಿಸ್ಥಿತಿ.



ಆಟಗಾರರಿಗೆ ಈ ಸಂಕಷ್ಟದಿಂದ ಮುಕ್ತಿಯೇ ಇಲ್ಲವಾ? ಯಾಕೆ ಹೀಗೆ ಪದೇ ಪದೇ ನೋವು ಕಾಡುತ್ತದೆ? ಇದಕ್ಕೆ ಪರಿಹಾರವೇನು? ಹೀಗೆ ನೂರಾರು ಪ್ರಶ್ನೆಗಳು ಕಾಡುತ್ತವೆ. ಈ ಎಲ್ಲಾ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದು ವಿರಾಜಪೇಟೆಯ ಕಾವೇರಿ ಶಿಕ್ಷಣ ಸಂಸ್ಥೆ (ಕಾವೇರಿ ಕಾಲೇಜ್) ಆಶ್ರಯದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ. ಭಾರತದ ಕ್ರೀಡಾಪಟುಗಳು ಏಕೆ ವಿದೇಶಿ ತರಬೇತುದಾರರತ್ತ ಮುಖ ಮಾಡುತ್ತಾರೆ ಎನ್ನುವ ಪ್ರಶ್ನೆಗೂ ಇಲ್ಲಿ ಉತ್ತರ ಲಭಿಸಿತು.



`ದೈಹಿಕ ಶಿಕ್ಷಣ, ಕ್ರೀಡೆ ಹಾಗೂ ಯೋಗ ಅಭಿವೃದ್ಧಿಗಾಗಿ ಸಂಶೋಧನೆಯ ಮಹತ್ವ~ ವಿಷಯ ಕುರಿತು ನಡೆದ ವಿಚಾರ ಸಂಕಿರಣ ಈ ಎಲ್ಲಾ ಪ್ರಶ್ನೆಗಳಿಗೆ ತಕ್ಕ ಉತ್ತರ ಒದಗಿಸಿತು. ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿವಿಧ ವಿಷಯ ತಜ್ಞರು ಪಾಲ್ಗೊಂಡಿದ್ದರು. ಕ್ರೀಡಾಪಟುಗಳ ಸವಾಲುಗಳು, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.

 

`ಕ್ರೀಡಾ ಕ್ಷೇತ್ರದಲ್ಲಿ ಸಂಶೋಧನೆ ಸಾಧ್ಯವಾಗಿದ್ದು ಕಡಿಮೆ. ಅದರಲ್ಲಿಯೂ ಭಾರತದಲ್ಲಿ. ಕ್ರೀಡೆ ಹಾಗೂ ದೈಹಿಕ ಶಿಕ್ಷಣ ಎನ್ನುವುದು ಇಲ್ಲಿ ಕಡೆಗಣಿಸಲಾದ ಕ್ಷೇತ್ರಗಳು. ಶಾಲಾ ಪಠ್ಯ ಚಟುವಟಿಕೆಯ ನಡುವೆ ಕಾಟಾಚಾರಕ್ಕೆ ಎನ್ನುವಂತೆ ಒಂದು ಕ್ಲಾಸ್ ಮಾತ್ರ ಆಟಕ್ಕೆ ಮೀಸಲು. ಸ್ಥಿತಿ ಹೀಗೆ ಇರುವಾಗ ಆಟದ ಆಸಕ್ತಿ ಮೂಡಿಸುವುದೇ ಸಾಧ್ಯವಾಗುತ್ತಿಲ್ಲ. ಎಲ್ಲದಕ್ಕೂ ನಾವು ವಿದೇಶಿ ಮಾದರಿಗಳನ್ನು ಅನುಸರಿಸಿ ಸಾಗುವಂಥ ಸ್ಥಿತಿ~ ಎನ್ನುವ ಬೇಸರ ಸಂಗತಿಗಳು ಇಲ್ಲಿ ಕೇಳಿ ಬಂದವು.



`ನಮ್ಮ ಜನರ ದೇಹ ಪ್ರಕೃತಿಗೆ ಒಪ್ಪುವಂಥ ವಿಶಿಷ್ಟವಾದ ತರಬೇತಿ ತಂತ್ರಗಳನ್ನು ಹಾಗೂ ವ್ಯಾಯಾಮಗಳನ್ನು ರೂಪಿಸುವಂಥ ಸಂಶೋಧನೆಗಳು ದೇಶದಲ್ಲಿ ನಡೆದಿದ್ದು ತೀರ ಕಡಿಮೆ. ವಿವಿಧ ಕ್ರೀಡಾ ಕ್ಷೇತ್ರಕ್ಕೆ ಸೂಕ್ತವಾದ ಕ್ರೀಡಾಪಟುಗಳನ್ನು ಆರಂಭದಲ್ಲಿಯೇ ಗುರುತಿಸುವಂಥ ತಂತ್ರಜ್ಞಾನ ಹಾಗೂ ಪರಿಣತಿಯ ಕೊರತೆ ಅಪಾರವಾಗಿದೆ.

 

ಸ್ನಾಯು ವಿನ್ಯಾಸ ಹಾಗೂ ದೇಹ ಚಲನೆಯಂಥ ವಿಷಯಗಳ ಗೊಡವೆಗಂತೂ ನಾವು ಹೋಗಿಯೇ ಇಲ್ಲ. ಆದ್ದರಿಂದಲೇ ನಾವು ಎಲ್ಲದಕ್ಕೂ ವಿದೇಶಿ ಕಡೆಗೆ ನೋಡುವಂಥ ಸ್ಥಿತಿ~ ಎನ್ನುವ ಅಭಿಪ್ರಾಯ ಬಲವಾಗಿ ಇಲ್ಲಿ ಕೇಳಿ ಬಂದವು.



ಕ್ರಿಕೆಟ್ ನಮ್ಮಲ್ಲಿ ಅಪಾರವಾಗಿ ಜನಪ್ರಿಯ ಗಳಿಸಿರುವ ಕ್ರೀಡೆ. ಬಿಸಿಸಿಐ ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆ. ಆದರೆ ಅದು ಕ್ರೀಡಾ ತಂತ್ರಗಳ ಹಾಗೂ ದೇಹ ಚಲನೆಯ ಸೂಕ್ಷ್ಮಗಳ ಪರೀಕ್ಷೆಗೆ ತಕ್ಕ ಪರಿಣತರನ್ನು ಸ್ವದೇಶದಲ್ಲಿ ಹೊಂದಿಲ್ಲ. ಇದೇ ಕಾರಣಕ್ಕಾಗಿ ಎಲ್ಲಾ ವಿಷಯಕ್ಕೂ ವಿದೇಶದತ್ತ ಮುಖ ಮಾಡುವ ಸ್ಥಿತಿ ಇದೆ.



 ನಮ್ಮ ಬೌಲರ್‌ಗಳು ಅನುಮಾನಾಸ್ಪದ ಬೌಲಿಂಗ್ ಶೈಲಿಯನ್ನು ಹೊಂದಿದ ಆರೋಪಕ್ಕೆ ಒಳಗಾದಾಗ ಪರೀಕ್ಷೆಗಾಗಿ ಆಸ್ಟ್ರೇಲಿಯಾಕ್ಕೆ ಕಳುಹಿಸಿದ್ದೇ ಇದಕ್ಕೆ ಸಾಕ್ಷಿ. ಇದಕ್ಕೆ ಕಾರಣ ಭಾರತದಲ್ಲಿ ದೇಹ ಚಲನಾಶಾಸ್ತ್ರ ಕುರಿತ ಸಂಶೋಧನೆಯನ್ನು ಕಡೆಗಣಿಸಿದ್ದು. ಇವುಗಳನ್ನು ಕ್ರೀಡಾ ಸಂಸ್ಥೆಗಳು ಸಹ ಗಂಭೀರವಾಗಿ ಪರಿಗಣಿಸುತ್ತಿಲ್ಲ.



ಯೋಗದಂಥ ವಿಶಿಷ್ಟವಾದ ವ್ಯಾಯಾಮ ಹಾಗೂ ಸಾಧನಾ ಕಲೆಯನ್ನು ನಾವು ವಿಶ್ವಕ್ಕೆ ನೀಡಿದ್ದರೂ ನಮ್ಮ ದೇಶದ ಕ್ರೀಡಾ ಸಾಧನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವಂತಿಲ್ಲ. ಇದಕ್ಕೆ ಕಾರಣ ನಾವು ನಮ್ಮ ನಾಡಿನ ಕ್ರೀಡಾಪಟುಗಳ ಅಂಗಶಕ್ತಿ ವೃದ್ಧಿಗೆ ತಕ್ಕದಾದ ಮಾರ್ಗವನ್ನು ಕಂಡುಕೊಂಡಿಲ್ಲ ಎನ್ನುವುದು.

 

ಕ್ರೀಡಾ ಕೌಶಲಗಳನ್ನು ಕೂಡ ನಮ್ಮ ನೆಲದ ಮಕ್ಕಳ ಹಾಗೂ ಯುವಕರ ಮೈಗುಣಕ್ಕೆ ಒಗ್ಗುವ ರೀತಿಯಲ್ಲಿಯೇ ಹೇಳಿಕೊಡಬೇಕು. ಅದು ಸಾಧ್ಯವಾಗುವುದು ಸಂಶೋಧನೆಯಿಂದ ಮಾತ್ರ. ಆದ್ದರಿಂದ ಪ್ರಾಮಾಣಿಕ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ವಿವಿಧ ವಿಷಯ ತಜ್ಞರು ಅಭಿಪ್ರಾಯ ಪಟ್ಟರು.



`ಸಂಶೋಧನೆ ಎಂದಾಕ್ಷಣ ಅಂಕಿ-ಅಂಶಗಳನ್ನು ಒಟ್ಟುಗೂಡಿಸಿ ವಿಶ್ಲೇಷಣೆ ಮಾಡಿಟ್ಟು ಪದವಿ ಗಿಟ್ಟಿಸುವುದಲ್ಲ. ಬಹುತೇಕ ಸಂಶೋಧನೆಗಳು ಧೂಳು ಹಿಡಿದಿವೆ. ಆ ಸ್ಥಿತಿ ದೈಹಿಕ ಶಿಕ್ಷಣಕ್ಕೆ ಬರಬಾರದು~ ಎನ್ನುವ ಸಲಹೆಗಳು ವ್ಯಕ್ತವಾದವು.



ವಿರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ವಿಚಾರ ಸಂಕಿರಣ ಸಾಕಷ್ಟು ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲಿತು. ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ನಂದಿನಿ ಬಸಪ್ಪ, ಪಿ.ಇ. ಕಾಳಯ್ಯ ಸೇರಿದಂತೆ ಇತರ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಇಲ್ಲಿ ವ್ಯಕ್ತವಾದ ವಿಚಾರಗಳು ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟವು. 



ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ವೈಜ್ಞಾನಿಕ ಅಧಿಕಾರಿ ಡಾ. ಕೆ.ಪಿ. ಮಣಿಲಾಲ್, ಪತ್ರಕರ್ತ ಎಂ.ಎ. ಪೊನ್ನಪ್ಪ, ಕುವೆಂಪು ವಿಶ್ವವಿದ್ಯಾಲಯದ ದೈಹಿಕಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಸ್.ಎಂ. ಪ್ರಕಾಶ್, ಕೇರಳದ ಕಣ್ಣೂರು ವಿ.ವಿ.ಯ ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೆ. ಸುರೇಶ್ ಕುಟ್ಟಿ ವಿಷಯ ಮಂಡನೆ ಮಾಡಿದರು.

 

ಬೆಂಗಳೂರು ವಿ.ವಿ.ಯ ಯು.ಸಿ.ಪಿ.ಇ. ವಿಭಾಗದ ಮಾಜಿ ಪ್ರಾಂಶುಪಾಲ ಡಾ. ವೈದ್ಯನಾಥನ್, ಧಾರವಾಡದ ಕ್ರೀಡಾ ಔಷಧಿ ತಜ್ಞ ಡಾ. ಕುಲಕರ್ಣಿ ಹಾಗೂ ಮಂಗಳೂರು ವಿ.ವಿ.ಯ ಯೋಗ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಭಟ್ ಪಾಲ್ಗೊಂಡಿದ್ದರು. ಸಂಘಟನಾ ಸಮಿತಿಯ ಸಂಯೋಜನಾಧಿಕಾರಿ ಪ್ರೊ. ಎಂ.ಎಂ. ದೇಚಮ್ಮ ಕಾರ್ಯಾಗಾರ ನಡೆಸಿಕೊಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.