ಬುಧವಾರ, ಏಪ್ರಿಲ್ 21, 2021
30 °C

ಸಂಶೋಧನೆಯ ಹೊಸ ರೂಪ

ಪ್ರಜಾವಾಣಿ ವಾರ್ತೆ/ ಶಿವರಂಜನ್ ಸತ್ಯಂಪೇಟೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕಲ್ಯಾಣದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಗುಲ್ಬರ್ಗದಲ್ಲಿ ಮಹಾದಾಸೋಹಿ ಶರಣಬಸವೇಶ್ವರರು (1746-1822) ದಾಸೋಹ ಜೀವನ ನಡೆಸುವ ಮೂಲಕ ಜಾನಪದರಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ನೆಲೆಸಿದ್ದಾರೆ.ಜನಪದರ ನಾಲಿಗೆಯಲ್ಲಿ ಇಂದಿಗೂ ಜೀವಂತವಾಗಿರುವ ಹಾಡುಗಳ ಜಾಡು ಹಿಡಿದು ಹೊರಟ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರು ಯುಜಿಸಿ ಅನುಮೋದಿತ `ಜಾನಪದ ಸಾಹಿತ್ಯದಲ್ಲಿ ಶ್ರೀ ಶರಣಬಸವೇಶ್ವರರು~ ಎನ್ನುವ ಮಹಾಪ್ರಬಂಧದಲ್ಲಿ ಶರಣಬಸವೇಶ್ವರರ ಜೀವನ ದರ್ಶನ ಕುರಿತಾಗಿ ಸಾಕಷ್ಟು ಹೊಸ ಹೊಳವುಗಳತ್ತ ಬೆಳಕು ಚೆಲ್ಲಿದ್ದಾರೆ.ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ವಿಜ್ಞಾನ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು 2003ರಿಂದ 2005ರವರೆಗೆ ಕಾರ್ಯಕ್ಷೇತ್ರ ನಡೆಸಿ ಜನಪದರ ನಾಲಿಗೆಯಲ್ಲಿ ಲಾವಣಿ, ದ್ವಿಪದಿ, ತ್ರಿಪದಿ, ಚೌಪದಿ, ಗೀಗೀ ಪದ, ಹಂತಿ ಹಾಡು, ಬೀಸುವ, ಕುಟ್ಟುವ ಹಾಡುಗಳ ರೂಪದಲ್ಲಿ  ನಲಿದಾಡುವ 11,000 ಹಾಡುಗಳನ್ನು ಸಂಗ್ರಹಿಸುವ ಮೂಲಕ ಹೊಸ ಸಂಶೋಧನೆಗೆ ದಾರಿ ಮಾಡಿಕೊಟ್ಟಿದ್ದಾರೆ.ಹಕ್ಕಿ ಬಂದಾವ ಹಾರಿ, ತೆನಿಯ ತಿಂದಾವ ಹೀರಿ,ಗಿಡದ ನೆರಳಿಗಿ ಕುಂತಾವ ಮಾತಾಡತಾವ,ಶಿವ ಆನ ಏನ ಶರಣಬಸಪ್ಪ./ ಕಾಶಿಯು ನಮಗ್ಯಾಕ ಸಿರಿಗಿರಿಯು ನಮಗ್ಯಾಕ, ಕಾಶಿಗೂ ಹೆಚ್ಚು ಕಲಬುರಗಿ ಪರ್ವತದ, ಮಲ್ಲಯ್ಯ ಹೆಚ್ಚು ಶರಣಪ್ಪ./ ಶರಣಬಸವಧರಮಕ ನಿಷ್ಠಿ, ಕಾಯಕ್ಮಾಡಿ ಅದರಾಗ ಗಟ್ಟಿ, ಜಗವ ಸಲುವಿದ ಒಂದೇ ದೃಷ್ಠಿ, ಮುಕ್ತಿ ಪಡೆದಾ ಮನಮುಟ್ಟಿ./ಎಂಬ ತ್ರಿಪದಿ ಹಾಗೂ ಲಾವಣಿ ಪದಗಳು ಶರಣಬಸವನ ದಾಸೋಹ ಜೀವನ, ಶಿವ ಜೀವನ ಹಾಗೂ ಅವರ ಭಕ್ತಿಯ ಶಕ್ತಿಯನ್ನು ತಿಳಿಸುವಂತಿವೆ. `ಹತ್ತು ಸಾವಿರ ಪದವ ನಾಲಿಗೆ ಮ್ಯಾಲಿಟ್ಟು, ಹತ್ತು ಸಾವಿರ ಪದವ ಎದೆಯೊಳಗಿಟ್ಟು ಹಾಡೇವ ಶರಣ ನಿನ್ನ ಹಾಡ~ ಎಂಬ ತ್ರಿಪದಿಯು ಶರಣನ ಕುರಿತಾಗಿ ಇನ್ನೂ ಹತ್ತು ಸಾವಿರ ಹಾಡುಗಳಿರುವುದನ್ನು ಸೂಚಿಸುವಂತಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ.ಕನ್ನಡದ ಜಾನಪದ ಸಾಹಿತ್ಯ ಚರಿತ್ರೆಯಲ್ಲಿ ಈವರೆಗೆ ಮಲೆಯ ಮಹಾದೇಶ್ವರ, ಮಂಟೇಸ್ವಾಮಿ, ಮೈಲಾರಲಿಂಗ, ಜುಂಜಪ್ಪ, ಹಾಲುಮತ ಪುರಾಣ ಮುಂತಾದ ಮಹಾಕಾವ್ಯಗಳನ್ನು ಮಾತ್ರ ಗುರುತಿಸಲಾಗಿದೆ. ಅವುಗಳ ಸಾಲಿನಲ್ಲಿ ಶರಣಬಸವೇಶ್ವರರ ಮಹಾಕಾವ್ಯ ಕೂಡ ಒಂದು. ಪದ್ಯರೂಪದಲ್ಲಿ ಸಿಗುವ ಈ ಕಾವ್ಯ ಕನ್ನಡದಲ್ಲಿ ವಿಶಿಷ್ಟ ಮತ್ತು ವಿಭಿನ್ನ ಎಂದು ಡಾ. ಸೋಮಶಂಕರ ವಿಶ್ವನಾಥ ಮಠ ಹೇಳುತ್ತಾರೆ.ಈ ಹಿನ್ನೆಲೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ಇಂದಿನಿಂದ 37 ದಿನಗಳ ಕಾಲ ಸುದೀರ್ಘ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಶರಣಬಸವೇಶ್ವರರ ಜನಪದ ಮಾಹಾಕಾವ್ಯಕ್ಕೆ ಮೂರ್ತರೂಪು ಕೊಡಲಾಗುವುದು ಎಂಬ ಅಭೀಪ್ಸೆ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಅನುಭವ ಮಂಟಪದ ಕಾರ್ಯಕ್ರಮ ಸಂಚಾಲಕ ಡಾ. ಶಿವರಾಜಶಾಸ್ತ್ರಿ ಹೇರೂರ ಅವರದು.

ಗುರುಮುಟ್ಟಿ ಗುರುವಾದ...

ಜಿಲ್ಲೆಯ ಜೇವರ್ಗಿ, ನೆಲೋಗಿ, ಸೊನ್ನ, ಹೊನ್ನಕಿರಣಗಿ, ಫರಹತಾಬಾದ ಮುಂತಾದ ಗ್ರಾಮಗಳಿಗೆ ಸುತ್ತಾಡಿ ಹಾಡುಗಳನ್ನು ಸಂಗ್ರಹಿಸುವಾಗ ನೆಲೋಗಿಯ ಶಿವಶರಣಪ್ಪ ಕಂಬಾಳಿ ಅವರ ಮಕ್ಕಳಾದ ನೀಲಮ್ಮ, ಗುರಮ್ಮ, ಚಂದ್ರು, ಹೊನ್ನಕಿರಣಗಿಯ ನಾರಾಯಣ ಮುಂತಾದವರ ಸಹಕಾರವನ್ನು ಸ್ಮರಿಸಲೇಬೇಕು. ಸಂಸ್ಥೆಯ ಅಧ್ಯಕ್ಷರಾದ ಡಾ. ಶರಣಬಸವಪ್ಪ ಅಪ್ಪ ಅವರಂತೂ ಈ ಕಾರ್ಯದಲ್ಲಿ ಸದಾ ಮಾರ್ಗದರ್ಶನ ಮಾಡುತ್ತಲೇ ಪ್ರೇರಣೆಯಾಗಿದ್ದರು.ಶರಣಬಸವೇಶ್ವರರ ಬಗೆಗೆ ಈವರೆಗೂ ಬೆಳಕು ಕಾಣದ ಅನೇಕ ಮಾಹಿತಿಗಳು ಇವರು ಹಾಡುವ ಹಾಡುಗಳಿಂದ ದೊರೆತವು. ಲಭ್ಯವಿರುವ ಪುರಾಣ, ಪುಸ್ತಕಗಳಲ್ಲಿ ಶರಣಬಸವೇಶ್ವರರ ಗುರು ಮರುಳಾಧ್ಯರು. ಹೀಗಾಗಿ ಗುರು-ಶಿಷ್ಯರ ಜೋಡುಮೂರ್ತಿ ಈಗಲೂ ಕಾಣಬಹುದು ಎಂದು ಹೇಳಲಾಗುತ್ತಿದೆ.ಆದರೆ ಆದಿ ದೊಡಪ್ಪ ಅಪ್ಪ ಅವರ ಗುರು ಶರಣಬಸವೇಶ್ವರರು. ದೊಡ್ಡಪ್ಪ ಅಪ್ಪ ಅವರು ಗುರು (ಶರಣಬಸವೇಶ್ವರ) ಮುಟ್ಟಿ ಗುರುವಾಗಿದ್ದರು ಎಂಬ ಹೊಸ ಅಂಶವನ್ನು ಜನಪದರ ಹಾಡುಗಳಿಂದ ಗುರುತಿಸಬಹುದಾಗಿದೆ” ಈ ಕಾರ್ಯದಲ್ಲಿ ಡಾ. ಅಪ್ಪ ಅವರು ಎಂದು ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ತಿಳಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.