ಸಂಸತ್ತಿನ ವಜ್ರಮಹೋತ್ಸವ ಛಾಯಾಚಿತ್ರ: ಪ್ರಣವ್ ಮುಖರ್ಜಿಯೇ ನಾಪತ್ತೆ..!

7

ಸಂಸತ್ತಿನ ವಜ್ರಮಹೋತ್ಸವ ಛಾಯಾಚಿತ್ರ: ಪ್ರಣವ್ ಮುಖರ್ಜಿಯೇ ನಾಪತ್ತೆ..!

Published:
Updated:

ನವದೆಹಲಿ (ಪಿಟಿಐ): ಸಂಸತ್ತಿನ ವಜ್ರಮಹೋತ್ಸವದ ನೆನಪಿಗಾಗಿ ಸೆರೆಹಿಡಿಯಲಾಗಿರುವ ಐತಿಹಾಸಿಕ ಛಾಯಾಚಿತ್ರದಲ್ಲಿ ಹಾಲಿ ಲೋಕಸಭಾ ನಾಯಕ, ಹಣಕಾಸು ಸಚಿವ ಪ್ರಣವ್ ಕಾಣುವುದಿಲ್ಲ.

ಹಣಕಾಸು ಸಚಿವಾಲಯದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಂವಹನದ ಕೊರತೆಯಿಂದಾಗಿ ಬುಧವಾರ ಬೆಳಿಗ್ಗೆ ಸಂಸತ್ ಭವನದ ಹುಲ್ಲುಹಾಸಿನ ಮೇಲೆ ಛಾಯಾಚಿತ್ರ ಸೆರೆಹಿಡಿಯುವಾಗ ಪ್ರಣವ್ ಮುಖರ್ಜಿ ಕಾಣಿಸಿಕೊಳ್ಳಲಿಲ್ಲ.

ಲೋಕಸಭಾ ವಾರ್ತಾಪತ್ರದಲ್ಲಿ ಈ ಕುರಿತು ಕಳೆದ ಕೆಲ ದಿನಗಳಿಂದ ಸೂಚನೆ ನೀಡುತ್ತಿದ್ದರೂ ಪ್ರಣವ್ ಅವರ ಕಚೇರಿಯ ಅಧಿಕಾರಿಗಳು ಇದನ್ನು ಗಮನಿಸಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಲೋಕಸಭಾ ಸಚಿವಾಲಯ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಿಯವರಿಗೆ ಮಾತ್ರ ವಿಶೇಷ ಆಹ್ವಾನ ಕಳುಹಿಸುತ್ತದೆ. ಸಂಸತ್ತಿನ ಇತರ ಸದಸ್ಯರೆಲ್ಲ ಪ್ರತಿದಿನ ಹೊರಡಿಸುವ ಸಂಸತ್ ವಾರ್ತಾಪತ್ರ ಗಮನಿಸುತ್ತಿರಬೇಕಾಗುತ್ತದೆ.

ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ, ವಿರೋಧ ಪಕ್ಷದ ನಾಯಕರಾದ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಎಲ್ಲರೂ ಛಾಯಾಚಿತ್ರ ತೆಗೆಸಿಕೊಳ್ಳಲು ಹಾಜರಾಗಿದ್ದರು. ಆದರೆ, ಪ್ರಣವ್ ಗೈರುಹಾಜರಿ ಎದ್ದುಕಾಣುತ್ತಿತ್ತು.

ಸಂಸದೀಯ ವ್ಯವಹಾರ ಸಚಿವರಾದ ಪಿ.ಕೆ. ಬನ್ಸಲ್ ಮುಖರ್ಜಿ ಇಲ್ಲದಿರುವುದರನ್ನು ಕೊನೆಯ ಕ್ಷಣದಲ್ಲಿ ಗಮನಿಸಿದರು. ಅದಾಗಲೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಲ್ಲಿಗೆ ಬಂದಿದ್ದರಿಂದ ಏನು ಮಾಡಲೂ ಸಾಧ್ಯವಾಗಲಿಲ್ಲ.

ಇದರಿಂದಾಗಿ ಪ್ರಣವ್ ಮುಖರ್ಜಿ ಬೇಸರಗೊಂಡರು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry