ಸಂಸತ್ -ಅಧ್ಯಯನ ಬೇಕು

7

ಸಂಸತ್ -ಅಧ್ಯಯನ ಬೇಕು

Published:
Updated:

ನವದೆಹಲಿ: ‘ಭಾರತೀಯ ಸಂಸತ್ತು ಮತ್ತು ಅದರ ಪ್ರತಿನಿಧಿಗಳ ಕಾರ್ಯನಿರ್ವಹಣೆ ಕುರಿತು ಗಂಭೀರವಾದ ಅಧ್ಯಯನಗಳು ನಡೆಯುತ್ತಿಲ್ಲ. ನಿಜಕ್ಕೂ ಇದೊಂದು ದೊಡ್ಡ ನ್ಯೂನತೆ’ ಎಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅಭಿಪ್ರಾಯಪಟ್ಟರು.

ಮಾಜಿ ಸಚಿವ ಬಿ.ಎಲ್.ಶಂಕರ್ ಮತ್ತು ಜೆಎನ್‌ಯು ಪ್ರಾಧ್ಯಾಪಕ ವಲೇರಿಯನ್ ರೊಡ್ರಿಗಸ್ ಅವರು ಬರೆದಿರುವ ‘ದಿ ಇಂಡಿಯನ್ ಪಾರ್ಲಿಮೆಂಟ್ ಎ ಡೆಮಾಕ್ರಸಿ ಅಟ್ ವರ್ಕ್’ ಕೃತಿಯನ್ನು ಬುಧವಾರ ಬಿಡುಗಡೆ ಮಾಡಿ ಮಾತನಾಡಿದರು.

ಭಾರತದ ಸಂಸತ್ತು ಪ್ರಜಾಪ್ರಭುತ್ವದ ಕೇಂದ್ರ ಬಿಂದು. ಹೆಚ್ಚು ಹೆಚ್ಚು ಅಧ್ಯಯನಗಳು ನಡೆದಷ್ಟು ಹೊಸ ಹೊಸ ವಿಷಯಗಳು ಹೊರಬರುತ್ತವೆ. ‘ಸಾರ್ವಜನಿಕ ಚರ್ಚೆಯ ಸರ್ವೋನ್ನತ ವೇದಿಕೆ’ ಎಂದು ಕರೆಯುವ ಸಂಸತ್ತು ಹಳಿ ತಪ್ಪಿರುವುದೆಲ್ಲಿ ಎಂಬುದನ್ನು ಮನಗಾಣಬೇಕಿದೆ ಎಂದರು.

ಈ ನಿಟ್ಟಿನಲ್ಲಿ ವಿಮರ್ಶಾತ್ಮಕವಾದ ದೃಷ್ಟಿಕೋನದಿಂದ ಕೂಡಿರುವ ಈ ಕೃತಿ ಹೊಸದೊಂದು ಅಧ್ಯಯನ ಪರಂಪರೆಗೆ ಮುನ್ನುಡಿ ಬರೆಯಲಿದೆ ಎಂದು ಉಪ ರಾಷ್ಟ್ರಪತಿ ಆಶಿಸಿದರು. ‘ಆಕ್ಸ್‌ಫರ್ಡ್ ಪ್ರೆಸ್’ ಹೊರ ತಂದಿರುವ ಕೃತಿ ಕುರಿತು ಪ್ರೊ. ವಲೇರಿಯನ್ ರೊಡ್ರಿಗಸ್ ಕಿರು ಒಳನೋಟ ನೀಡಿದರು. ಬಿ.ಎಲ್. ಶಂಕರ್ ವಂದಿಸಿದರು.

ಸಂಸತ್ತಿನಲ್ಲಿ ನಡೆದಿರುವ ಚರ್ಚೆಗಳು, ರಾಜಕಾರಣಿಗಳು, ಸಾರ್ವಜನಿಕ ರಂಗದ ಗಣ್ಯ ವ್ಯಕ್ತಿಗಳ ಅಭಿಪ್ರಾಯಗಳನ್ನು ಕೃತಿ ಒಳಗೊಂಡಿದೆ. 500 ಪುಟಗಳ ಕೃತಿ ಕಾರ್ಯಾಂಗ ಮತ್ತು ನ್ಯಾಯಾಂಗದ ಸಂಬಂಧದ ಮೇಲೂ ಬೆಳಕು ಚೆಲ್ಲಿದೆ.

ರಾಜ್ಯಸಭೆ ಉಪ ಸಭಾಪತಿ ಕೆ.ರೆಹಮಾನ್ ಖಾನ್, ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ, ಶಿಕ್ಷಣ ಕ್ಷೇತ್ರದ ವಿದ್ವಾಂಸರು ಮತ್ತು ಗಣ್ಯರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry