ಶುಕ್ರವಾರ, ಜೂನ್ 25, 2021
30 °C
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣೋತ್ಸವ ಸಮಿತಿಯ 15 ವರ್ಷಾಚರಣೆ

ಸಂಸದರು, ಶಾಸಕರು ನಮ್ಮ ಮಾಲೀಕರಲ್ಲ: ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಲಹೊಂಗಲ: ‘ಸಂಸದರು ಹಾಗೂ ಶಾಸಕರು ನಮ್ಮ ಮಾಲೀಕರಲ್ಲ, ಜನರ ಸಮಸ್ಯೆಗಳನ್ನು ಅರಿತು, ಅವುಗಳನ್ನು ನಿವಾರಣೆ ಮಾಡುವ ಜನಪ್ರತಿನಿಧಿಗಳು ಎನ್ನುವ ಮನೋಭಾವನೆ­ಯನ್ನು ನಾಗರಿಕರು ಬೆಳೆಸಿಕೊಳ್ಳಬೇಕು’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸಲಹೆ ಮಾಡಿದರು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣೋತ್ಸವ ಸಮಿತಿಯ 15 ವರ್ಷಾಚರಣೆ ಅಂಗವಾಗಿ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ ರಾಜ್ಯಮಟ್ಟದ ರಾಯಣ್ಣ ಸ್ಮರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದರೆ ಶಿಕ್ಷಣ ಪಡೆಯುವುದರ ಜೊತೆಗೆ ದೇಶಾಭಿಮಾನ ಹಾಗೂ ಸಂಸ್ಕಾರ ಹೊಂದಿರಬೇಕು ಎನ್ನುವುದನ್ನು ಪ್ರತಿಪಾದಿಸಿದರು.ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎನ್ನುವ ಪ್ರಜಾಪ್ರಭುತ್ವದ ಮಹತ್ವವನ್ನು ಪ್ರತಿಯೊಬ್ಬ ನಾಗರೀಕರು ಅರಿತುಕೊಳ್ಳಬೇಕು ಎಂದರು.ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗುವ ಮೂಲಕ ಬದಲಾವಣೆಯ, ಪ್ರಾಮಾಣಿಕರನ್ನು ಗೌರವಿಸುವ ಹೊಸ ಸಮಾಜ ನಿರ್ಮಾಣ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದರು.ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಪ್ರಾಮಾಣಿಕರಿಗೆ ಅವಕಾಶ ಮತ್ತು ಬೆಲೆ ಇಲ್ಲದಂತಾಗಿದ್ದು, ಯುವ ಜನಾಂಗವೇ ಏಳಿ, ಎದ್ದೇಳಿ ಭ್ರಷ್ಟಾಚಾರಿಗಳನ್ನು ಬಹಿಷ್ಕರಿಸುವ ಮೂಲಕ ನವ ಸಮಾಜ ರೂಪಿಸಿ ಎಂದು ಕರೆ ನೀಡಿದರು.ದೇಶದಲ್ಲಿ ನೂರಾರು ಹಗರಣಗಳು ನಡೆದಿದ್ದು, ಅವುಗಳಲ್ಲಿ 2012 ರಲ್ಲಿ ಕೊಲ್ಗೆಟ್‌ ಹಗರಣದಲ್ಲಿ ₨ 1ಲಕ್ಷ 86 ಸಾವಿರ, ಅದಕ್ಕೂ ಮೊದಲು 2ಜಿ ಪ್ರಕರಣದಲ್ಲಿ 1.ಲಕ್ಷ 76 ಸಾವಿರ ಕೋಟಿ, ಕಾಮನವೆಲ್ತ ಹಗರಣದಲ್ಲಿ ₨ 70 ಸಾವಿರ ಕೋಟಿ, ಬೊೋಪೋರ್ಸ್‌ ಪ್ರಕರಣದಲ್ಲಿ ₨ 64 ಕೋಟಿ, ಜೀಪ್‌ ಹಗರಣದಲ್ಲಿ ₨ 52 ಲಕ್ಷ ಹೀಗೆ ಕೆಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಂದೊಂದು ಹಗರಣದಲ್ಲಿ ದುರ್ಬಳಕೆಯಾದ ಹಣ, ರಾಜ್ಯದ ಬಜೆಟ್‌ ಹಣಕ್ಕೆ ಸಮಾವಾಗಿದೆ ಎಂದು ಭ್ರಷ್ಟಾಚಾರದ ಪಟ್ಟಿಯನ್ನೇ ಸಭಿಕರ ಮುಂದಿಟ್ಟರು.ರಾಜ್ಯದಲ್ಲಿ ನೀರಿನ ಕೊರತೆಯಿಲ್ಲ, ಸರ್ಕಾರದ ಖಜಾನೆಯಲ್ಲಿ ಹಣಕ್ಕೂ ಕೊರತೆಯಿಲ್ಲ, ನೀರು ಸರಬರಾಜು ಹೆಸರಿನಲ್ಲಿ ಹಣ ಖರ್ಚಾಗಿರುವ ಕುರಿತು ಲೆಕ್ಕಪತ್ರ ಇಡಲಾಗಿದೆ. ಆದರೆ ನೀರು ಸರಬರಾಜು ಆಗಿರುವುದಿಲ್ಲ ಎನ್ನುವ ಮೂಲಕ ಯೋಜನೆಗಳು ಬರೀ ಕಾಗದದಲ್ಲೇ ಮಾತ್ರ ಇವೆ ಎನ್ನುವುದನ್ನು ಹೆಗ್ಡೆ ಸ್ಪಷ್ಟಪಡಿಸಿದರು.ಹುಟ್ಟಿನಿಂದ ಮಾನವೀಯ ಗುಣಗಳು ಬರುವುದಿಲ್ಲ, ಬೆಳೆಯುತ್ತ ಮಾನವೀಯತೆ ಗುಣಗಳನ್ನು ಬೆಳೆಸಿಕೊಂಡು, ಕಾನೂನು ರೀತಿಯಲ್ಲಿ ಸಂಪಾದಿಸಿದ ಹಣದಿಂದ ಮಾತ್ರ ತೃಪ್ತಿಕರ ಹಾಗೂ ಸಮಾಧಾನಕರ ಜೀವನ ನಡೆಸಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನದ ಆದರ್ಶಗಳನ್ನು ಎಲ್ಲರೂ ಬೆಳೆಸಿಕೊಂಡು ದೇಶಾಭಿಮಾನ ಹೆಚ್ಚಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಶತಾಯುಷಿ ಡಾ.ಏಣಗಿ ಬಾಳಪ್ಪ, ಕರ್ನಲ್ ಭೂಷಣ ಎಸ್. ಹೆಗಡೆ, ಗಣ್ಯರಾದ ಗಂಗಪ್ಪ ಬೋಳಣ್ಣವರ, ಬಿ.ಎಂ. ಕುಡಸೋಮಣ್ಣವರ, ಬಸನಗೌಡ ಪಾಟೀಲ (ಅರವಳ್ಳಿ), ಮಾಜಿ ಕುಸ್ತಿ ಪಟು ಉಳವಪ್ಪ ಹೋಟಿ, ಬಾಬಣ್ಣ ಢಮ್ಮಣಗಿ, ಜಿ.ಬಿ. ತುರಮರಿ, ಶಂಕರೆಪ್ಪ ಯಡಳ್ಳಿ, ಸುರೇಶ ಮೆಟಗುಡ್ಡ, ಬಸವರಾಜ ನೀಲಗಾರ ಅವರನ್ನು ಸನ್ಮಾನಿಸಲಾಯಿತು.ಹಿರಿಯ ಸಾಹಿತಿ ಆನಂದ ಹಣಮಂತಗಡ ಅಧ್ಯಕ್ಷತೆ ವಹಿಸಿದ್ದರು. ನಯಾನಗರ ಸುಖದೇವಾನಂದ ಆಶ್ರಮದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಈ ಟಿ.ವಿ. ಜನಪ್ರಿಯ ಧಾರಾವಾಹಿ ಅಶ್ವಿನಿ ನಕ್ಷತ್ರದ ಜೆ.ಕೆ ಕಾರ್ತಿ ಜಯರಾಂ, ಹೆಂಡ್ತಿ ಪಾತ್ರಧಾರಿ ಅಶ್ವಿನಿ, ಲೆಫ್ಟಿನೆಂಟ್‌ ಜನರಲ್ ಎಸ್.ಸಿ. ಸರದೇಶಪಾಂಡೆ, ಧಾರವಾಡದ ಮೆಹರ್ ಅಪ್ರೋಜ್ ಕಾಟೇವಾಡಿ, ಚಿತ್ರನಟ ಶಿವರಂಜನ ಬೋಳಣ್ಣವರ, ಸಂಸ್ಥಾಪಕ ಸಿ.ಕೆ. ಮೆಕ್ಕೇದ, ಅಧ್ಯಕ್ಷ ರಾಜು ಸೊಗಲ, ಮುಖಂಡ ಸೋಮನಾಥ ಸೊಪ್ಪಿಮಠ, ಗೌರವಾಧ್ಯಕ್ಷ ಕುಮಾರ ದೇಶನೂರ, ಮಹಾಂತೇಶ ತುರಮರಿ, ಶಿವಾನಂದ ಬಡ್ಡಿಮನಿ ವೇದಿಕೆಯಲ್ಲಿದ್ದರು.ಹಲವಾರು ಗಣ್ಯರು, ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.