ಶುಕ್ರವಾರ, ಜೂನ್ 18, 2021
24 °C

ಸಂಸದರ ನಿಧಿಯಲ್ಲಿ ಸಮುದಾಯದ ಮಹಿಮೆ

ಪ್ರಜಾವಾಣಿ ವಾರ್ತೆ/ ಕೆ.ಎಚ್‌. ಓಬಳೇಶ್‌ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಸಂಸದರು ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯು ಓಟ್‌ಬ್ಯಾಂಕ್‌ ಸೃಷ್ಟಿಗೆ ಬಳಕೆಯಾಗುತ್ತಿದೆ ಎಂಬುದು ಸಾಮಾನ್ಯ ಆರೋಪ.ಚುನಾಯಿತ ಪ್ರತಿನಿಧಿಗಳ ಆಪ್ತ ಸಹಾಯಕರು ಮತಗಟ್ಟೆವಾರು ಪಕ್ಷಕ್ಕೆ ಲಭಿಸಿದ ಮತಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅಲ್ಲಿರುವ ತಮ್ಮ ಪಕ್ಷದ ನಿಷ್ಠಾವಂತರಿಗೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಗುತ್ತಿಗೆ ರೂಪದಲ್ಲಿ  ಅನುದಾನ ಹಂಚಿಕೆ ಮಾಡುತ್ತಾರೆ ಎಂಬ ಆಪಾದನೆಯೂ ಇತ್ತೀಚಿನ ದಿನಗಳಲ್ಲಿ ಬಲವಾಗಿ ಕೇಳಿಬರುತ್ತಿದೆ.ಹೀಗಾಗಿ, ಎಲ್ಲ ವರ್ಗದ ಸಮುದಾಯ ಭವನಗಳಿಗೆಯೇ ಹೆಚ್ಚು ಅನುದಾನ ನೀಡಲಾಗುತ್ತದೆ. ಇದನ್ನು ಪತ್ತೆಹಚ್ಚಲು ಹೊರಟರೆ ಸತ್ಯದ ದರ್ಶನವಾಗುತ್ತದೆ.ಪ್ರತಿವರ್ಷ ಬಿಡುಗಡೆಯಾಗುವ ನಿಧಿಯನ್ನು ಜನಪ್ರತಿ ನಿಧಿಗಳು ತಮಗೆ ಹೆಚ್ಚಾಗಿ ಲಭಿಸಿದ ಮತಗಟ್ಟೆಗಳ ವ್ಯಾಪ್ತಿ ವಿನಿಯೋಗಿಸುತ್ತಾರೆ. ನಮ್ಮೂರಿನ ಭಾಗಕ್ಕೆ ಸಮನಾಗಿ ಅನುದಾನ ಹಂಚಿಕೆ ಮಾಡಿಲ್ಲ. ಕನಿಷ್ಠ ಕುಡಿಯುವ ನೀರು ಪೂರೈಕೆಗೂ ಒತ್ತು ನೀಡುವುದಿಲ್ಲ.ಇದರ ಪರಿಣಾಮ ನಮ್ಮ ಭಾಗ ಮೂಲ ಸೌಲಭ್ಯದಿಂದ ವಂಚಿತವಾಗಿದೆ ಎಂದು ಚುನಾವಣಾ ಸಮೀಕ್ಷೆಗೆ ಹೋದ ವೇಳೆ ಹಿಂದುಳಿದ ಪ್ರದೇಶದ ಜನರು ನೋವು ತೋಡಿಕೊಳ್ಳುವುದು ಉಂಟು. ಇದಕ್ಕೆ ಜನಪ್ರತಿನಿಧಿಗಳು ನೀಡುವ ಉತ್ತರವೇ ಬೇರೆ. ಸರ್ಕಾರದಿಂದ ಲಭಿಸುವ ಅನುದಾನವನ್ನು ಸಮರ್ಪಕವಾಗಿ ಬಳಸಿದ್ದೇವೆ. ಮುಂದಿನ ವರ್ಷಗಳಲ್ಲಿ ಆ ಭಾಗಕ್ಕೂ ಅನುದಾನ ಹಂಚಿಕೆ ಮಾಡಿ ಸೌಲಭ್ಯ ಕಲ್ಪಿಸಲಾಗುವುದು ಎಂಬ ಸಿದ್ಧಉತ್ತರ ನೀಡುತ್ತಾರೆ.ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಬಳಕೆ ಬಗ್ಗೆ ಅವಲೋಕನ ನಡೆಸಿದರೆ ಈ ಅನುದಾನ ಬಳಕೆಗೆ ಕೇಂದ್ರ ಸರ್ಕಾರ ನಿರ್ದಿಷ್ಟ ಮಾರ್ಗಸೂಚಿ ರೂಪಿಸಿದೆ. ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗದ ಅಭಿವೃದ್ಧಿಗೆ ವಿಶೇಷ ಪ್ರಾಧಾನ್ಯ ನೀಡಬೇಕಿದೆ. ಜತೆಗೆ, ಇತರೇ ವರ್ಗದವರ ಅಭಿವೃದ್ಧಿಗೂ ಅನುದಾನ ಹಂಚಿಕೆ ಮಾಡಲು ಅವಕಾಶವಿದೆ. ಇದರ ಪರಿಣಾಮವೇ ಎಲ್ಲ ವರ್ಗದ ಸಮು ದಾಯ ಭವನಗಳಿಗೆ ಹೆಚ್ಚಾಗಿ ಅನುದಾನ ಬಳಕೆಯಾಗುತ್ತದೆ!ನೈರ್ಮಲ್ಯ ಕಲ್ಪಿಸಲು ಸಂಸದರ ನಿಧಿ ಬಳಸಬಹುದು. ವಿಪತ್ತು ನಿರ್ವಹಣೆಗೂ ಅನುದಾನ ಬಳಸಿಕೊಳ್ಳಬಹುದು. ಆದರೆ, ಇದಕ್ಕೆ ಕೆಲವು ನಿರ್ದಿಷ್ಟ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ. ಅಂಗವಿಕಲರಿಗೆ ಟ್ರೈಸೈಕಲ್‌ ವಿತರಣೆ, ಗ್ರಂಥಾಲಯಗಳಿಗೆ ಪುಸ್ತಕ ವಿತರಣೆಗೆ ಅನುದಾನ ಬಳಸಿಕೊಳ್ಳಲು ಅವಕಾಶವಿದೆ. ಆಸ್ಪತ್ರೆಗಳಿಗೆ ಅಂಬುಲೆನ್ಸ್‌ ಖರೀದಿಸಿಕೊಡಲು ನಿಧಿ ಬಳಸಿಕೊಳ್ಳಬಹುದು.ಈ ಹಿಂದೆ ಸಂಸದರಿಗೆ ಲಭಿಸುತ್ತಿದ್ದ ಅನುದಾನ ಕಡಿಮೆ ಇತ್ತು. ಇದರಿಂದ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಮಪ್ರಮಾಣದಲ್ಲಿ ಅನುದಾನ ಹಂಚಿಕೆ ಮಾಡಲು ತೊಡಕಾಗುತ್ತಿತ್ತು. ಸಂಸದರ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ 2011–12ನೇ ಸಾಲಿನಿಂದ ಸಂಸದರ ನಿಧಿಯನ್ನು ₨ 5 ಕೋಟಿಗೆ ಹೆಚ್ಚಿಸಿದೆ.ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಚಾಮರಾಜನಗರ, ಹನೂರು, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಒಳಪಟ್ಟಿವೆ. ಮೈಸೂರು ಜಿಲ್ಲೆಗೆ ಸೇರಿದ ವರುಣ, ಹೆಗ್ಗಡದೇವನಕೋಟೆ, ತಿ. ನರಸೀಪುರ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತವೆ.2009–10ರಿಂದ ಇಲ್ಲಿಯವರೆಗೆ ಲೋಕಸಭಾ ಕ್ಷೇತ್ರಕ್ಕೆ ಸಂಸದರ ನಿಧಿಯಡಿ ಒಟ್ಟು ₨ 19 ಕೋಟಿ ಅನುದಾನ ಲಭಿಸಿದೆ. 8 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 438 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಸಂಖ್ಯೆ ಕೇವಲ 159. ಬಿಡುಗಡೆಯಾಗಿರುವ ಅನುದಾನದಲ್ಲಿ ₨ 8.48 ಕೋಟಿ ಅನುದಾನ ಮಾತ್ರ ಖರ್ಚಾಗಿದೆ.42 ಕಾಮಗಾರಿಗಳು ಅಂದಾಜುಪಟ್ಟಿಯ ನಿರೀಕ್ಷೆಯಲ್ಲಿವೆ. ಒಟ್ಟಾರೆ ಶೇ 50ಕ್ಕಿಂತಲೂ ಹೆಚ್ಚು ಕಾಮಗಾರಿ ಪೂರ್ಣಗೊಂಡಿಲ್ಲ. ಸಮುದಾಯ ಭವನಗಳಿಗೆಯೇ ಶೇ 95ರಷ್ಟು ಅನುದಾನ ವೆಚ್ಚ ಮಾಡಲಾಗಿದೆ.ಕಾಮಗಾರಿ ವಿವರ: ಮೈಸೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿಗೆ ₨ 8.14 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 186 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, 53 ಪೂರ್ಣಗೊಂಡಿವೆ. ಒಟ್ಟು ₨ 4.77 ಕೋಟಿ ಅನುದಾನ ಖರ್ಚಾಗಿದೆ. 42 ಕಾಮಗಾರಿಗಳು ಅಂದಾಜುಪಟ್ಟಿಯ ನಿರೀಕ್ಷೆಯಲ್ಲಿವೆ. ಉಳಿದ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ.ಚಾಮರಾಜನಗರ ಜಿಲ್ಲೆಗೆ ಒಳಪಟ್ಟ 4 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 256 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, 106 ಕಾಮಗಾರಿ ಪೂರ್ಣಗೊಂಡಿವೆ. ₨ 3.71 ಕೋಟಿ ಅನುದಾನ ಖರ್ಚಾಗಿದೆ ಎಂದು ಸಂಸದರ ನಿಧಿಯ ಉಸ್ತುವಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.