ಮಂಗಳವಾರ, ಮೇ 24, 2022
25 °C

ಸಂಸದೀಯ ವ್ಯವಸ್ಥೆಗೆ ಸಮ್ಮಿಶ್ರ ಸರ್ಕಾರ ಕಳಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಅಧಿಕಾರವನ್ನೇ ಮೊಟಕುಗೊಳಿಸುತ್ತಿರುವ ಸಮ್ಮಿಶ್ರ ಸರ್ಕಾರಗಳು ಸಂಸದೀಯ ಪ್ರಜಾಪ್ರಭುತ್ವದ ಮೂಲ ತತ್ವಗಳನ್ನೇ ಮೂಲೆಗುಂಪು ಮಾಡುತ್ತಿವೆ~ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಸೋಮವಾರ ಇಲ್ಲಿ ಕಳವಳ ವ್ಯಕ್ತಪಡಿಸಿದರು.ರಾಜ್ಯ ವಿಧಾನಸಭೆಯ ಪ್ರಥಮ ಅಧಿವೇಶನದ 60ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಅವರು, `ಚುನಾವಣೆಯಲ್ಲಿ ಇತರರಿಗಿಂತ ಹೆಚ್ಚು ಮತ ಪಡೆದವರು ವಿಜೇತರು ಎಂದು ಪರಿಗಣಿಸುವ ಪದ್ಧತಿಯಿಂದಾಗಿ ದಿನೇ ದಿನೇ ಸಮ್ಮಿಶ್ರ ಸರ್ಕಾರಗಳ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮವಾಗಿ ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳಲ್ಲಿ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯವು ಮೌಲ್ಯ ಕಳೆದುಕೊಳ್ಳುತ್ತಿದೆ~ ಎಂದರು.`ಬೆರಳೆಣಿಕೆಯಷ್ಟು ಶಾಸಕರನ್ನು ಹೊಂದಿರುವ ಚಿಕ್ಕಪುಟ್ಟ ಪಕ್ಷಗಳು ಅಧಿಕಾರಕ್ಕಾಗಿ ಚೌಕಾಸಿ ರಾಜಕಾರಣ ಮಾಡುತ್ತಿವೆ. ಒತ್ತಡ ತಂತ್ರ ಅನುಸರಿಸಿ ಪ್ರಧಾನಿ, ಮುಖ್ಯಮಂತ್ರಿಗಳ ಅಧಿಕಾರವನ್ನೇ ಮೊಟಕು ಮಾಡುತ್ತಿವೆ. ಮುಖ್ಯಮಂತ್ರಿಯವರಿಗೆ ಸಂಪುಟ ಸಹೋದ್ಯೋಗಿಗಳ ವರ್ತನೆ ಮೇಲೆ ಹಿಡಿತ ಇಲ್ಲವಾಗಿದೆ~ ಎಂದು ವಿಷಾದಿಸಿದರು.`ಸಮ್ಮಿಶ್ರ ಸರ್ಕಾರಗಳು ಇದ್ದಾಗ ತರ್ಕಬದ್ಧ ವಾದಗಳಿಗೆ ಅವಕಾಶ ಇಲ್ಲದಾಗುತ್ತದೆ. ಅಧಿಕಾರಕ್ಕಾಗಿ ಗುದ್ದಾಟ ನಡೆಸುವುದೇ ಮುಖ್ಯವಾಗುತ್ತದೆ. ಸಮ್ಮಿಶ್ರ ಸರ್ಕಾರದ ಹೆಸರಿನಲ್ಲಿ ಪ್ರಧಾನಿ ಇಲ್ಲವೇ ಮುಖ್ಯಮಂತ್ರಿಯ ಅಧಿಕಾರ ಮೊಟಕಾಗುವುದನ್ನು ಆದರ್ಶ ಸಂಸದೀಯ ವ್ಯವಸ್ಥೆ ಒಪ್ಪುವುದಿಲ್ಲ~ ಎಂದು ಅಭಿಪ್ರಾಯಪಟ್ಟರು.`ಸಮಾಜದ ವಿವಿಧ ವಲಯಗಳಲ್ಲಿ ಮೌಲ್ಯಗಳ ಕುಸಿತ ಆಗಿದೆ. ಅದಕ್ಕೆ ಶಾಸನಸಭೆಗಳು ಮತ್ತು ಅದರ ಸದಸ್ಯರೂ ಹೊರತಾಗಿಲ್ಲ. ಜನಪ್ರತಿನಿಧಿಗಳು ಸಂಶಯಕ್ಕೆ ಅತೀತವಾಗಿರಬೇಕು. ಶಾಸನಸಭೆಗಳ ಕಾರ್ಯವಿಧಾನ ಆತ್ಮಾವಲೋಕನಕ್ಕೆ ಒಳಗಾಗಬೇಕಿದೆ. ಮೌಲ್ಯಗಳಿಗೆ ಮರುಹುಟ್ಟು ನೀಡುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ಆಗಬೇಕು~ ಎಂದು ಅವರು ಸಲಹೆ ನೀಡಿದರು.`ಸಾಮಾಜಿಕ- ಆರ್ಥಿಕ ಅಸಮಾನತೆ ನಿವಾರಿಸಬೇಕಾದ ರಾಜಕಾರಣಿಗಳ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಪ್ರಜಾಪ್ರಭುತ್ವ ಸಂಸ್ಥೆಗಳ ಬಗ್ಗೆ ಜನರಲ್ಲಿ ಮೂಡಿರುವ ಹತಾಶ ಭಾವನೆಯನ್ನು ದೂರ ಮಾಡುವುದು ಇಂದಿನ ಬಹುದೊಡ್ಡ ಸವಾಲು. ವ್ಯಕ್ತಿಯ ಚಾರಿತ್ರ್ಯ ಉತ್ತಮಗೊಂಡರೆ ಅದು ರಾಷ್ಟ್ರದ ಚಾರಿತ್ರ್ಯವನ್ನೂ ಉತ್ತಮಗೊಳಿಸುತ್ತದೆ. ಈ ದಿಕ್ಕಿನಲ್ಲಿ ಪ್ರತಿಯೊಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಬೇಕು~ ಎಂದರು.`ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ, ಸ್ವಚ್ಛ ಸಾರ್ವಜನಿಕ ಬದುಕು, ಆಡಳಿತದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ಹೊಣೆಗಾರಿಕೆ ರೂಢಿಸಿಕೊಳ್ಳುವ ಪ್ರತಿಜ್ಞೆಯನ್ನು ಸ್ವಾತಂತ್ರ್ಯೋತ್ಸವದ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಸಂಸತ್ ಸದಸ್ಯರು ಮಾಡಿದ್ದರು. ಅದು ಇನ್ನೂ ಕಾರ್ಯರೂಪಕ್ಕೆ ಬರಬೇಕಾಗಿದೆ. ಚುನಾಯಿತ ಪ್ರತಿನಿಧಿಗಳು ಸ್ವ-ಇಚ್ಛೆಯಿಂದ ಸಾರ್ವಜನಿಕ ಪರಿಶೀಲನೆಗೆ ಒಳಗಾಗಬೇಕು. ಇದರ ಜತೆಗೆ ನೀತಿ ಸಂಹಿತೆಯನ್ನೂ ಮೈಗೂಡಿಸಿಕೊಂಡರೆ, ಶಾಸನಸಭೆಗಳು ಹಾಗೂ ಅದರ ಪ್ರತಿನಿಧಿಗಳನ್ನು ಸಾರ್ವಜನಿಕರು ಅತ್ಯಂತ ಗೌರವದಿಂದ ಕಾಣುವಂತಾಗುತ್ತದೆ~ ಎಂದೂ ಅವರು ಹೇಳಿದರು.`ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಪಾತ್ರ ಮಹತ್ವದ್ದು. ಸರ್ಕಾರವನ್ನು ಟೀಕಿಸಿ, ಇಕ್ಕಟ್ಟಿಗೆ ಸಿಲುಕಿಸುವ ಅವಕಾಶ ಹೊಂದಿದೆ. ಅನೇಕ ಬಾರಿ ಅದು ಕೈಗೆತ್ತಿಕೊಂಡ ವಿಷಯಗಳು ಸರ್ಕಾರವನ್ನು ಪತನದಂಚಿಗೂ ತೆಗೆದುಕೊಂಡು ಹೋದ ನಿದರ್ಶನಗಳಿವೆ. ಹಾಗೆಯೇ ಪ್ರತಿಪಕ್ಷಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಜತೆಗೆ ಕೈಜೋಡಿಸುವ ಅಗತ್ಯವೂ ಇದೆ~ ಎಂದೂ ನ್ಯಾ.ವೆಂಕಟಾಚಲಯ್ಯ ಪ್ರತಿಪಾದಿಸಿದರು.`ಬದ್ಧತೆ ಇರಲಿ~: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು, ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ, ದೇವರಾಜ ಅರಸು ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. `ಇವರ ಜತೆಗೆ ನನಗೆ ಒಡನಾಟವಿತ್ತು. ಬಡವರ ಬಗ್ಗೆ ಅವರಿಗಿದ್ದ ಬದ್ಧತೆ ಪ್ರಶಂಸಾರ್ಹ~ ಎಂದು ಶ್ಲಾಘಿಸಿದರು.`ಸಾರ್ವಜನಿಕ ಜೀವನದಲ್ಲಿ ಬದ್ಧತೆ ಇರಬೇಕು. ಕರ್ತವ್ಯದಲ್ಲಿ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಶಾಸನಸಭೆಯಲ್ಲಿ ಸ್ಪೀಕರ್ ಅವರೇ ಪರಮೋಚ್ಛ. ಅವರ ಆದೇಶಗಳಿಗೆ ತಲೆಬಾಗಿ ಕೆಲಸ ಮಾಡಬೇಕು. ಯಾವುದೇ ಅನುಮಾನಗಳಿದ್ದರೂ ಪರಸ್ಪರ ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ~ ಎಂದರು.`ದೇಶದಲ್ಲಿ ಬಡತನ ತಾಂಡವವಾಡುತ್ತಿದೆ. ಬಡವರ ಶ್ರೇಯೋಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು~ ಎಂದೂ ಜನಪ್ರತಿನಿಧಿಗಳಿಗೆ ಕರೆ ನೀಡಿದರು.ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಈ ಸಂದರ್ಭದಲ್ಲಿ ಎಲ್ಲ ಗಣ್ಯರನ್ನು ಸ್ವಾಗತಿಸಿದರು. ವಿಧಾನಸಭೆಯ ಅಧಿಕಾರಿಗಳ ಗ್ಯಾಲರಿಯಲ್ಲಿ ಸಂಸದರಾದ ಅನಂತಕುಮಾರ್, ಎಚ್.ವಿಶ್ವನಾಥ್ ಸೇರಿದಂತೆ ಇತರರು ಹಾಜರಿದ್ದರು.  ಸಚಿವ ಎಸ್.ಸುರೇಶಕುಮಾರ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.