ಭಾನುವಾರ, ಮೇ 9, 2021
27 °C

ಸಂಸಾರದಲ್ಲಿ ಬಿರುಕು ತಂದ ನಟಿಯರ ಜೊತೆಗಿನ ಸಂಬಂಧ ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆರೆಯ ಮೇಲೆ ದುಷ್ಟರ ವಿರುದ್ಧ ಹೋರಾಡುವ ನಟ ದರ್ಶನ್ ಅವರು ಪತ್ನಿ ಪೀಡಕ ಆಗಿದ್ದರೇ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ನೀಡಿರುವ ದೂರಿನ ಸಾರಾಂಶ ನೋಡಿದರೆ ಅವರು ಪತ್ನಿ ಪೀಡಕರಾಗಿದ್ದರು ಮತ್ತು ಪತ್ನಿಯ ಮೇಲೆ ಆಗಾಗ್ಗೆ ಹಲ್ಲೆ ನಡೆಸಿದ್ದರು ಎಂಬುದು ಸಾಬೀತಾಗುತ್ತದೆ.ಪದವೀಧರೆಯಾಗಿದ್ದ ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿದ್ದ ದರ್ಶನ್ 2001ರ ಮೇನಲ್ಲಿ ವಿವಾಹವಾಗಿದ್ದರು. ದಂಪತಿಗೆ ವಿನೀಶ್ ಎಂಬ ಮೂರು ವರ್ಷದ ಮಗನಿದ್ದಾನೆ. ತೆರೆಯ ಮೇಲೆ ನಾಯಕರಾದ ದರ್ಶನ್ ಪತ್ನಿ ಪಾಲಿಗೆ ಮಾತ್ರ ಖಳನಾಯಕ ಆಗಿದ್ದರು ಎಂಬುದು ಸ್ಪಷ್ಟವಾಗುತ್ತದೆ.ವಿಜಯಲಕ್ಷ್ಮಿ ಅವರು ನೀಡಿರುವ ಐದು ಪುಟಗಳ ದೂರಿನಲ್ಲಿ ಪತಿ ನೀಡುತ್ತಿದ್ದ ಮಾನಸಿಕ- ದೈಹಿಕ ಹಿಂಸೆಯ ಬಗ್ಗೆ ವಿವರಿಸಿದ್ದಾರೆ. ದರ್ಶನ್ ಅವರಿಗೆ ಅನೈತಿಕ ಸಂಬಂಧಗಳಿದ್ದವು ಎಂಬುದು ಸಹ ಗೊತ್ತಾಗುತ್ತದೆ.ಮದುವೆಯಾದ ನಂತರ ಬಿಟಿಎಂ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದೆವು.

 

ದರ್ಶನ್, ವನಿತಾ ಎಂಬುವರನ್ನು ಒಂದು ದಿನ ಮನೆಗೆ ಕರೆದುಕೊಂಡು ಬಂದ ನನಗೆ ಪರಿಚಯಿಸಿದ್ದರು. ಅವರ ಪತಿಯನ್ನೂ ಪರಿಚಯ ಮಾಡಿಕೊಟ್ಟರು. ವನಿತಾ ಅವರ ಪತಿ ವಿದೇಶಕ್ಕೆ ಹೋದ ನಂತರ ದರ್ಶನ್ ಆಕೆಯ ಮನೆಗೆ ಹೋಗಿ ಬರುತ್ತಿದ್ದರು. ಇದನ್ನು ಪ್ರಶ್ನಿಸಿದ ನಂತರ ಸಂಸಾರದಲ್ಲಿ ಬಿರುಕು ಆರಂಭವಾಯಿತು. ಈ ಬಗ್ಗೆ ಹಲವು ಬಾರಿ ಜಗಳವಾಗಿತ್ತು.ಆ ನಂತರ ದರ್ಶನ್ `ಪೊರ್ಕಿ~ ಚಿತ್ರದ ಶೂಟಿಂಗ್‌ಗಾಗಿ ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಿದ್ದರು. ಅಲ್ಲಿ ಯುವತಿಯರ ಜತೆ ಅವರು ಮಿತಿ ಮೀರಿ ವರ್ತಿಸುತ್ತಿದ್ದ ಬಗ್ಗೆ ನನಗೆ ಗೊತ್ತಾಯಿತು. ಆ ನಂತರ ಅವರು ನನಗೆ ಮಾನಸಿಕ ದೈಹಿಕ ಹಿಂಸೆ ನೀಡಲಾರಂಭಿಸಿದರು.ಇದೆಲ್ಲ ಆದ ನಂತರ ಅವರು ನಟಿ ನಿಖಿತಾ ಜತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು. ಆಕೆಯ ಜತೆಯೂ ಅವರು ಅಗತ್ಯಕ್ಕಿಂತ ಹೆಚ್ಚಾಗಿ ನಡೆದುಕೊಳ್ಳುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅವರು ನನಗೆ ಚಪ್ಪಲಿಯಿಂದ ಹೊಡೆದಿದ್ದರು (2011ರ ಏಪ್ರಿಲ್ 17ರಂದು).2011ರ ಏಪ್ರಿಲ್ 4ರಂದು ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದರು. ಸಂಜೆ ನಾಲ್ಕು ಗಂಟೆಯಿಂದ ಬೆಳಗಿನ ಜಾವ ಎರಡು ಗಂಟೆವರೆಗೂ ಮನೆಯಲ್ಲಿ ಕೂಡಿ ಹಾಕಿ ಸತತವಾಗಿ ಹಲ್ಲೆ ಮಾಡಿದ್ದರು. ಈ ಎಲ್ಲ ಘಟನೆಗಳಿಂದ ಭಯಗೊಂಡ ನಾನು 2011ರ ಏಪ್ರಿಲ್ 30ರಂದು ಶಿವರಾಜ್‌ಕುಮಾರ್ ಅವರ ಮನೆಗೆ ಹೋಗಿದ್ದೆ. ಎರಡು ದಿನಗಳ ಕಾಲ ಅಲ್ಲಿಯೇ ಇದ್ದೆ.ಮನೆಗೆ ಬಂದಿದ್ದ ದರ್ಶನ್‌ಗೆ ಬುದ್ಧಿ ಮಾತು ಹೇಳಿದ್ದ ಶಿವರಾಜ್‌ಕುಮಾರ್ ದಂಪತಿ ಭವಿಷ್ಯದಲ್ಲಿ ಈ ರೀತಿ ನಡೆದುಕೊಳ್ಳದಂತೆ ಸೂಚಿಸಿದ್ದರು. ಆ ನಂತರವೂ ಅವರು ಹಿಂಸೆ ನೀಡುವುದನ್ನು ಬಿಡಲಿಲ್ಲ. `ನನ್ನ ಮರ್ಯಾದೆ ತೆಗೆಯುತ್ತೀಯ~ ಎಂದು ಹೊಡೆದಿದ್ದರು.ಸೂಳೆ ಎಂದು ಹೇಳಿಸಿದ್ದ: ನಾನು ನಟಿ ನಿಖಿತಾಗೆ ಬೈಯ್ದಿದ್ದ ಕಾರಣ ಆಕ್ರೋಶಗೊಂಡಿದ್ದ ದರ್ಶನ್ ಇದಕ್ಕೆ ಪ್ರತೀಕಾರ ತೀರಿಸಿಕೊಂಡಿದ್ದರು. ನನ್ನಿಂದ ಆಕೆಗೆ ದೂರವಾಣಿ ಕರೆ ಮಾಡಿಸಿ, `ನಾನೇ ಸೂಳೆ~ ಎಂದು ಹೇಳಿಸಿದ್ದರು ಎಂಬ ಅಂಶವನ್ನು ವಿಜಯಲಕ್ಷ್ಮಿ ಅವರು ದೂರಿನಲ್ಲಿ ತಿಳಿಸಿದ್ದಾರೆ.ಲೋಡೆಡ್ ಗನ್ ಜತೆ ಬರುತ್ತಿದ್ದಾನೆ?

ಸಹೋದರಿಯ ಮದುವೆಗೆ ದರ್ಶನ್ ಹಣ ನೀಡಿದ್ದರು. ಸಹೋದರಿ ಪತಿಯ ಜತೆ ಜಾಲಹಳ್ಳಿಯಲ್ಲಿ ನೆಲೆಸಿದ್ದಳು. ಪತಿಯ ಹಿಂಸೆ ತಾಳಲಾರದೆ ಆಗಸ್ಟ್ 17 ಮತ್ತು 18ರಂದು ಸಹೋದರಿ ಮನೆಗೆ ಹೋಗಿದ್ದೆ. ಮೈದುನ ದಿನಕರ್ ಅವರು ನನಗೆ ಕರೆ ಮಾಡಿದ್ದರು.

 

`ಲೋಡೆಡ್ ಗನ್ ತೆಗೆದುಕೊಂಡು ದರ್ಶನ್ ನಿಮ್ಮ ಸಹೋದರಿ ಮನೆಗೆ ಬರುತ್ತಿದ್ದಾನೆ, ಎಚ್ಚರದಿಂದ ಇರಿ~ ಎಂದು ಮಾಹಿತಿ ನೀಡಿದ್ದರು. ಆಗ ಸಹ ಮನೆಗೆ ಬಂದಿದ್ದ ಅವರು ಜಗಳವಾಡಿ ಹಲ್ಲೆ ನಡೆಸಿದ್ದರು. ಹಲವು ಬಾರಿ ನನ್ನ ಮೇಲೆ ಹಲ್ಲೆ ನಡೆಸಿದ್ದರು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದೆ.ಚಿತ್ರರಂಗದಲ್ಲಿ ಹೆಸರು ಗಳಿಸಿರುವ ದರ್ಶನ್ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿ ಅವರ ವಿರುದ್ಧ ಈವರೆಗೆ ದೂರು ನೀಡದೆ ಸುಮ್ಮನಿದ್ದೆ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.ಹೀರೋಗಳ ಉವಾಚ`ಕುಟುಂಬ ಎಂದ ಮೇಲೆ ಜಗಳ ಸಾಮಾನ್ಯ. ಗಂಡ- ಹೆಂಡತಿಗೆ ಹೊಡೆಯುವುದು, ಮಗ ಅಮ್ಮನಿಗೆ ಹೊಡೆಯುವುದು ಇದೆಲ್ಲವೂ ಇರುತ್ತದೆ. ಇದನ್ನು ದೊಡ್ಡ ವಿಷಯ ಮಾಡುವ ಅಗತ್ಯವಿಲ್ಲ~

 -ಅಂಬರೀಷ`ದರ್ಶನ್ ಪತ್ನಿ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ನನಗೆ ವಯಸ್ಸಿಗೆ ಬಂದ ಮಗ ಇದ್ದಾನೆ. ನಾನೂ ಮೂವತ್ತು ವರ್ಷಗಳ ಕಾಲ ಸಂಸಾರ ಮಾಡಿದ್ದೇನೆ. ದಂಪತಿ ಮಧ್ಯೆ ವಿರಸ ಬರುವುದು ಸಹಜ. ದಾಂಪತ್ಯ ಎನ್ನೋದು ಮುರಿದು ಹೋಗುವಂತಹದಲ್ಲ. ವಿಜಯಲಕ್ಷ್ಮಿ ಅವರ ಜತೆ ಮಾತನಾಡಿದ್ದೇನೆ. ಇಬ್ಬರೂ ಒಂದಾಗಲಿ~

 -ಜಗ್ಗೇಶ್`ಯಾವ ಸಂಸಾರದಲ್ಲಿ ಜಗಳ ಇರುವುದಿಲ್ಲ ಹೇಳಿ? ಕುಟುಂಬದಲ್ಲಿ ಸಮಸ್ಯೆ ಬಂದಾಗ ಅದನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು~

-ವಿಜಯ್ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.