ಗುರುವಾರ , ಮೇ 6, 2021
33 °C
ನಾದದ ಬೆನ್ನೇರಿ...

ಸಂಸ್ಕಾರದ ಸಾಣೆ ಸಂಗೀತದ ಗಂಧ

ಉಮಾ ಅನಂತ್ Updated:

ಅಕ್ಷರ ಗಾತ್ರ : | |

ಸಂಸ್ಕಾರದ ಸಾಣೆ ಸಂಗೀತದ ಗಂಧ

ಮಕ್ಕಳಲ್ಲಿ ಸದ್ಭಾವನೆ ಮೂಡಿಸಲು ಸಂಗೀತ ಸಹಕಾರಿ. ಎಳೆ ವಯಸ್ಸಿನಲ್ಲೇ ಸಂಗೀತ, ನೃತ್ಯಗಳಂತಹ ಮನಸ್ಸಿಗೆ ಮುದ ನೀಡುವ ಲಲಿತಕಲೆಯನ್ನು ರೂಢಿಸಿಕೊಂಡರೆ ಮಗು ಸಂಸ್ಕಾರಯುತವಾಗಿ ಬೆಳೆಯುತ್ತದೆ. ಇದಕ್ಕಾಗಿಯೇ ನಗರದಲ್ಲಿ ಅನೇಕ ಸಂಗೀತ ಶಾಲೆಗಳು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸದ್ಭಾವನೆ ಬೆಳೆಸುವ ಕಾರ್ಯವನ್ನು ನಿಸ್ವಾರ್ಥವಾಗಿ ಮಾಡುತ್ತಿವೆ. ಆ ಮೂಲಕ ಪರಂಪರೆಯನ್ನು ಮುಂದುವರೆಸುವ ಕಾಯಕವನ್ನೂ ಮಾಡುತ್ತಿವೆ.

ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಸಂಗೀತ ಆಸಕ್ತಿ ಗುರುತಿಸಿ ಅವರ ಅಭಿರುಚಿಗೆ ತಕ್ಕಂತೆ ಸಂಗೀತ ಕಲಿಸುವ ಅಪರೂಪದ ಸಂಗೀತ ಶಾಲೆ ಇಂದಿರಾನಗರದಲ್ಲಿರುವ `ಶ್ರೀರಂಗ ಸಂಗೀತ ಕಲಾಕ್ಷೇತ್ರ'. ಇಲ್ಲಿ ಶಾಸ್ತ್ರೀಯ ಸಂಗೀತ ಗಾಯನ, ವಾದ್ಯ ಸಂಗೀತ ಮತ್ತು ಭರತನಾಟ್ಯ ತರಗತಿಗಳನ್ನು ನಡೆಸಲಾಗುತ್ತದೆ.

ಇಂದಿರಾನಗರದಲ್ಲಿ 1990ರಲ್ಲಿ ಆರಂಭವಾದ ಶ್ರೀರಂಗ ಸಂಗೀತ ಕಲಾಕ್ಷೇತ್ರ ಕಳೆದ 23 ವರ್ಷಗಳಿಂದ ಸಂಗೀತ ಕಲಿಸುತ್ತಾ ಬಂದಿದೆ. ಇಲ್ಲಿ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ, ವೀಣೆ, ಮೃದಂಗ, ಪಿಟೀಲು, ಗಿಟಾರ್, ಮ್ಯಾಂಡೋಲಿನ್, ಕೊಳಲು, ಸಿತಾರ್, ತಬಲಾ, ಶ್ಲೋಕಗಳನ್ನು ಕಲಿಸಲಾಗುತ್ತದೆ. ವಾರಾಂತ್ಯದಲ್ಲಿ ಎರಡು ದಿನ ಭರತನಾಟ್ಯ ತರಗತಿಗಳೂ ನಡೆಯುತ್ತವೆ. ನಾಲ್ಕು ವರ್ಷದ ಪುಟಾಣಿಗಳಿಂದ ಹಿಡಿದು 60 ವರ್ಷದವರೆಗಿನ ಶಿಷ್ಯರು ಇಲ್ಲಿ ಸಂಗೀತ ಕಲಿಯುತ್ತಿದ್ದಾರೆ.

ವಿದುಷಿ ಸರಸ್ವತಿ ರಂಗನಾಯಕುಲು ಈ ಸಂಗೀತ ಶಾಲೆಯ ಮುಖ್ಯಸ್ಥೆ. ಸುಮಾರು 50ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಗಾಯನ-ವಾದನ ಕಲಿಯುತ್ತಿದ್ದಾರೆ. ವಿದ್ವಾನ್ ಎನ್. ವಾಸುದೇವ ರಾವ್ ಮೃದಂಗ, ವಿದುಷಿ ಉಮಾ ಹಾಡುಗಾರಿಕೆ, ವೀಣೆ, ಕೀಬೋರ್ಡ್ ಕಲಿಸುತ್ತಾರೆ. ವಿದ್ವಾನ್ ಕೆ.ಸಿ.ಜಯರಾಂ ಪಿಟೀಲು, ಗಿಟಾರ್, ಮ್ಯಾಂಡೋಲಿನ್ ಕಲಿಸುವರು. ಹಾಗೆಯೇ ವಿದ್ವಾನ್ ರಂಗನಾಯಕುಲು ಅವರು ಭರತನಾಟ್ಯ ಹೇಳಿಕೊಡುತ್ತಾರೆ.

ಹಾಗೆ ನೋಡಿದರೆ ಸಂಸ್ಥೆಯ ರೂವಾರಿ ಸರಸ್ವತಿ ಅವರು ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದವರು. ಸಂಗೀತದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಕೆಲಸ ಬಿಟ್ಟು ಸಂಗೀತ ಶಾಲೆ ಆರಂಭಿಸಿದರು. ವಿದುಷಿ ಸರಸ್ವತಿ ಅವರು ಸಂಗೀತವನ್ನು ವಿದುಷಿ ಕೆ.ಬಿ. ಕಾತ್ಯಾಯಿನಿ ಅವರಲ್ಲಿ ಕಲಿತು, ಮೃದಂಗವನ್ನು ಎಸ್.ವಿ.ಗಿರಿಧರ್ ಅವರಲ್ಲಿ ಅಭ್ಯಾಸ ಮಾಡಿದವರು. ಜತೆಗೆ ವೀಣೆ, ಕೀಬೋರ್ಡ್ ಕೂಡ ಕಲಿತು ಇವೆಲ್ಲವನ್ನೂ ಈಗ ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ.

ಮಕ್ಕಳಿಗೆ ಎಳವೆಯಲ್ಲೇ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಮೂಡಿಸಲು ಸರಸ್ವತಿ ಅವರೇ ಪುಟಾಣಿಗಳಿಗೆ ಶ್ಲೋಕ, ದೇವರನಾಮ, ಸ್ತ್ರೋತ್ರಗಳನ್ನು ಕಲಿಸುತ್ತಾರೆ. ಇಲ್ಲಿ ಪ್ರತ್ಯೇಕ ಪಾಠವೂ ಲಭ್ಯ. ಕೆಲವೊಂದು ಪಾಠಗಳನ್ನು ಗುಂಪಿನಲ್ಲೂ ಹೇಳಿಕೊಡಲಾಗುತ್ತದೆ. ಇಲ್ಲಿ ಸಂಗೀತ ಕಲಿತ ಮಂಜುಳಾ ಉಡುಪ, ವನಿತಾ (ವೀಣೆ) ರಂಗನಾಥ್, ಜೆ. ಪವನ್‌ಕುಮಾರ್ (ಮೃದಂಗ), ಶ್ರೀನಿವಾಸನ್, ಶಶಿ (ಪಿಟೀಲು), ಸೌಪರ್ಣ ಮುಂತಾದವರು ಸಂಗೀತದಲ್ಲಿ ಛಾಪು ಮೂಡಿಸುತ್ತಿದ್ದಾರೆ.

ಬದಲಾವಣೆಯ ಬಿಸಿ

`ಕಾಲ ಬದಲಾಗಿದೆ. ಈ ಬದಲಾವಣೆಯ ಗಾಳಿ ಸಂಗೀತ ಕ್ಷೇತ್ರಕ್ಕೂ ಬೀಸಿದೆ. ಸಂಗೀತದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುವಂತೆ ಜನರ ಅದರಲ್ಲೂ ಮಕ್ಕಳ ಅಭಿರುಚಿಯೂ ಆಧುನಿಕತೆಯತ್ತ ಹೊರಳಿದೆ. ಈಗ ಮಕ್ಕಳು ಹೆಚ್ಚು ಹೆಚ್ಚು ಪಾಶ್ಚಾತ್ಯ ಸಂಗೀತ, ಸಿನಿಮಾ ಸಂಗೀತದತ್ತಲೇ ಒಲವು ತೋರಿಸುತ್ತಿದ್ದಾರೆ. ಹೀಗಾಗಿ ನಿಜವಾಗಿ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಇರುವ ಮಕ್ಕಳು, ಪೋಷಕರು ಮಾತ್ರ ಸಾಂಪ್ರದಾಯಿಕ ಸಂಗೀತ ಕಲಿಯಲು ಬರುತ್ತಾರೆ' ಎಂದು ಹೇಳುತ್ತಾರೆ ವಿದುಷಿ ಸರಸ್ವತಿ.

`ಸುಮಾರು 20 ವರ್ಷಗಳಷ್ಟು ಹಿಂದಿನ ಶಾಸ್ತ್ರೀಯ ಸಂಗೀತ ಕಲಿಕೆಯನ್ನು ನೋಡಿದರೆ, ಆಗ ಸಂಗೀತ ಕಲಿಯುವ ಆಸಕ್ತರ ಸಂಖ್ಯೆ ಕಡಿಮೆ ಇತ್ತು. ಸಂಗೀತ ವಾದ್ಯಗಳೂ ಅಷ್ಟಾಗಿ ಪ್ರಚಲಿತದಲ್ಲಿರಲಿಲ್ಲ. ಸಂಗೀತ ಶಾಲೆಗಳ ಸಂಖ್ಯೆಯೂ ಬಹಳ ಕಡಿಮೆ ಇತ್ತು. ಈಗ ಹೊಸ ಹೊಸ ವಾದ್ಯಗಳೂ ಪರಿಚಯವಾದವು. ಮಕ್ಕಳೂ ಒಲವು ತೋರಿಸಲಾರಂಭಿಸಿದರು. ಹೀಗಾಗಿ ಮೊದಲು ಗಾಯನ, ವೀಣೆ, ಪಿಟೀಲು, ಮೃದಂಗ ಮಾತ್ರ ಕಲಿಸುತ್ತಿದ್ದ ನಮ್ಮ ಸಂಸ್ಥೆಯಲ್ಲಿ ಈಗ ಗಿಟಾರ್, ಮ್ಯಾಂಡೋಲಿನ್, ಕೀಬೋರ್ಡ್ ಕಲಿಸಲು ಆರಂಭಿಸಿದೆವು. ಈ ವಾದ್ಯಗಳಲ್ಲಿ ಮಕ್ಕಳ ಉತ್ಸಾಹ, ಆಸಕ್ತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ' ಎಂದು ಹಳೆಯ ಮತ್ತು ಇಂದಿನ ಸಂಗೀತ ಪದ್ಧತಿಯನ್ನು ತುಲನಾತ್ಮಕವಾಗಿ ವಿವರಿಸುತ್ತಾರೆ ಅವರು.

ಶಾಸ್ತ್ರೀಯ ಸಂಗೀತ ಪ್ರಚಾರಕ್ಕಾಗಿ ಮನೆ ಮನೆಗೆ ಹೋಗಿ ದೇವರನಾಮ ಹೇಳಿಕೊಡುತ್ತಿದ್ದೆ. ಸಮಾನ ಮನಸ್ಕರು ಸೇರಿ ಹಬ್ಬಹರಿದಿನಗಳಂದು ಗಾಯನ ಗೋಷ್ಠಿ ಏರ್ಪಡಿಸಿ ಹಾಡುತ್ತಿದ್ದೆವು. ತ್ಯಾಗರಾಜರ, ಪುರಂದರ ದಾಸರ ಆರಾಧನೆಗಳನ್ನು ಒಂದು ವಾರ ಪೂರ್ತಿ ಆಚರಿಸುತ್ತಿದ್ದೆವು. ದೊಡ್ಡ ದೊಡ್ಡ ವಿದ್ವಾಂಸರನ್ನು ಕರೆಸಿ ವೇದಿಕೆ ಒದಗಿಸುತ್ತಿದ್ದೆವು. ಆದರೆ ಈಗ ತ್ಯಾಗರಾಜರ ಆರಾಧನೆಯನ್ನು ಒಂದು ದಿನದ ಮಟ್ಟಿಗೆ ಮಾತ್ರ ಮಾಡುತ್ತೇವೆ. ಇಲ್ಲಿ ಮಕ್ಕಳಿಗೆ ಹಾಡಲು ವೇದಿಕೆ ಒದಗಿಸುತ್ತೇವೆ. ಪ್ರತಿ ವರ್ಷ ಆಗಸ್ಟ್‌ನಲ್ಲಿ ಸಂಗೀತ ಶಾಲೆಯ ವಾರ್ಷಿಕೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹರಿದಾಸ ಉತ್ಸವವೂ ನಡೆಯುತ್ತದೆ ಎಂದು ಹೇಳುತ್ತಾರೆ ಈ ವಿದುಷಿ.

ವಿಳಾಸ: ವಿದುಷಿ ಸರಸ್ವತಿ ರಂಗನಾಯಕುಲು, ಶ್ರೀರಂಗ ಸಂಗೀತ ಕಲಾಕ್ಷೇತ್ರ, ನಂ. 6, ಕೆಎಚ್‌ಬಿ ಮೊದಲ ಬ್ಲಾಕ್, 13ನೇ ಕ್ರಾಸ್, ಇಂದಿರಾನಗರ ಎರಡನೆ ಹಂತ, ಬೆಂಗಳೂರು-38.

ಫೋನ್: 080-25202359/ 9880380858ಮೃದಂಗದಲ್ಲಿ ಸಾಧಿಸುವ ಹಂಬಲ

ಮೃದಂಗದ ನಾದ ಕೇಳಲು ಇಂಪು. ಈ ಅವನದ್ಧ ವಾದ್ಯದಲ್ಲಿ ಹಿಡಿತ ಸಾಧಿಸುವುದು ಸುಲಭವೇನಲ್ಲ. ನಿರಂತರ ಅಭ್ಯಾಸ ನಿರೀಕ್ಷಿಸುತ್ತದೆ ಈ ವಾದ್ಯ ಎನ್ನುತ್ತಾರೆ ಇದೇ ಸಂಗೀತ ಶಾಲೆಯಲ್ಲಿ ಮೃದಂಗ ಕಲಿಯುತ್ತಿರುವ ಜೆ. ಪವನ್‌ಕುಮಾರ್. ವಿದ್ವಾನ್ ಎನ್.ವಾಸುದೇವರಾವ್ ಅವರ ಬಳಿ ಇಲ್ಲಿ ಮೃದಂಗ ಕಲಿಯುತ್ತಿದ್ದು, ಪವನ್ ಮೃದಂಗದಲ್ಲಿ ಜೂನಿಯರ್ ಪರೀಕ್ಷೆ ಪಾಸು ಮಾಡಿದ್ದಾರೆ. ಬಿಎಸ್‌ಸಿ ಪದವೀಧರರಾಗಿರುವ ಇವರು, ಸದ್ಯ ಸ್ಪರ್ಧಾತ್ಮಕ ಪರೀಕ್ಷೆ (ಯುಪಿಎಸ್‌ಸಿ) ತಯಾರಿಯಲ್ಲಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ಮೃದಂಗ ಕಲಿಯುತ್ತಿರುವ ಪವನ್‌ಗೆ ಈ ವಾದ್ಯದಲ್ಲಿ ಮತ್ತಷ್ಟು ಪರಿಣತಿ ಸಾಧಿಸುವ ಆಸೆ.

-ಜೆ. ಪವನ್‌ಕುಮಾರ್, ಮೃದಂಗ ವಿದ್ಯಾರ್ಥಿ

ಒತ್ತಡ ನಿವಾರಣೆಗೆ ಪಿಟೀಲು ಕಲಿಕೆ..

`ನಾನು ಪಿಟೀಲು ಕಲಿಯಲು ಆರಂಭಿಸಿದ್ದು ಮಾನಸಿಕ ಒತ್ತಡ ನಿವಾರಣೆಗಾಗಿಯೇ' ಎಂದು ಹೇಳುತ್ತಾರೆ ಇದೇ ಸಂಗೀತ ಶಾಲೆಯ ವಿದ್ಯಾರ್ಥಿ ಶಶಿ.

`ಪಿಟೀಲು ನುಡಿಸುವುದರಿಂದ ಮನಸ್ಸು ಹಗುರವಾಗುತ್ತದೆ. ಕೆಲಸದ ಏಕತಾನತೆ ಮರೆತು ಹೊಸ ಹುರುಪು ಬರುತ್ತದೆ. ಎಷ್ಟೋ ಸಲ ಕೆಲಸದಲ್ಲಿ ಒತ್ತಡ ಹೆಚ್ಚಿದಾಗ ನನ್ನ ನೆರವಿಗೆ ಬಂದದ್ದು ಪಿಟೀಲು' ಎನ್ನುತ್ತಾರೆ ಇಂಟೆಲ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುವ ಆಂಧ್ರ ಮೂಲದ ಈ ಸಂಗೀತ ವಿದ್ಯಾರ್ಥಿ.

ಕಳೆದ ಏಳು ವರ್ಷಗಳಿಂದ ಶಶಿ, ಶ್ರೀರಂಗ ಸಂಗೀತ ಶಾಲೆಯಲ್ಲಿ ಪಿಟೀಲು ಅಭ್ಯಾಸ ಮಾಡುತ್ತಿದ್ದು, ಎರಡು-ಮೂರು ಕಛೇರಿಗಳನ್ನೂ ಕೊಟ್ಟಿದ್ದಾರೆ. ವಾರದಲ್ಲಿ ಎರಡು ಕ್ಲಾಸ್ ಪಿಟೀಲು ಪಾಠ ಹೇಳಿಸಿಕೊಳ್ಳುವ ಇವರು, ಸಂಗೀತ-ವೃತ್ತಿ ಎರಡರಲ್ಲೂ ಸಾಧಿಸಬೇಕು ಎನ್ನುವ ಆಕಾಂಕ್ಷೆ ನನ್ನದು ಎನ್ನುತ್ತಾರೆ.

- ಶಶಿ, ಪಿಟೀಲು ವಿದ್ಯಾರ್ಥಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.