`ಸಂಸ್ಕೃತಿಯ ಅರಿವಿಲ್ಲದೆ ಯುವಜನ ಜಡ'

7
ರಾಜ್ಯ ಮಟ್ಟದ ಯುವ ಪ್ರಶಸ್ತಿ ಪ್ರದಾನ

`ಸಂಸ್ಕೃತಿಯ ಅರಿವಿಲ್ಲದೆ ಯುವಜನ ಜಡ'

Published:
Updated:

ಶಿವಮೊಗ್ಗ: ಯುವಕರಲ್ಲಿ ನಮ್ಮ ಗ್ರಾಮೀಣ ಸಂಸ್ಕೃತಿ ಬಗ್ಗೆ ತಿಳಿವಳಿಕೆ ಮೂಡಿಸಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಯುವಜನ ಮೇಳಗಳು ಸಹಕಾರಿಯಾಗಿವೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.ನಗರದ ಕುವೆಂಪು ರಂಗಮಂದಿರದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಮ್ಮಿಕೊಂಡಿರುವ 2011-12ನೇ ಸಾಲಿನ ರಾಜ್ಯಮಟ್ಟದ ಮೂರು ದಿನಗಳ ಯುವಜನ ಮೇಳ ಹಾಗೂ 2010-11ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಯುವಜನತೆ ನಮ್ಮ ಸಂಸ್ಕೃತಿಯ ಬೇರನ್ನು ಮರೆತಿದೆ. ಸಂಸ್ಕೃತಿಕ ಬೇರುಗಳು ಒಣಗುತ್ತಿರುವುದರಿಂದ ಯುವಜನತೆಯಲ್ಲಿ ಜಡತೆ ಕಾಣುತ್ತಿದೆ.ಟಿ.ವಿ., ಸಿನಿಮಾದಂತಹ ಮಾಧ್ಯಮಗಳ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ, ಸಂಪ್ರದಾಯಗಳ ಪ್ರತೀಕವಾದ ಆಟಗಳು, ಜಾನಪದ ಕಲೆಗಳು ನಶಿಸುವ ಹಾದಿಯಲ್ಲಿವೆ. ಇಂತಹ ಸಂದರ್ಭದಲ್ಲಿ ಜಾನಪದ ಕಲೆಗಳನ್ನು ಕಾಣುವ ಅವಕಾಶ ಇಲ್ಲಿ ಸಾಧ್ಯವಾಗಿದೆ ಎಂದರು.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಯುವಜನರಿಗೆ ರಾಷ್ಟ್ರಭಕ್ತಿ ಮೂಡಿಸಿ, ಯುವಶಕ್ತಿಯನ್ನು ರಾಷ್ಟ್ರಶಕ್ತಿಯನ್ನಾಗಿ ಪರಿವರ್ತಿಸುವ ಕಾರ್ಯ ಮಾಡಬೇಕು. ಆದ್ದರಿಂದ ಯುವನೀತಿ ರೂಪಿಸಲಾಗಿದೆ. ಇದೇ ರೀತಿ ಕ್ರೀಡೆಗೆ ಸಂಬಂಧಿಸಿದಂತೆ ಕ್ರೀಡಾನೀತಿ ರೂಪಿಸಲಾಗುವುದು ಎಂದರು.ಸಮಾರಂಭದಲ್ಲಿ ಶಿವಕುಮಾರಸ್ವಾಮಿ (ಬೀದರ್), ವಿ. ಪ್ರಕಾಶ್ (ಬೆಂಗಳೂರು), ಸಂಜೀವ ಶಿವಲಿಂಗ ಖೋತ (ವಿಜಾಪುರ), ನಿಸರ್ಗ (ಬೆಂಗಳೂರು), ಎಂ. ವೀರೇಶ್ (ರಾಯಚೂರು), ಕೆ. ಭೀಮಪ್ಪ (ಬೆಂಗಳೂರು), ಮಿಲಿಂಧ್ರ ಸಂಗಣ್ಣನವರ್ (ಬೆಳಗಾವಿ), ಟಿ.ಎಂ. ನಾಗರಾಜು (ಮಂಡ್ಯ), ಎನ್. ವಿಜಯಲಕ್ಷ್ಮೀ (ತುಮಕೂರು), ಎಂ.ಪಿ. ಅಣ್ಣಪ್ಪ (ಶಿವಮೊಗ್ಗ) ಅವರುಗಳು ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡರು.ಸಾಂಘಿಕ ವಿಭಾಗದಲ್ಲಿ ಪತಂಜಲಿ ಯುವಕ ಮಂಡಳಿ (ಶಿವಮೊಗ್ಗ), ಬ್ರಹ್ಮ ಲಿಂಗೇಶ್ವರ ಯುವತಿ ಮಂಡಳಿ (ಬೆಳಗಾವಿ) `ಸ್ವಾಮಿ ವಿವೇಕಾನಂದ ಪ್ರಶಸ್ತಿಗಳನ್ನು ನೀಡಿ  ಗೌರವಿಸಲಾಯಿತು.ಯುವಜನ ಸೇವೆ ಹಾಗೂ ಕ್ರೀಡಾ ಖಾತೆ ಸಚಿವ ಅಪ್ಪಚ್ಚು ರಂಜನ್ ಸಾಧನಾ ಸಂಚಿಕೆ ಬಿಡುಗಡೆ ಮಾಡಿದರು.ಇದಕ್ಕೂ ಮುನ್ನ ನಗರದ ಸೈನ್ಸ್ ಕಾಲೇಜು ಮೈದಾನದಿಂದ ನಡೆದ ಶೋಭಾಯಾತ್ರೆಯಲ್ಲಿ ಮಹಿಳಾ ಡೊಳ್ಳು ಕುಣಿತ, ವೀರಗಾಸೆ, ತಮಟೆ ವಾದನದ ತಂಡಗಳು ಪಾಲ್ಗೊಂಡು ಮೆರುಗು ನೀಡಿದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry