`ಸಂಸ್ಕೃತಿ ಉಳಿಸಲು ಮಹಿಳೆ ಪಾತ್ರ ಅನನ್ಯ'

7

`ಸಂಸ್ಕೃತಿ ಉಳಿಸಲು ಮಹಿಳೆ ಪಾತ್ರ ಅನನ್ಯ'

Published:
Updated:

ಚಿಕ್ಕಮಗಳೂರು: ದೇಶದ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿ ಉಳಿಸಲು ಮಹಿಳೆಯರ ಪಾತ್ರ ಅತಿಮುಖ್ಯ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಭ್ರಷ್ಟರಾಗದಂತೆ ತಡೆಯಲು ಮಹಿಳೆಯರು ಮುಂದಾಗಬೇಕು ಎಂದು ಮಕ್ಕಳ ತಜ್ಞ ಡಾ.ಜೆ.ಪಿ. ಕೃಷ್ಣೇಗೌಡ ತಿಳಿಸಿದರು.ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ 8ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.ಬಾಲಗಂಗಾಧರನಾಥ ಸ್ವಾಮೀಜಿಯವರು ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಿ ಸಮಾಜಕ್ಕೆ ಆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದರುಆಧುನಿಕ ಯುಗದಲ್ಲಿ ಮಹಿಳೆಯರು ಫ್ಯಾಷನ್‌ಗೆ ಮೊರೆಹೋಗಿ ಸಂಸ್ಕೃತಿ ಮರೆಯುತ್ತಿರುವುದು ದುರದೃಷ್ಟಕರ ಬೆಳವಣಿಗೆ. ದೇಶದ ಸಂಸ್ಕೃತಿ ಉಳಿಸಿ ಮಾಂಗಲ್ಯ ಹಾಗೂ ಇತರೆ ಕುಂಕುಮ, ಬಳೆ, ಆಭರಣಗಳ ಮಹತ್ವದ ಬಗ್ಗೆ ತಿಳಿದು ಅವುಗಳನ್ನು ಗೌರವಿಸಬೇಕು. ಗೌರಮ್ಮ ಬಸವೇಗೌಡ ರಾಜ್ಯಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸುಬ್ಬಮ್ಮ ಅವರು ನಾನು ವೈದ್ಯನಾಗಲು ಮುಖ್ಯ ಕಾರಣಕರ್ತರು. ಮಹಿಳೆಯರು ಗುರಿ ಮುಟ್ಟಲು ಛಲದಿಂದ ಸಾಧಿಸಬೇಕು ಎಂದರು.ಸಾಹಿತಿ ಮತ್ತು ಪ್ರಗತಿಪರ ರೈತರಾದ ಹಳೇಕೋಟೆ ರಮೇಶ್ ಮಾತನಾಡಿ, ಮಹಿಳೆಯರು ಹಿಂದಿನ ಕಾಲದಲ್ಲಿ ಕೃಷಿ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡು ಅತ್ಯಂತ ಜವಾಬ್ದಾರಿಯಿಂದ ಕೆಲಸ ಮತ್ತು ಕುಟುಂಬ ನಿರ್ವಹಿಸುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು. ಸಂಘ ಸಂಸ್ಥೆಗಳು ಮಹಿಳೆಯರು ತಮ್ಮಲ್ಲಿರುವ ಪ್ರತಿಭೆ ಅನಾವರಣ ಮಾಡಲು ಉತ್ತಮ ವೇದಿಕೆಯಾಗಿದೆ ಎಂದರು.ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಡಿ.ಎಲ್.ರಾಜಶ್ರೀ ಮಾತನಾಡಿ, ಸಂಘದಲ್ಲಿ 1800ಕ್ಕೂ ಹೆಚ್ಚು ಸದಸ್ಯರಿದ್ದು, ಪ್ರತಿಯೊಂದು ಕಾರ್ಯಕ್ರಮಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಸಂಘದಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜತೆಗೆ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದರು.ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷೆ ಕನಕ ವೀರೇಶ್, ನಿರ್ದೇಶಕರಾದ ಪೂರ್ಣಿಮಾ ದಿನೇಶ್, ಕಮಲಾ ರಘು, ಕಲ್ಪನಾ ಪ್ರದೀಪ್, ಹೇಮಾ ಜಗದೀಶ್, ಸುನಂದ ರಘುನಾಥ್, ಶಶಿ ಮಲ್ಲೇಶ್, ಜಮುನಾ ಲೋಕಪ್ಪ, ಸಾವಿತ್ರಿ ಸುರೇಶ್, ಸುಷ್ಮಾ ನರೇಂದ್ರ, ದೇವಕಿ, ಸಂಘದ ಕಾರ್ಯದರ್ಶಿ ಆರತಿ ನಾರಾಯಣ್, ನಿರ್ದೇಶಕರಾದ ಪ್ರಮೀಳ ವಸಂತ್, ಉಪಾಧ್ಯಕ್ಷರಾದ ಪೂರ್ಣಿಮಾ ಉಮೇಶ್, ಕಮಲಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry