ಮಂಗಳವಾರ, ಅಕ್ಟೋಬರ್ 15, 2019
26 °C

ಸಂಸ್ಕೃತಿ ಉಳಿಸಲು ಯುವಕರು ಟೊಂಕ ಕಟ್ಟಿ ನಿಲ್ಲಲಿ

Published:
Updated:

ಬೀದರ್: ದೇಶದ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ಯುವಕರು ಟೊಂಕಕಟ್ಟಿ ನಿಲ್ಲಬೇಕು ಎಂದು ಶಿವಯೋಗೀಶ್ವರ ಸ್ವಾಮೀಜಿ ಸಲಹೆ ಮಾಡಿದರು. ನಗರದಲ್ಲಿ ಸೋಮವಾರ ನಡೆದ ವಿವೇಕಾನಂದ ಜ್ಯೋತಿ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಭಾರತೀಯ ಸಂಸ್ಕೃತಿ ಅವನತಿಯತ್ತ ಸಾಗುತ್ತಿದೆ. ಹೀಗಾಗಿ ದೇಶಿಯ ಸಂಸ್ಕೃತಿಯನ್ನು ಸಂರಕ್ಷಿಸಬೇಕಾದ ಅಗತ್ಯವಿದೆ ಎಮದು ಹೇಳಿದರು. ರಾಜಕಾರಣಿಗಳಿಂದ ದೇಶದ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲ. ಯುವ ಜನಾಂಗ ಜಾಗೃತವಾದರೆ ಮಾತ್ರ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದು ನುಡಿದರು.ಭವಿಷ್ಯ ಪಂಚಾಗದಲ್ಲಿಲ್ಲ. ನಮ್ಮ ಅಂಗೈಯಲ್ಲಿಯೇ ಇದೆ. ಇದನ್ನು ಯುವಕರು ಅರಿತುಕೊಳ್ಳಬೇಕು ಎಂದು ಹೇಳಿದರು. ಸ್ವಾಮಿ ವಿವೇಕಾನಂದರ ತತ್ವಗಳಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಭಾರತ ಜಾಗೋ ಸಂಚಾಲಕ ಸೂಲಿಬೆಲೆ ಚಕ್ರವರ್ತಿ ಅಭಿಪ್ರಾಯಪಟ್ಟರು. ವಿವೇಕಾನಂದರ ಉಕ್ತಿಗಳೇ ಸುಭಾಷಚಂದ್ರ ಬೋಸ್ ಹಾಗೂ ಸೈನ್ಯದಲ್ಲಿ ಚಾಲಕರಾಗಿದ್ದ ಅಣ್ಣಾ ಹಜಾರೆ ಅವರ ವ್ಯಕ್ತಿತ್ವವನ್ನು ಬದಲಿಸಿವೆ ಎಂದರು.ವಿವೇಕಾನಂದರ ಜಯಂತಿ ಪ್ರಯುಕ್ತ ಆರಂಭಿಸಿರುವ ಜ್ಯೋತಿ ಯಾತ್ರೆ 30 ದಿನಗಳಲ್ಲಿ ರಾಜ್ಯದ 29 ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ವಿವೇಕಾನಂದರ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವುದೇ ಯಾತ್ರೆಯ ಉದ್ದೇಶವಾಗಿದೆ ಎಂದು ತಿಳಿಸಿದರು. ವಿವೇಕಾನಂದರ ತತ್ವಗಳು ಸಮಾಜಕ್ಕೆ ಮಾರ್ಗದರ್ಶಿ ಆಗಿವೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ನುಡಿದರು.ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ ಬಸವರಾಜ ಪಾಟೀಲ್ ಸೇಡಂ, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ, ರಾಮಕೃಷ್ಣ ಮಿಷನ್ ಅಧ್ಯಕ್ಷ ಜಿತಕಾನಂದ ಸ್ವಾಮೀಜಿ, ತದ್ಯುಕ್ತಾನಂದ ಸ್ವಾಮೀಜಿ, ವಿಶೇಷಾನಂದ ಸ್ವಾಮೀಜಿ, ಶಾಸಕ ರಹೀಮ್‌ಖಾನ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಮದಕಟ್ಟಿ, ಸ್ವಾಗತ ಸಮಿತಿಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಉಪಾಧ್ಯಕ್ಷ ಬಸವರಾಜ ದೇಶಮುಖ, ಪ್ರಧಾನ ಕಾರ್ಯದರ್ಶಿ ಸುರೇಶ ಚನಶೆಟ್ಟಿ, ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ಧಪ್ಪ ಜಲಾದೆ, ಪ್ರಮುಖರಾದ ಡಾ. ಬಸವರಾಜ ಪಾಟೀಲ್ ಅಷ್ಟೂರು, ನಾರಾಯಣರಾವ ಮುಖೇಡಕರ್, ಅಬ್ದುಲ್ ಖದೀರ್, ಪೂರ್ಣಿಮಾ ಜಾರ್ಜ್, ಕಲಾವತಿ ಜೋಶಿ ಉಪಸ್ಥಿತರಿದ್ದರು. ವಿಕಾಸ ಅಕಾಡೆಮಿ ಹಾಗೂ ಶಿಕ್ಷಣ ಸಂಸ್ಥೆಗಳ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಜ್ಯೋತಿಯಾತ್ರೆಯ ನಿಮಿತ್ತ ಬೆಳಿಗ್ಗೆ ನಗರದ ಬೊಮ್ಮಗೊಂಡೇಶ್ವರ ವೃತ್ತದಿಂದ ಕರ್ನಾಟಕ ಫಾರ್ಮಸಿ ಕಾಲೇಜುವರೆಗೆ ಶೋಭಾಯಾತ್ರೆ ನಡೆಯಿತು.

Post Comments (+)