ಸಂಸ್ಕೃತ ಅಧ್ಯಯನವೂ ಅಗತ್ಯ: ಮಲ್ಲೇಪುರಂ

ಭಾನುವಾರ, ಜೂಲೈ 21, 2019
26 °C

ಸಂಸ್ಕೃತ ಅಧ್ಯಯನವೂ ಅಗತ್ಯ: ಮಲ್ಲೇಪುರಂ

Published:
Updated:

ಕೊಪ್ಪಳ: ದಲಿತ ಸಾಹಿತ್ಯ ರಚನೆಯಲ್ಲಿ ತೊಡಗಿರುವವರು ಕೇವಲ ಕನ್ನಡಕ್ಕೆ ಅಂಟಿಕೊಳ್ಳದೇ ಸಂಸ್ಕೃತ ಸೇರಿದಂತೆ ಇತರ ಪ್ರಾಚೀನ ಭಾಷೆಗಳಲ್ಲಿನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ ಅಭಿಪ್ರಾಯಪಟ್ಟರು.ಅವರು ನಗರದ ಸಾಹಿತ್ಯ ಭವನದಲ್ಲಿ ಭಾನುವಾರ 3ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಗೌರವ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಕನ್ನಡ ಸಾಹಿತ್ಯದ ಜೊತೆಗೆ, ಸಂಸ್ಕೃತ, ಪ್ರಾಕೃತ, ಪಾಲಿ ಭಾಷೆಗಳಲ್ಲಿ ಸಾಹಿತ್ಯವನ್ನು ಅಧ್ಯಯನ ಮಾಡುವುದು ಅಗತ್ಯ. ಬೌದ್ಧ ಧರ್ಮದ ಬಹುತೇಕ ಸಾಹಿತ್ಯ ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳಲ್ಲಿದೆ. ಈ ಹಿನ್ನೆಲೆಯಲ್ಲಿ ದಲಿತ ಸಾಹಿತ್ಯ ಕೃಷಿಯಲ್ಲಿ ತೊಡಗಿರುವವರು, ಅದರಲ್ಲೂ ಬೌದ್ಧ ಧರ್ಮದ ತಿರುಳನ್ನು ತಿಳಿದುಕೊಳ್ಳಬೇಕು ಎಂಬುವವರು ಸಂಸ್ಕೃತ ಕಲಿಯುವುದು ಅಗತ್ಯ ಎಂದು ಪುನರುಚ್ಚರಿಸಿದರು.ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ, ಪ್ರಸ್ತುತ ಸನ್ನಿವೇಶದಲ್ಲಿ ದಲಿತ  ಸಂಘಟನೆಗಳು ಹಲವಾರು ಬಣಗಳಾಗಿದ್ದರೂ, ಸೈದ್ಧಾಂತಿಕವಾಗಿ ಎಲ್ಲ ಗುರಿ ಒಂದೇ ಆಗಿದೆ ಎಂದರು.ಆದರೆ, ಬಣಗಳಾಗಿರುವ ಹಿನ್ನೆಲೆಯಲ್ಲಿ ಸಂಘಟನೆಗಳು ನಡೆಸುವ ಹೋರಾಟಗಳು ನಿರೀಕ್ಷಿತ ಫಲ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಎಲ್ಲಾ ಬಣವನ್ನು ಒಂದುಗೂಡಿಸಿ, ಹೋರಾಟದ ಮುಂಚೂಣಿಯಲ್ಲಿ ನಿಲ್ಲಬಲ್ಲ ಸಮರ್ಥ ನಾಯಕತ್ವದ ಇಂದಿನ ತುರ್ತು ಅಗತ್ಯ ಎಂದು ಹೇಳಿದರು.ಸಾಮಾಜಿಕ ಕಾರ್ಯಕರ್ತ ಡಾ.ಭೀಮರಾವ್ ಗಸ್ತಿ ಅವರಿಗೆ ದಲಿತ ಚೇತನ ಹಾಗೂ ಪತ್ರಕರ್ತ ಪ.ಶಿ.ದೊಡ್ಡಮನಿ ಅವರಿಗೆ ದಲಿತ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ರಾಯಬಾಗದ ಕನ್ನಡ ಉಪನ್ಯಾಸಕ ಡಾ.ವೈ.ಬಿ.ಹಿಮ್ಮಡಿ, ಸಾಹಿತಿ ವೆಂಕಟಯ್ಯ ಅಪ್ಪಗೆರೆ, ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು. ಬ್ರಹದ್ದೇಶಿ ಪ್ರಶಸ್ತಿ ಪುರಸ್ಕೃತ ಖ್ಯಾತ ಕಲಾವಿದೆ ಬುರ‌್ರಕಥಾ ಈರಮ್ಮ ಹಾಡೊಂದನ್ನು ಪ್ರಸ್ತುತಪಡಿಸಿದರು.ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಕಾವ್ಯ, ನಾಟಕ, ಕತೆ, ಜೀವನ ಚರಿತ್ರೆ, ಆತ್ಮಕತೆ, ಸಂಶೋಧನೆ, ವಿಮರ್ಶೆ, ವೈಚಾರಿಕ, ಅನುವಾದ ಹಾಗೂ ಲೇಖಕರ ಮೊದಲ ಕೃತಿ ವಿಭಾಗದಲ್ಲಿ ಪುಸ್ತಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.‘ದಲಿತ ಅಭಿವೃದ್ಧಿ ಪ್ರಾಧಿಕಾರ ರಚಿಸಿ’

ಕೊಪ್ಪಳ: ಎಲ್ಲ ದಲಿತ ಸಮುದಾಯಗಳ ಏಕತೆ ಹಾಗೂ ಸಾಂಸ್ಕೃತಿಕ ಅವಶ್ಯಕತೆಯನ್ನು ಪರಿಗಣಿಸಿದ ರಾಜ್ಯದಲ್ಲಿ ದಲಿತ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಬೇಕು ಎಂಬುದು ಸೇರಿದಂತೆ ಮೂರು ಪ್ರಮುಖ ನಿರ್ಣಯಗಳನ್ನು ಭಾನುವಾರ ಇಲ್ಲಿ ಮುಕ್ತಾಯಗೊಂಡ 3ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಕೈಗೊಂಡಿದೆ.ಇಲ್ಲಿನ ಸಾಹಿತ್ಯ ಭವನದಲ್ಲಿ ಜರುಗಿದ ಸಮ್ಮೇಳನದ ಮುಕ್ತಾಯ ಸಮಾರಂಭದಲ್ಲಿ ಮಂಡಿಸಿದ ಈ ನಿರ್ಣಯಗಳನ್ನು ಸಮ್ಮೇಳನದ ಸರ್ವಾಧ್ಯಕ್ಷ ಡಾ,ಮೂಡ್ನಾಕೂಡು ಚಿನ್ನಸ್ವಾಮಿ ಸೇರಿದಂತೆ ಗಣ್ಯರು ಅನುಮೋದಿಸಿದರು.ಖಾಸಗಿ ಕೈಗಾರಿಕೋದ್ಯಮಗಳ ನೇಮಕಾತಿಯಲ್ಲಿ ದಲಿತರಿಗೆ ಮೀಸಲಾತಿ ಅನ್ವಯ ಉದ್ಯೋಗ ನೀಡಬೇಕು, ಶೈಕ್ಷಣಿಕ ರಂಗದಲ್ಲಿ ದಲಿತರ ಮೀಸಲಾತಿಗಳನ್ನು ಕಿತ್ತುಕೊಳ್ಳುವ ಹುನ್ನಾರಕ್ಕೆ ಸರ್ಕಾರ ಶಾಶ್ವತ ತಡೆ ಹಾಕಬೇಕು ಎಂಬ ಇತರ ಎರಡು ನಿರ್ಣಯಗಳನ್ನು ಸಹ ಸಮ್ಮೇಳನ ಕೈಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry