ಸಂಸ್ಕೃತ ಅಮೃತ ಭಾಷೆ

7

ಸಂಸ್ಕೃತ ಅಮೃತ ಭಾಷೆ

Published:
Updated:

ಹರಿಹರ: ‘ಸಂಸ್ಕೃತ ಅಮೃತ ಭಾಷೆ. ಸಾಮಾನ್ಯ ಜನರಲ್ಲಿ ಅದೊಂದು ಮೃತ ಭಾಷೆ ಎಂಬ ತಪ್ಪು ಗ್ರಹಿಕೆ ಮೂಡಿದೆ’ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀನಿಧಿ ಅಭಿಪ್ರಾಯಪಟ್ಟರು.ಎಸ್‌ಜೆವಿಪಿ ಸ್ವಾಯತ್ತ ಕಾಲೇಜಿನ ಸಭಾಂಗಣದಲ್ಲಿ ಸಂಸ್ಕೃತ ಭಾಷಾ ವಿಭಾಗದ ಆಶ್ರಯದಲ್ಲಿ ಸೋಮವಾರ ನಡೆದ ‘ಸಂಸ್ಕೃತ ಭಾಷೆ ಸಂಭಾಷಣೆ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.1981ರ ವರೆಗೂ ಸಂಸ್ಕೃತ ಭಾಷೆಯಲ್ಲಿ ಸಾಹಿತ್ಯ ರಚನೆಯಾಗಿದೆ. ನಂತರ, ಸಾಹಿತ್ಯ ರಚನೆಗಿಂತ ಸಂಭಾಷಣೆಗೆ ಹೆಚ್ಚಿನ ಮಹತ್ವ ನೀಡಲಾಯಿತು. ನಿರಂತರವಾಗಿ ಯಾವುದೇ ಭಾಷೆಯನ್ನು ಕೇಳುವುದರಿಂದ ಸಂಭಾಷಣೆ ಕಲಿಯುವುದು ಸುಲಭವಾಗುತ್ತದೆ. ಅಲ್ಲದೇ, ಸಂಸ್ಕೃತವನ್ನು ಬ್ರಾಹ್ಮಣರ ಭಾಷೆ ಎಂದು ಟೀಕೆ ಮಾಡುವರು, ಸಂಸ್ಕೃತ ಭಾಷೆಯ ಮೇರು ಕೃತಿಗಳಾದ ರಾಮಾಯಣ ಹಾಗೂ ಮಹಾಭಾರತ ರಚಿಸಿದ ವಾಲ್ಮೀಕಿ ಮತ್ತು ವ್ಯಾಸ ಮಹರ್ಷಿಗಳು ಬ್ರಾಹ್ಮಣರಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.ಸಂಸ್ಕೃತ ಭಾಷೆಯಲ್ಲಿ ಅತ್ಯುತ್ತಮ ಸಾಹಿತ್ಯ, ಮಹಾಕಾವ್ಯ, ತರ್ಕ, ವಿಜ್ಞಾನ, ಅಧ್ಯಾತ್ಮ, ಆಯುರ್ವೇದ ಇನ್ನು ಅನೇಕ ವಿಷಯಕ್ಕೆ ಸಂಬಂಧಿಸಿದ ಹಲವಾರು ಗ್ರಂಥಗಳ ರಚನೆಯಾಗಿದೆ. ಭಾರತ ದೇಶದ ಮೂಲ ಸಂಸ್ಕೃತಿ ಸಂಸ್ಕೃತ ಭಾಷೆಯಲ್ಲಿ ಅಡಕವಾಗಿದೆ. ಅದೇ ಕಾರಣದಿಂದಲೇ ಸಂಸ್ಕೃತಿಯನ್ನು ಬಿಂಬಿಸುವ ಭಾಷೆಗೆ ಸಂಸ್ಕೃತ ಎಂದು ನಾಮಕರಣ ಮಾಡಿದ್ದಾರೆ ಎಂದರು.ಕಾಲೇಜಿನ ಪ್ರಾಂಶುಪಾಲ ಎಚ್.ಎ. ಭಿಕ್ಷಾವರ್ತಿಮಠ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಸಂಸ್ಕೃತ ಭಾಷಾ ವಿಭಾಗದ ಉಪನ್ಯಾಸಕರಾದ ಎನ್.ಎಚ್. ಶಿವಗಂಗಮ್ಮ, ಸುಮಂಗಲಾ ಎನ್. ಭಟ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry