ಭಾನುವಾರ, ಮೇ 22, 2022
29 °C

ಸಂಸ್ಕೃತ ಅರಿಯದವರಿಂದ ಮಾತ್ರ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ:  ಸಂಸ್ಕೃತ ಅರಿಯುವ ಯೋಗ್ಯತೆ ಇಲ್ಲದವರು ವಿನಾಕಾರಣ ಸಂಸ್ಕೃತವನ್ನು ಟೀಕಿಸುತ್ತಾರೆ ಎಂದು ಆರೆಸ್ಸೆಸ್ ಕ್ಷೇತ್ರೀಯ ಪ್ರಚಾರಕ ನ. ಕೃಷ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಬಿ.ಬಿ. ರಸ್ತೆಯ ತುಂಗಾ ನದಿತೀರದಲ್ಲಿ ನಿರ್ಮಾಣಗೊಂಡ ಸಂಸ್ಕೃತ ಭವನವನ್ನು ಬುಧವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ಸಂಸ್ಕೃತ ಜಗತ್ತಿಗೆ ಮಾರ್ಗದರ್ಶನ ಮಾಡುವ ಭಾಷೆ. ಸಂಸ್ಕಾರವಿಲ್ಲದ, ವ್ಯಾವಹಾರಿಕ ಮನೋಭಾವವುಳ್ಳವರು ಅದನ್ನು ಮೃತಭಾಷೆ ಎನ್ನುತ್ತಾರೆ. ಸಂಸ್ಕೃತ ಅರಿಯುವ ಯೋಗ್ಯತೆ ಇಲ್ಲದವರು ಈ ರೀತಿ ಟೀಕೆ ಮಾಡುತ್ತಾರೆ ಎಂದು ಖಾರವಾಗಿ ಹೇಳಿದರು.ಜಗತ್ತು ವೇಗವಾಗಿ ಬೆಳೆಯುತ್ತಿದೆ. ಎಲ್ಲವೂ ಹಣದಿಂದಲೇ ನಡೆಯುತ್ತದೆ ಎಂಬ ಮನೋಭಾವ ಇದೆ. ಆದರೆ, ಹಣಕ್ಕಿಂತ ಸಂಸ್ಕಾರ ಮುಖ್ಯ ಎಂದ ಅವರು, ನಗರದ ಎಲ್ಲ ಬೀದಿಗಳಲ್ಲಿ ಸಂಸ್ಕೃತ ಮಾತನಾಡುವ ಕುಟುಂಬಗಳನ್ನು ಬೆಳೆಸಬೇಕು. ಆ ಮೂಲಕ ಶಿವಮೊಗ್ಗವನ್ನು ಸಂಸ್ಕೃತ ನಗರವನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.ಸಂಸ್ಕೃತ ಭವನಗಳ ಬದಲಾಗಿ ಸಂಸ್ಕೃತ ಗೃಹಗಳನ್ನು ಬೆಳೆಸಬೇಕು. ಅದರಿಂದ ಮಾತ್ರ ಸಂಸ್ಕೃತ ಭವನ ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಅಖಿಲ ಭಾರತ ಸಂಸ್ಕೃತ ಭಾರತಿ ಕಾರ್ಯದರ್ಶಿ ಚ.ಮೂ. ಕೃಷ್ಣಶಾಸ್ತ್ರಿ ಮಾತನಾಡಿ, ನಮ್ಮ ನಿಷ್ಕ್ರಿಯತೆಯಿಂದ ವೇದಪುರಾಣಗಳ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಧರ್ಮಾಚರಣೆಯ ಮೌಲ್ಯಮಾಪನ ಅಗತ್ಯವಿದೆ ಎಂದರು.ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ನೇತೃತ್ವ ವಹಿಸಿದ್ದರು.  ಡಿ.ಎಚ್. ಸುಬ್ಬಣ್ಣ ಅಧ್ಯಕ್ಷತೆ ವಹಿಸಿದ್ದರು.  ಮತ್ತೂರು ಮಾರ್ಕಂಡೇಯ ಅವಧಾನಿ, ಸಂಸ್ಕೃತ ಭವನ ನಿರ್ಮಾಣ ಸಮಿತಿಯ ಮಧುಸೂಧನಾಚಾರ್, ಅ.ನಾ. ವಿಜೇಂದ್ರರಾವ್, ಟಿ.ವಿ. ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.ನಾಳೆ ಶಂಕರಮೂರ್ತಿ ಪ್ರವಾಸ
:  ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾರ್ಚ್ 11ರಂದು ಮಧ್ಯಾಹ್ನ 1ಕ್ಕೆ ಶಿವಮೊಗ್ಗಕ್ಕೆ ಆಗಮಿಸುವರು. ಅಂದು ಸಂಜೆ 7ಕ್ಕೆ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಿರುವ ಇಷ್ಟಲಿಂಗ ಪೂಜಾ ಸಮಾರಂಭದಲ್ಲಿ ಭಾಗವಹಿಸುವರು.  12ರಂದು ಬೆಳಿಗ್ಗೆ 10ಕ್ಕೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.  13ರ ಬೆಳಿಗ್ಗೆ 10ಕ್ಕೆ ಬೆಳಗಾವಿಗೆ ತೆರಳುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.