ಭಾನುವಾರ, ಮೇ 22, 2022
21 °C
ಸಂಸ್ಕೃತ ಕಾರ್ಯಕರ್ತರ ಸಮ್ಮೇಳನದಲ್ಲಿ ಕಾದಂಬರಿಕಾರಿ ಭೈರಪ್ಪ ಕಳವಳ

ಸಂಸ್ಕೃತ ನಿರ್ಲಕ್ಷ್ಯದಿಂದ ವಿದ್ವತ್ತಿಗೆ ಅಧೋಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ನಮ್ಮ ವಿದ್ವತ್ತು ಅಧೋಗತಿಗೆ ಇಳಿದದ್ದು ಸಂಸ್ಕೃತ ಬಿಟ್ಟ ಪರಿಣಾಮ’ ಎಂದು ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಕಳವಳ ವ್ಯಕ್ತಪಡಿಸಿದರು.ನಗರದ ಅವಧೂತ ಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಂಸ್ಕೃತ ಕಾರ್ಯಕರ್ತರ ಸಮ್ಮೇಳನದ ಸಮಾರೋಪ ಹಾಗೂ ಅವರ ‘ದಾಟು’ ಕಾದಂಬರಿಯ ಸಂಸ್ಕೃತ ಅನುವಾದದ ‘ಉಲ್ಲಂಘನಂ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.‘ಸಂಸ್ಕೃತ ಗೊಡ್ಡುಭಾಷೆ. ನಮ್ಮನ್ನು ಪ್ರಗತಿಗೆ ವಿರೋಧವಾಗಿ ತೆಗೆದುಕೊಂಡು ಹೋಗುವ ಭಾಷೆ. ಈ ಕಾರಣದಿಂದ ಅದನ್ನು ಸಂಪೂರ್ಣವಾಗಿ ನಾಶ ಮಾಡಬೇಕು ಎನ್ನುವ ಮನೋಭಾವ ಕನ್ನಡ ಅಲ್ಲದೆ, ಅನೇಕ ಭಾರತೀಯ ಲೇಖಕರಲ್ಲಿ ಇದೆ. ಇದರಿಂದ ನಮಗೇ ನಷ್ಟ. ಸಂಸ್ಕೃತದ ಹಿನ್ನೆಲೆ ಇರದೆ ಇದ್ದರೆ ಕನ್ನಡ ಇಷ್ಟು ಬೆಳೆಯುತ್ತಿರಲಿಲ್ಲ. ಪಂಪ, ಕುಮಾರವ್ಯಾಸ ಮೊದಲಾದವರು ಸಂಸ್ಕೃತದಲ್ಲಿ ಉದ್ಧಾಮ ಪಂಡಿತರಾದ ಪರಿಣಾಮ ಕನ್ನದಲ್ಲಿ ದೊಡ್ಡ ಲೇಖಕರಾದರು.ಹೊಸಗನ್ನಡ ಕಾವ್ಯವನ್ನು ಸರಿಯಾದ ಮಟ್ಟಕ್ಕೆ ತಂದ ಬೇಂದ್ರೆ, ಕುವೆಂಪು, ಪುತಿನ, ಕೆ.ಎಸ್‌. ನರಸಿಂಹಸ್ವಾಮಿ ಅವರು ಸಂಸ್ಕೃತವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದರು. ಇದರಿಂದಾಗಿಯೇ ಅವರು ಪ್ರಥಮದರ್ಜೆ ಕಾವ್ಯವನ್ನು ಕನ್ನಡದಲ್ಲಿ ರಚಿಸಿದರು. ಈಗಿನ ಕನ್ನಡ ಕವಿಗಳಿಗೆ ಸಂಸ್ಕೃತದ ಜ್ಞಾನವಿಲ್ಲ. ಹೀಗಾಗಿ, ಅವರ ಮಟ್ಟಕ್ಕೆ ತಲುಪಲು ಸಾಧ್ಯವಾಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.‘ಕನ್ನಡದಲ್ಲಿ ಉತ್ತಮ ಗದ್ಯ ಬರೆದಿರುವ ಬಿಎಂಶ್ರೀ, ಎ.ಆರ್‌. ಕೃಷ್ಣಶಾಸ್ತ್ರಿ, ಡಿ.ಎಲ್. ನರಸಿಂಹಾಚಾರ್, ತಿನಂಶ್ರೀ ಅವರು ಸಂಸ್ಕೃತದಲ್ಲಿ ದೊಡ್ಡ ವಿದ್ವಾಂಸರು. ಸಂಸ್ಕೃತದಿಂದ ಜ್ಞಾನ ಪಡೆದು ಕನ್ನಡವನ್ನು ಬೆಳೆಸಿದರು. ನಾನು ಕನ್ನಡ ಬರೆಯಲು ಶಕ್ತಿ ಬಂದಿರುವುದು ಸಂಸ್ಕೃತದಿಂದ. ಈ ಹಿಂದೆ ಶಾಲೆ, ಕಾಲೇಜುಗಳಲ್ಲಿ ಸಂಸ್ಕೃತವನ್ನು ಒಂದು ಭಾಷೆಯಾಗಿ ಕಲಿಸುತ್ತಿದ್ದರು. ಆದರೆ ಈಗ ಅದು ಎರಡನೇ ಭಾಷೆಯಾಗಿ ಉಳಿದಿದೆ. ಪರಿಣಾಮವಾಗಿ ಅಸಂಖ್ಯಾತರಿಗೆ ಇಂದು ಸರಿಯಾಗಿ ಕನ್ನಡ ಬರೆಯಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‘ಮರಾಠಿ, ಹಿಂದಿಯಲ್ಲಿ ಕೃತಿಯೊಂದು ಪ್ರಕಟವಾದರೆ ಕನ್ನಡಿಗರಿಗೆ ಗೊತ್ತಾಗುವುದು ಹೇಗೆ? ಇದಕ್ಕಾಗಿ ಸಾಮಾನ್ಯ ಶಬ್ದ ಭಂಡಾರ ಬೇಕಿದೆ. ಅದು ಸಂಸ್ಕೃತದಿಂದ ಸಾಧ್ಯ. ಭಾರತೀಯ ಸಮಗ್ರತೆಯನ್ನು ಭಾಷೆಗಳ ಮೂಲಕ ಸಾಧಿಸುವುದಾದರೆ ಸಂಸ್ಕೃತದಿಂದ ಮಾತ್ರ. ಉತ್ತರ ಭಾರತದಲ್ಲಿ ಹಿಂದಿ ಜತೆಗೆ ಸಂಸ್ಕೃತವನ್ನು ಕಲಿಸಲಾಗುತ್ತದೆ. ಆದರೆ, ದಕ್ಷಿಣ ಭಾರತದಲ್ಲಿ ಸಂಸ್ಕೃತದ ಭಾಷೆ ಮೇಲೆ ದ್ವೇಷ ಇದೆ. ಅದೂ ಸಾಹಿತಿಗಳಿಂದಲೇ ಹಬ್ಬಿದೆ. ಇದರ ಪರಿಣಾಮ; ನಮ್ಮ ಭಾಷೆ ಹಾಗೂ ಅಭಿವ್ಯಕ್ತಿಯ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ.ನಮ್ಮ ಬರವಣಿಗೆ ಮೂಲಕ ಉತ್ತಮ ಸಾಹಿತಿಗಳಾಗುವ ಅವಕಾಶ ಕಳೆದುಕೊಳ್ಳುತ್ತಿದ್ದೇವೆ. ಹೀಗೆಂದಾಗ ಸಂಸ್ಕೃತವೇ ನಮ್ಮ ಮಾತೃ ಭಾಷೆಯಾಗಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತಿಲ್ಲ. ಸಂಸ್ಕೃತ ಕಲಿತಷ್ಟೂ ನಮಗೆ ಲಾಭ’ ಎಂದು ಕಿವಿಮಾತು ಹೇಳಿದರು.‘ವೃತ್ತಪತ್ರಿಕೆಗಳಲ್ಲಿ ಬರುವ ಕನಿಷ್ಠ, ಗರಿಷ್ಠ, ಶ್ರೇಷ್ಠ ಇವುಗಳನ್ನು ಹೇಗೆ ಬರೆಯಬೇಕು? ಇವುಗಳಲ್ಲಿ ಯಾವುದು ಸರಿ ಎಂದು ಸರಿಯಾಗಿ ಹೇಳಲು ಅನೇಕರಿಗೆ ಬಾರದು. ಇದು ಕನ್ನಡ ಎಂಎ ಪದವಿ ಪಡೆದವರಿಗೂ ಗೊತ್ತಿಲ್ಲವೆಂದರೆ ಅವರು ಶುದ್ಧ ಕನ್ನಡವನ್ನು ಹೇಗೆ ಬರೆಯಲು ಸಾಧ್ಯ? ಇದಕ್ಕೆ ಪ್ರಾಥಮಿಕ ಹಂತದಲ್ಲೇ ಸಂಸ್ಕೃತವನ್ನು ಕಲಿಸಿದರೆ ಒಳ್ಳೆಯ ಕನ್ನಡ ಬರೆಯಲು ಸಾಧ್ಯವಾಗುತ್ತದೆ. ಕನ್ನಡಕ್ಕೆ 100 ಅಂಕಗಳಿವೆ. ಇದನ್ನು 150ಕ್ಕೆ ಏರಿಸಿ. ಸಂಸ್ಕೃತಕ್ಕೆ 50 ಅಂಕಗಳನ್ನು ಮೀಸಲಿಡಬೇಕು. ಆಗ ಕನ್ನಡ ಚೆನ್ನಾಗಿ ಬರುತ್ತದೆ’ ಎಂದು ಸಲಹೆ ನೀಡಿದರು.ಅಂಬೇಡ್ಕರ್‌ ಸಲಹೆ:  ‘ಅಂತರರಾಜ್ಯಗಳ ಭಾಷೆ ಸಂಸ್ಕೃತದಲ್ಲಿ ಇರಲಿ. ಜತೆಗೆ, ದೇಶದ ಆಡಳಿತ ಭಾಷೆ ಸಂಸ್ಕೃತವಾಗಿರಲಿ ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಸಲಹೆ ನೀಡಿದ್ದರು. ಆದರೆ, ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಆಡಳಿತದ ಭಾಷೆ ಹಿಂದಿ ಇರಲಿ ಎಂದರೂ ಅವರ ಮನಸ್ಸಿನೊಳಗೆ ಇಂಗ್ಲಿಷ್‌ ಇತ್ತು. ಇದರ ಪರಿಣಾಮ ಸಂಸ್ಕೃತ ಭಾಷೆ ಅವಗಣನೆಗೆ ಒಳಗಾಯಿತು’ ಎಂದು ವಿಷಾದ ವ್ಯಕ್ತಪಡಿಸಿದರು.‘ಈಗ ವಿವಿಗಳಲ್ಲಿ ಇರುವ ಸಂಸ್ಕೃತ ಪ್ರಾಧ್ಯಾಪಕರು ಚೆನ್ನಾಗಿ ಓದಿಕೊಂಡಿರುತ್ತಾರೆ. ಆದರೆ, ಸಂಸ್ಕೃತದಲ್ಲಿ ಅವರಿಗೆ ಮಾತನಾಡಲು ಬರುವುದಿಲ್ಲ. ಇದನ್ನು ಸಂಗೀತಕ್ಕೆ ಹೋಲಿಸಬಹುದು. ಸೆಮಿಸ್ಟರ್‌ ಪದ್ಧತಿಯಲ್ಲಿ ಅಂಕ ಕೊಡುವ ಮೂಲಕ ಸಂಗೀತ ಕಲಿತ ಹಾಗೆ. ಅಂಥವರಿಗೆ ರಾಗ ಹಾಡಲು ಬಾರದು. ಆದರೆ, ರಾಗ ಗುರುತಿಸಬಲ್ಲರು. ಜತೆಗೆ, ಸಂಗೀತ ಕಛೇರಿ ಕುರಿತು ಕೆಟ್ಟ ವಿಮರ್ಶೆ ಬರೆಯಬಲ್ಲರೇ ಹೊರತು ಹಾಡಬಲ್ಲವರಲ್ಲ.ಹಾಗಾಗಿ ಸಂಗೀತ ಬೆಳೆಯುವುದು ಸಂಗೀತ ವಿವಿಗಳಿಂದ ಅಲ್ಲ. ಇದನ್ನು ಸಂಸ್ಕೃತಕ್ಕೆ ಅಳವಡಿಸಿ ಹೇಳುವುದಾದರೆ ಮಾತನಾಡುವ ಮೂಲಕ ಬೆಳೆಸಬೇಕು. ಈ ಕೆಲಸವನ್ನು ಸಂಸ್ಕೃತ ಭಾರತಿ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.‘ಸಂಸ್ಕೃತ ಬೆಳೆಯಬೇಕಾದರೆ ಮಕ್ಕಳಿಗೆ ಕಲಿಸಬೇಕು. ಶಾಲೆಯಲ್ಲಿ ಪ್ರಾಥಮಿಕ ಹಂತದಿಂದ ಕಲಿಸಬೇಕು. ಹಾಗೆ ಕಲಿಯದ ಪರಿಣಾಮ ಇಂಗ್ಲಿಷ್‌ ಸಾಹಿತ್ಯದ ಮೂಲಕ ಸಂಸ್ಕೃತ ಅರಿಯುವುದು ದುರಂತ. ಇದಕ್ಕಾಗಿ ಪ್ರೌಢಶಾಲೆಯವರೆಗೆ ಸಂಸ್ಕೃತದಲ್ಲಿ ಕಲಿಸಬೇಕು. ದೊಡ್ಡವರಾದ ಮೇಲೆ ಸಂಸ್ಕೃತದ ಮೂಲಗ್ರಂಥಗಳನ್ನು ಓದಲು ಸಾಧ್ಯವಾಗುತ್ತದೆ. ಜತೆಗೆ, ಭಾರತೀಯ ಎಲ್ಲ ಭಾಷೆಗಳ ಉತ್ತಮ ಕೃತಿಗಳು ಅನುವಾದಗೊಳ್ಳಲಿ’ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.