ಸಂಸ್ಕೃತ ವಿಶ್ವಕೋಶ :ಬೃಹತ್ ಸವಾಲು

7

ಸಂಸ್ಕೃತ ವಿಶ್ವಕೋಶ :ಬೃಹತ್ ಸವಾಲು

Published:
Updated:

ದೇಶದ ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತ ಭಾಷೆಯ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ `ಸಂಸ್ಕೃತ ವಿಶ್ವಕೋಶ'ದ ಸಿದ್ಧತೆ ಸದ್ದಿಲ್ಲದೆ ನಡೆಯುತ್ತಿದೆ. ಮುಂದಿನ ಪೀಳಿಗೆಗೆ ದಿಕ್ಸೂಚಿಯಾಗಬಲ್ಲ ಈ ಮಹತ್ವಾಕಾಂಕ್ಷೆಯ ಯೋಜನೆ ಅನುದಾನದ ಕೊರತೆ ಸೇರಿದಂತೆ ಅನೇಕ ಅಡೆತಡೆ ಎದುರಿಸುತ್ತಿದೆ. ಸಂಸ್ಕೃತ ಪಂಡಿತರಿಂದ ನಿರೀಕ್ಷಿತ ಸಹಾಯ, ಸಹಕಾರ ದೊರೆಯುತ್ತಿಲ್ಲ. ಕುಂಟುತ್ತ, ತೆವಳುತ್ತಾ ಸಾಗಿರುವ ಈ ಯೋಜನೆ ಸಂಸ್ಕೃತ ವಿದ್ವಾಂಸ ಡಾ.ಪಾಂಡುರಂಗ ಪ್ರಭಾಕರ ಆಪ್ಟೆ ಅವರ ಹೆಗಲೇರಿದೆ.ಪುಣೆಯ ಡೆಕ್ಕನ್ ಕಾಲೇಜಿನ ಗೌರವ ಪ್ರಾಧ್ಯಾಪಕರಾಗಿರುವ 79 ವರ್ಷದ ಆಪ್ಟೆ, ಮಂಡ್ಯ ಜಿಲ್ಲೆಯ ಮೇಲುಕೋಟೆಯ ಸಂಸ್ಕೃತ ಸಂಶೋಧನಾ ಅಕಾಡೆಮಿಯ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಎಲ್ಲ ಕೊರತೆಗಳ ಮಧ್ಯೆಯೂ `ಸಂಸ್ಕೃತ ವಿಶ್ವಕೋಶ'ದ ಕನಸನ್ನು ನನಸಾಗಿಸಲು ಅವರು ಶ್ರಮಿಸುತ್ತಿದ್ದಾರೆ.

* ಮಹತ್ವಾಕಾಂಕ್ಷೆಯ ಸಂಸ್ಕೃತ ವಿಶ್ವಕೋಶ(ಎನ್‌ಸೈಕ್ಲೊಪೀಡಿಯ) ಪ್ರಕಟಣೆ ಯೋಜನೆ ಎಲ್ಲಿಯವರೆಗೆ ಬಂತು?

ಸಂಸ್ಕೃತ ವಿಶ್ವಕೋಶ ಪ್ರಕಟಣೆ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷೆಯ ಬೃಹತ್ ಯೋಜನೆ. ಪುಣೆಯ ಡೆಕ್ಕನ್ ಕಾಲೇಜ್ ಇದರ ಉಸ್ತುವಾರಿ ವಹಿಸಿಕೊಂಡಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಂಸ್ಕೃತ ಭಾಷೆಗೆ ಸಂಬಂಧಪಟ್ಟ ಅಧ್ಯಯನ, ಸಂಶೋಧನೆ, ಪ್ರಕಟಣೆ ಸೇರಿದಂತೆ ಎಲ್ಲ ಯೋಜನೆಗಳಿಗೆ ದೆಹಲಿಯ `ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ' ನೆರವು ನೀಡುತ್ತಿದೆ.

ಇನ್ನು ಯೋಜನೆಯ ಬಗ್ಗೆ ಹೇಳುವುದಾದರೆ, ಸರಿ ಸುಮಾರು 1,500 ಸಂಸ್ಕೃತ ಪುರಾತನ ಗ್ರಂಥಗಳಿಂದ 8.5 ಲಕ್ಷ ಪದಗಳನ್ನು ಹೆಕ್ಕಿ ತೆಗೆಯಲಾಗಿದೆ. ಹೀಗೆ ಸಂಗ್ರಹಿಸಲಾದ ಪದಗಳನ್ನು ವರ್ಣಮಾಲೆಯ ಅನುಸಾರ ಕ್ರಮಬದ್ಧವಾಗಿ ಜೋಡಿಸುವ ಕಾರ್ಯ ನಡೆಯುತ್ತಿದೆ. ಜೋಡಿಸಿದ 8.5 ಲಕ್ಷ ಪದಗಳನ್ನು ಮುದ್ರಿಸಲು ಏಳು ಸಾವಿರ ಪುಟ ಬೇಕಾಯಿತು. ವರ್ಣಮಾಲೆಯ ಮೊದಲ ಅಕ್ಷರ `ಅ' ದಿಂದ ಆರಂಭವಾಗುವ ಮೂರು ಅಕ್ಷರಗಳ ಪದಗಳ ಜೋಡಣೆ ಕಾರ್ಯವೇ ಇನ್ನೂ ಮುಗಿದಿಲ್ಲ. ಶಿಸ್ತುಬದ್ಧವಾಗಿ ನಡೆಯುತ್ತಿರುವ ಈ ಕಾರ್ಯ ಶ್ರಮ, ಸಂಯಮ ಮತ್ತು ಸಮಯವನ್ನು ಬೇಡುತ್ತದೆ.ಉದಾಹರಣೆಗೆ `ಅಗ್ನಿ' ಎಂಬ ಪದಕ್ಕೆ 111 ಅರ್ಥ ಮತ್ತು ಉಪ ಅರ್ಥಗಳಿವೆ. ಯಾವುದೇ ಲೋಪಗಳಿಲ್ಲದೆ ಮತ್ತು ಒಂದೂ ಪದ ಬಿಟ್ಟು ಹೋಗದಂತೆ ಅವುಗಳೆಲ್ಲವನ್ನೂ ಕ್ರಮಬದ್ಧವಾಗಿ ಜೋಡಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಸಂಸ್ಕೃತ ವಿಶ್ವಕೋಶದಂತಹ ಬೃಹತ್ ಯೋಜನೆ ಆರಂಭದಿಂದಲೂ ಅನೇಕ ತೊಂದರೆ ಎದುರಿಸುತ್ತಿದೆ. ಅದು ಕೇವಲ ಸರ್ಕಾರದ ಅನುದಾನ ಮತ್ತು ಪ್ರೋತ್ಸಾಹದ ಕೊರತೆಗೆ ಮಾತ್ರ ಸಂಬಂಧಿಸಿದ್ದಲ್ಲ. ಸಂಸ್ಕೃತ ಪಂಡಿತರೆಂದು ಕರೆಸಿಕೊಳ್ಳುವವರಿಂದಲೂ ನಿರೀಕ್ಷಿತ ಸಹಾಯ, ಸಹಕಾರ ದೊರೆಯುತ್ತಿಲ್ಲ.ಪ್ರಸಿದ್ಧ ಬನಾರಸ್ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಹಣಕಾಸಿನ ನೆರವು ನೀಡಲು ಪಂಡಿತ್ ಮದನ್‌ಮೋಹನ್ ಮಾಳವಿಯಾ ಹೋದ ಕಡೆಗಳೆಲ್ಲ ದೇಣಿಗೆ ಸಂಗ್ರಹಿಸಿದರು. ಅವರಿಂದಾಗಿಯೇ ಕಾಶಿ ವಿದ್ಯಾಪೀಠ ಜನ್ಮ ತಳೆಯಿತು. `ವಿಶ್ವದ ದೊಡ್ಡ ಭಿಕ್ಷುಕ' ಎಂದು ಪ್ರೀತಿಯಿಂದ ಛೇಡಿಸಿದರೂ ಅವರು ವಿಚಲಿತರಾಗಲಿಲ್ಲ. ಆದರೆ, ಸಂಸ್ಕೃತ ವಿದ್ವಾಂಸ ಎಂದು ಕರೆಸಿಕೊಳ್ಳುತ್ತಿರುವವರಿಂದ ತೀರಾ ನಿರಾಶಾದಾಯಕ ಪ್ರತಿಕ್ರಿಯೆ ಲಭ್ಯವಾಗಿದೆ. ಸಂಸ್ಕೃತಕ್ಕಾಗಿ ದೇಣಿಗೆ ಕೇಳಲು ಅವರು ಹಿಂಜರಿಯುತ್ತಿದ್ದಾರೆ.* ದೇವಾಲಯಗಳ ನಿರ್ಮಾಣ ಮತ್ತು ಪೂಜಾ ಕಾರ್ಯಗಳ ತಳಹದಿಯಾಗಿರುವ `ಆಗಮ'ಗಳ ಅಧ್ಯಯನವನ್ನು ಕೈಗೊಳ್ಳಲು ನಿಮಗಿದ್ದ ಪ್ರೇರಣೆ ಯಾವುದು?

ಈ ಶ್ರೇಯ ಪುಣೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಬಹು ದೊಡ್ಡ ಸಂಸ್ಕೃತ ವಿದ್ವಾಂಸ ಮೈನ್‌ಕರ್ ಅವರಿಗೆ ಸಲ್ಲಬೇಕು. ಆಗಮಗಳ ಅಧ್ಯಯನಕ್ಕೆ ಮುಖ್ಯ ಪ್ರೇರಣೆ ನೀಡಿದವರು ಮತ್ತು ನನ್ನ ಮೇಲೆ ಗಾಢ ಪ್ರಭಾವ ಬೀರಿದ ಅವರು, ನನ್ನ ಗುರುಗಳೂ ಆಗಿದ್ದರು. ಆರಂಭದ ದಿನಗಳಲ್ಲಿ ಸಾಂಗ್ಲಿಯಲ್ಲಿದ್ದ ಅವರಿಗೆ ನಂತರದ ದಿನಗಳಲ್ಲಿ ಪುಣೆಗೆ ವರ್ಗವಾಗಿತ್ತು. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ) ಪಡೆದ ನಂತರ 1965ರಲ್ಲಿ ಪುಣೆ ವಿಶ್ವವಿದ್ಯಾಲಯದಲ್ಲಿದ್ದ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಾಡಿದೆ. ಒಂದು ದಿನ ಪ್ರೊ. ಮೈನ್‌ಕರ್ ಅವರು `ಪಂಚರಾತ್ರ ತತ್ವಶಾಸ್ತ್ರ' ಅಧ್ಯಯನ ಮಾಡುವಂತೆ ಸೂಚಿಸಿದರು. `ಆಗಮ'ಗಳ ಆಳವಾದ ಅಧ್ಯಯನವೇ `ಪಂಚರಾತ್ರ'ಇದಕ್ಕೂ ಹೊರತಾದ ಮತ್ತೊಂದು ಕುತೂಹಲಕರ ಕಥೆ `ಆಗಮ'ಗಳ ಅಧ್ಯಯನದ ಹಿಂದಿದೆ. ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ಪ್ರಜೆ ಎಂಬ ಒಂದೇ ಕಾರಣಕ್ಕೆ ಸಂಸ್ಕೃತ ವಿದ್ವಾಂಸ ಎಫ್.ಒ. ಶ್ಕ್ರಾಡರ್ ಅವರನ್ನು ಬ್ರಿಟಿಷರು ಮದ್ರಾಸ್ ಕಾರಾಗೃಹದಲ್ಲಿರಿಸಿದ್ದರು. ನಂತರ ಅವರನ್ನು ಅಹಮದ್‌ನಗರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿಯೇ ಅವರು `ಪಂಚರಾತ್ರದ ಬಗ್ಗೆ ಮಾಹಿತಿ' ಎಂಬ ಇಂಗ್ಲಿಷ್ ಗ್ರಂಥ ಬರೆದರು.ಇದೇ ಕಾರಾಗೃಹದಲ್ಲಿದ್ದ ಪಂಡಿತ್ ಜವಾಹರ್‌ಲಾಲ್ ನೆಹರೂ ಅವರು `ಡಿಸ್ಕವರಿ ಆಫ್ ಇಂಡಿಯಾ' ಬರೆಯುವ 30 ವರ್ಷಗಳ ಮೊದಲೇ ಅಂದರೆ 1916ರಲ್ಲಿ ಶ್ಕ್ರಾಡರ್ ಈ ಪುಸ್ತಕ ಬರೆದಿದ್ದರು. ಸಂಸ್ಕೃತದ ಬಗ್ಗೆ ಮಾಹಿತಿ ನೀಡುವ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾದ ಮೊದಲ ಪುಸ್ತಕ ಇದೇ ಇರಬೇಕು.ಮೊದಲ ಬಾರಿಗೆ ವಿದೇಶಿ ವಿದ್ವಾಂಸರಿಗೆ ಸಂಸ್ಕೃತದ ಮಹತ್ವ ತಿಳಿಸುವ ಐತಿಹಾಸಿಕ ಕೆಲಸವನ್ನು ಈ ಪುಸ್ತಕ ಮಾಡಿತು. ಭಾರತೀಯ ಭಾಷೆಯೊಂದನ್ನು ಗಡಿ ದಾಟಿಸಿದ ಶ್ರೇಯ ಶ್ಕ್ರಾಡರ್‌ಗೆ ಸಲ್ಲಬೇಕು. ಹೀಗೆ ಜರ್ಮನ್ ವ್ಯಕ್ತಿಯೊಬ್ಬರು ಆಗಮಗಳ ಅಧ್ಯಯನ ನಡೆಸಲು ನನಗೆ ಪರೋಕ್ಷ ಪ್ರೇರಣೆಯಾದರು. ಪುಣೆಯಲ್ಲಿ ಪಿಎಚ್.ಡಿ ಮಾಡುತ್ತಿದ್ದ ಸಂದರ್ಭದಲ್ಲಿ ಮತ್ತೊಬ್ಬ ಸಂಸ್ಕೃತ ವಿದ್ವಾಂಸ ಚೆನ್ನೈನ ವಿ. ರಾಘವನ್ ಪರಿಚಯವಾಯಿತು. ಬಹುಕಾಲ ಅವರು ಚೆನ್ನೈನ `ಕುಪ್ಪುಸ್ವಾಮಿ ಶಾಸ್ತ್ರಿ ಸಂಶೋಧನಾ ಸಂಸ್ಥೆ'ಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.ಅಸಂಖ್ಯಾತ ಸಂಸ್ಕೃತ ಹಸ್ತಪ್ರತಿ, ತಾಳೆಗರಿಗಳನ್ನು ಸಂಗ್ರಹಿಸಿ ಜೋಪಾನವಾಗಿಟ್ಟಿದ್ದ ರಾಘವನ್ ಅವುಗಳನ್ನು ನನ್ನ ಅಧ್ಯಯನಕ್ಕಾಗಿ ನೀಡಿದ್ದರು. `ಪಂಚರಾತ್ರ' ಮತ್ತು `ಆಗಮಕೋಶ'ಗಳನ್ನು ಅವರು ನನಗೆ ಪರಿಚಯಿಸಿದರು. ಹೀಗೆ ಈ ಎಲ್ಲ ಮಹನೀಯರು ನನ್ನನ್ನು `ಆಗಮ'ಗಳ ದಂಡಕಾರಣ್ಯಕ್ಕೆ ನೂಕಿದರು.* ಆಗಮಗಳ ಉಗಮ ಮತ್ತು ಅವುಗಳ ಪ್ರಸ್ತುತತೆಯನ್ನು ಹೇಗೆ  ಸಮರ್ಥಿಸಿಕೊಳ್ಳುವಿರಿ?

ಪ್ರಾಚೀನ ಕಾಲದಲ್ಲಿ ಯಜ್ಞ ಕೇಂದ್ರಿತ ಸಮಾಜೋಧಾರ್ಮಿಕ ಜೀವನವನ್ನು `ನಿಗಮ ಧರ್ಮ' ಎಂದು ಕರೆಯಲಾಗುತಿತ್ತು. ಅದು ಸಂಪೂರ್ಣ ವೇದ ಆಧಾರಿತವಾಗಿತ್ತು. ವೇದಗಳಿಗೆ ನಿಖರವಾದ ಕಾಲಮಾನವಾಗಲಿ ಅಥವಾ ಅವನ್ನು ರುಜುವಾತು ಪಡಿಸುವ ಯಾವುದೇ ದಾಖಲಾತಿಗಳಾಗಲಿ ಇಲ್ಲ. ಆದರೆ, ಆಗಮಗಳ ವಿಷಯದಲ್ಲಿ ಹಾಗಲ್ಲ. ಶ್ರೀಕೃಷ್ಣನೊಂದಿಗೆ `ಆಗಮ'ಗಳ ನಂಟಿದೆ.ದ್ವಾಪರ ಯುಗದಲ್ಲಿ  ಶ್ರೀಕೃಷ್ಣ ಆರಂಭಿಸಿದ ಧರ್ಮ ಅಥವಾ ದೇವಾಲಯಗಳಲ್ಲಿಯ ಮೂರ್ತಿ ಪೂಜೆ `ಆಗಮ'ಗಳ ಹುಟ್ಟಿಗೆ ಕಾರಣ ಎನ್ನಲಾಗುತ್ತದೆ. ನಂತರದಲ್ಲಿ ರಾಮಾನುಜುಚಾರ್ಯರು ಈ ಪದ್ಧತಿಯನ್ನು ಮುಂದುವರೆಸಲು ಕಾರಣರಾದರು. ಇದಕ್ಕೂ ಮೊದಲು ಅವರ ಗುರುಗಳಾದ ಯಮುನಾಚಾರ್ಯ, ವೇದಾಂತ ದೇಶಿಕರು `ಆಗಮ ಧರ್ಮ'ಕ್ಕೆ ಪುನಶ್ಚೇತನ ನೀಡಿದ್ದರು.ಆಗಮ ಧರ್ಮ ಆರಂಭವಾದ ದಿನದಿಂದ ಇಂದಿನವರೆಗೂ ಈ ಪದ್ಧತಿಗೆ ಎಲ್ಲಿಯೂ ಅಡೆತಡೆಯಾಗಿಲ್ಲ. ಜಾಗತೀಕರಣದ ಈ ದಿನಗಳಲ್ಲೂ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಮೂರ್ತಿ ಪೂಜೆಯ ಕೇಂದ್ರಗಳಾದ ದೇವಾಲಯಗಳ ನಿರ್ಮಾಣ ನಿರಂತರವಾಗಿ ನಡೆಯುತ್ತಿದೆ. ಸ್ವಾಮಿ ಗಣಪತಿ ಶಾಸ್ತ್ರಿಗಳು ಅಮೆರಿಕದಲ್ಲಿ ಗಣೇಶ ಮಂದಿರ ಕಟ್ಟಿದರು. ಇಂದು ಆ ದೇಶದಲ್ಲಿ ಅನೇಕ ದೇವಸ್ಥಾನಗಳಿವೆ.`ಆಗಮ'ಗಳು ಸುಸ್ಥಿರ ತಂತ್ರಜ್ಞಾನಕ್ಕೆ ಉತ್ತೇಜನ ನೀಡಿದ ಆಕರ ಗ್ರಂಥಗಳು. ಚೋಳ, ಪಲ್ಲವ, ಚಾಲುಕ್ಯ, ಪಾಂಡ್ಯ ಸಾಮ್ರಾಜ್ಯಗಳು ಅಳಿದು ಹೋದರೂ ಅವರು ನಿರ್ಮಿಸಿದ ದೇವಾಲಯಗಳು ಇನ್ನೂ ಹಾಗೆಯೇ ನಮ್ಮ ಮುಂದಿವೆ. ಇದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ. ಪ್ರಾಚೀನ ಕಾಲದ ನಿಪುಣ ಶಿಲ್ಪ ತಂತ್ರಜ್ಞರಾಗಿದ್ದ  ಸ್ತಪತಿಗಳು, ಆಗಮ ಪಂಡಿತರ ಮಾರ್ಗದರ್ಶನದಲ್ಲಿ ದೇವಾಲಯಗಳನ್ನು ನಿರ್ಮಿಸುತ್ತಿದ್ದರು. ಹೀಗೆ ಶಿಲ್ಪಶಾಸ್ತ್ರ ಮತ್ತು ಆಗಮ ಒಂದೊಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿದ್ದವು.ಮೂರ್ತಿ ಪೂಜೆ ವ್ಯವಸ್ಥೆಯನ್ನು ಹುಟ್ಟು ಹಾಕಿದ ಆಗಮ ಸಂಪ್ರದಾಯದಲ್ಲಿ ಇಂದಿಗೂ ಕಟ್ಟುನಿಟ್ಟಾಗಿ ವೈದಿಕ ಮಂತ್ರಗಳನ್ನು ಮಾತ್ರ ಉಚ್ಚರಿಸಲಾಗುತ್ತದೆ. `ವೈಕಾನಾಸ ಆಗಮ' ಎಂದು ಕರೆಯಲಾಗುವ ವೈದಿಕ ಮಂತ್ರಗಳನ್ನು ಇಂದಿಗೂ ತಿರುಪತಿ ಬಾಲಾಜಿ ಸನ್ನಿಧಿಯಲ್ಲಿ ಹೇಳಲಾಗುತ್ತದೆ.ಆಗಮಗಳಲ್ಲಿ ತಾಂತ್ರಿಕ ಮಂತ್ರ (ಹೋಮ, ಹವನ) ಮತ್ತು ಯಂತ್ರ (ಲೋಹದ ಸಲಕರಣೆ)ಗಳ ಉಪಯೋಗ ಕಂಡುಬರುತ್ತದೆ. ಅವುಗಳನ್ನು `ಪಂಚರಾತ್ರ ಆಗಮ' ಎಂದು ಕರೆಯಲಾಗುತ್ತದೆ. ಶಿವನ ದೇವಲಾಯಗಳಲ್ಲಿ ಆಚರಿಸಲಾಗುವ `ಶಿವಾಗಮ'ಗಳ ಸಂಪ್ರದಾಯ ಇದಕ್ಕೆ ಭಿನ್ನ ಮತ್ತು ಪ್ರತ್ಯೇಕ. ಅತ್ಯಂತ ಸಂಕೀರ್ಣವಾಗಿರುವ ಆಗಮಗಳ ಆಚರಣೆಗೆ ಪೂಜಾರಿಗಳು ಸೂಕ್ತ ತರಬೇತಿ ಪಡೆದಿರಬೇಕಾಗುತ್ತದೆ.* `ಆಗಮ' ಸಂಪ್ರದಾಯ ಮತ್ತು ಆಚರಣೆಗೆ ಕೇವಲ ಮೌಖಿಕ ಹಿನ್ನೆಲೆ ಇದೆಯೋ ಅಥವಾ ದಾಖಲೆಗಳು ಏನಾದರೂ ಇವೆಯೋ?

`ಆಗಮ'ಗಳೆಲ್ಲ ಲಿಖಿತ ರೂಪದ ದಾಖಲೆಗಳಿವೆ. ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಕೈಗೆತ್ತಿಕೊಂಡಿರುವ `ಆಗಮ ಕೋಶ' ಯೋಜನೆಯ ಅಡಿ 11 ಸಂಪುಟಗಳಲ್ಲಿ `ವೈಕಾನಾಶ ಆಗಮ' ಗ್ರಂಥವನ್ನು ಹೊರತರಲಾಗುತ್ತಿದೆ. ಈ ಯೋಜನೆಯಲ್ಲಿ ನಾನೂ ಕೆಲಸ ಮಾಡುತ್ತಿದ್ದೇನೆ. ಈ ಕಾರ್ಯ ಬಹುತೇಕ ಮುಕ್ತಾಯ ಹಂತದಲ್ಲಿದೆ. 25 ಸಂಪುಟಗಳ `ಪಂಚರಾತ್ರ ಆಗಮ' ಮುದ್ರಣ ಕಾರ್ಯವನ್ನು ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಿದೆ.11ನೇ ಶತಮಾನದಲ್ಲಿ ಭೋಜರಾಜ ಮಹಾರಾಜ ಸಂಸ್ಕೃತದಲ್ಲಿ ರಚಿಸಿರುವ `ಸಮರಾಂಗಣ ಸೂತ್ರದಾರ' ಕೃತಿಯಲ್ಲಿ ಕಂಡುಬರುವ ಯುದ್ಧ ತಂತ್ರಜ್ಞಾನದ ಮಾಹಿತಿ ನಿಜಕ್ಕೂ ನಿಬ್ಬೆರಗುಗೊಳಿಸುತ್ತದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಭೋಜರಾಜ ನಿರ್ಮಿಸಿದ ದೇವಾಲಯ, ಅಣೆಕಟ್ಟುಗಳು ನಿಜಕ್ಕೂ ವಿಸ್ಮಯ ಮೂಡಿಸುತ್ತವೆ.ಮಧ್ಯಯುಗದ ಸುಸ್ಥಿರ ತಂತ್ರಜ್ಞಾನದ ಕುರುಹುಗಳಾಗಿ ಇನ್ನೂ ನಮ್ಮ ಕಣ್ಮುಂದೆ ಇವೆ. ಭೋಜರಾಜನ ಜನಪರವಾದ ಸುಸ್ಥಿರ ತಂತ್ರಜ್ಞಾನದ ಕುರಿತು ಮಾಹಿತಿ ನೀಡುವ ಆರು ಸಂಪುಟಗಳ ಬೃಹತ್ ಗ್ರಂಥ ಶೀಘ್ರ ಇಂಗ್ಲಿಷ್‌ನಲ್ಲಿ ಪ್ರಕಟಗೊಳ್ಳಲಿದೆ. ನನ್ನ ನೇತೃತ್ವದಲ್ಲಿಯೇ ಭಾಷಾಂತರ ಕಾರ್ಯ ನಡೆಯುತ್ತಿದ್ದು ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಈ ಗ್ರಂಥವನ್ನು ಹೊರತರುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry