ಸಕಲೇಶಪುರ-ಗುಂಡ್ಯ ನಡುವೆ ಸುರಂಗ ಹೆದ್ದಾರಿ: ಸಿಎಂ ಘೋಷಣೆ

7

ಸಕಲೇಶಪುರ-ಗುಂಡ್ಯ ನಡುವೆ ಸುರಂಗ ಹೆದ್ದಾರಿ: ಸಿಎಂ ಘೋಷಣೆ

Published:
Updated:
ಸಕಲೇಶಪುರ-ಗುಂಡ್ಯ ನಡುವೆ ಸುರಂಗ ಹೆದ್ದಾರಿ: ಸಿಎಂ ಘೋಷಣೆ

ಬೆಂಗಳೂರು:  ಸಕಲೇಶಪುರದಿಂದ ಗುಂಡ್ಯದವರೆಗೆ 3000 ಕೋಟಿ ರೂಪಾಯಿಗಳ ವೆಚ್ಚದಲ್ಲಿ 30 ಕಿಲೋಮೀಟರ್‌ಗಳ ಸುರಂಗ ಹೆದ್ದಾರಿಯೊಂದನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸದಾನಂದಗೌಡ ಇಂದು ಪ್ರಕಟಿಸಿದರು.

ಭಾರತೀಯ ಉದ್ಯಮಗಳ ಮಹಾ ಒಕ್ಕೂಟದ (ಸಿಐಐ) ದಕ್ಷಿಣ ವಲಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ಬೆಂಗಳೂರು ಮತ್ತು ಮಂಗಳೂರು ನಡುವಣ ಹೆದ್ದಾರಿಯನ್ನು ನಾಲ್ಕು ಪಥಗಳಿಗೇರಿಸುವ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ಇದರ ಜೊತೆಗೆ ಘಟ್ಟ ಪ್ರದೇಶದ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸುರಂಗ ಹೆದ್ದಾರಿಯನ್ನು ನಿರ್ಮಿಸಲಾಗುವುದು ಎಂದರು.

ಉದ್ಯಮಗಳಿಗೆ ಬೇಕಿರುವ ಎಲ್ಲಾ ಬಗೆಯ ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ವಾಯುಯಾನ ನೀತಿಯೊಂದನ್ನು ರೂಪಿಸಲಿದೆ ಎಂಬ ಭರವಸೆ ನೀಡಿದ ಅವರು ಇದು ವಿಮಾನ ಸಂಪರ್ಕವಿಲ್ಲದ ನಗರಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

ಶಾಸಕಾಂಗ ಪಕ್ಷ ಸಭೆ ಇಲ್ಲ

ಹತ್ತೊಂಬತ್ತು ಮಂದಿ ಶಾಸಕರು ಶಾಸಕಾಂಗ ಪಕ್ಷದ ಸಭೆ ಕರೆಯಬೇಕೆಂದು ಆಗ್ರಹಿಸಿ ಪತ್ರ ನೀಡಿರುವುದು ನಿಜ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಕಾಲಕಾಲಕ್ಕೆ ಇಲ್ಲಿನ ಬೆಳವಣಿಗೆಗಳನ್ನು ವರದಿ ಮಾಡುವುದು ನನ್ನ ಕರ್ತವ್ಯ. ಅದನ್ನು ನಾನು ನೆರವೇರಿಸಿದ್ದೇನೆ. ಅದಕ್ಕೆ ಸಂಬಂಧಿಸಿದಂತೆ ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚಿಸುವ ಅಗತ್ಯವೇನೂ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪಕ್ಷದ ರಾಜ್ಯ ಘಟಕದೊಳಗಿನ ವಿಚಾರಗಳ ಕುರಿತಂತೆ ತಾನು ಪತ್ರ ಬರೆದದ್ದು ಮೂರು ತಿಂಗಳ ಹಿಂದೆ. ಮಾಧ್ಯಮಗಳು ಅದನ್ನು ಈಗ ವರದಿ ಮಾಡುತ್ತಿವೆ ಎನ್ನುವುದನ್ನು ಹೊರತು ಪಡಿಸಿದರೆ ಅದರಲ್ಲಿ ಯಾವ ವಿಶೇಷವೂ ಇಲ್ಲ ರಹಸ್ಯವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry