ಸಕಲೇಶಪುರ ಬಂದ್‌ಗೆ ಜನ ಸಾಗರ

7

ಸಕಲೇಶಪುರ ಬಂದ್‌ಗೆ ಜನ ಸಾಗರ

Published:
Updated:

ಸಕಲೇಶಪುರ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ತಾಲ್ಲೂಕಿನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.ಹಾನುಬಾಳು, ಯಸಳೂರು, ಹೆತ್ತೂರು ಹೋಬಳಿ ಕೇಂದ್ರಗಳು, ಬಾಳ್ಳುಪೇಟೆ, ವಣಗೂರು ಕೂಡುರಸ್ತೆ ಸೇರಿದಂತೆ ತಾಲ್ಲೂಕು ಕೇಂದ್ರದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳು, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು, ಚಿತ್ರಮಂದಿರಗಳು, ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಲಾಗಿತ್ತು. ಪ್ರವೀಣ್‌ಶೆಟ್ಟಿ ಬಣದ ಕರವೇ ಕಾರ್ಯಕರ್ತರು ಎರಡು ದಿನಗಳಿಂದ ಧ್ವನಿ ವರ್ಧಕಗಳ ಮೂಲಕ ಬಂದ್‌ಗೆ ಕರೆ ನೀಡಿದ್ದರು.ಕರವೇ (ಪ್ರವೀಣ್‌ಶೆಟ್ಟಿ ಬಣ) ಕಾರ್ಯಕರ್ತರು, ಜಯಕರ್ನಾಟಕ ಸಂಘಟನೆ ಸದಸ್ಯರು, ಜೆಡಿಎಸ್ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿದರು. ಹಳೆ ಬಸ್ಸು ನಿಲ್ದಾಣ ಮುಂಭಾಗ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು. ವರ್ತಕರ ಸಂಘ, ತಾಲ್ಲೂಕು ಛಾಯಾಗ್ರಾಹಕರ ಸಂಘ, ಭುವನೇಶ್ವರಿ ಯುವಕ ಸಂಘಟನೆಗಳ ಕಾರ್ಯಕರ್ತರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪುರಸಭಾ ಅಧ್ಯಕ್ಷ ಎಚ್.ಎ. ಭಾಸ್ಕರ್, ಬಿಜೆಪಿ ಮುಖಂಡ ಜೈಮಾರುತಿ ದೇವರಾಜ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ದೊಡ್ಡದೀಣೆಸ್ವಾಮಿ, ಯುವ ಘಟಕದ ಅಧ್ಯಕ್ಷ ಸ.ಬ. ಭಾಸ್ಕರ್, ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸುಪ್ರದೀಪ್ತ ಯಜಮಾನ್, ಮಾಜಿ ಅಧ್ಯಕ್ಷ ಜಾತಳ್ಳಿ ಪುಟ್ಟಸ್ವಾಮಿಗೌಡ, ಎಚ್.ಬಿ. ಯಜಮಾನ್, ಹುರುಡಿ ವಿಕ್ರಂಗೌಡ, ಸಚಿನ್‌ಪ್ರ ಸಾದ್, ಕರವೇ ಅಧ್ಯಕ್ಷ ಸುರೇಶ್‌ಗೌಡ, ನಾಗರಿಕ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry