ಶನಿವಾರ, ಮೇ 28, 2022
30 °C

ಸಕಲ ಸಿದ್ಧತೆ: ಕ್ಷಣಗಣನೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ (ಜಿಮ್) ಕ್ಷಣಗಣನೆ ಆರಂಭವಾಗಿದೆ. ಗುರುವಾರ ಮತ್ತು ಶುಕ್ರವಾರ ನಡೆಯುವ ಈ ಸಮಾವೇಶಕ್ಕೆ ಸಕಲ ಸಿದ್ಧತೆ ನಡೆದಿದ್ದು, ಅದರ ಪರಿಶೀಲನೆ ಮಂಗಳವಾರ ನಡೆಯಿತು.ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ಸಮಾವೇಶ ನಡೆಯುವ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರು ನಗರದಲ್ಲೇ ಅಧಿಕಾರಿಗಳ ಜತೆ ಚರ್ಚೆ ನಡೆಸುವ ಮೂಲಕ ಅದರ ತಯಾರಿ ಬಗ್ಗೆ ಮಾಹಿತಿ ಪಡೆದರು.30ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿರುವ ಈ ಸಮಾವೇಶ, ಸುಮಾರು ಆರು ಲಕ್ಷ ಕೋಟಿ ರೂಪಾಯಿ ಹೂಡಿಕೆಗೆ ವೇದಿಕೆ ಆಗಲಿದೆ. 10 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಗೆ ಅನುವಾಗಲಿದೆ ಎಂದು ಸಿದ್ಧತೆಯ ಪರಿಶೀಲನೆ ನಡೆಸಿದ ಸಚಿವ ನಿರಾಣಿ ಹೇಳಿದರು.`ಬೃಹತ್ ಕೈಗಾರಿಕೆಗಳ ಪ್ರತಿನಿಧಿಗಳಿಗೆ ಮಾತ್ರವಲ್ಲದೆ, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೂ ಈ ಸಮಾವೇಶ ವೇದಿಕೆ ಒದಗಿಸಲಿದೆ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪೂರಕವಾಗಲಿದೆ~ ಎಂದರು.ವಸ್ತುಪ್ರದರ್ಶನ ಉದ್ಘಾಟನೆ:  `ಜಿಮ್~ ಪ್ರಯುಕ್ತ ವಸ್ತು ಪ್ರದರ್ಶನ ಆಯೋಜಿಸಲಾಗಿದ್ದು, ಬುಧವಾರ ಮಧ್ಯಾಹ್ನ ಸಿ.ಎಂ ಡಿ.ವಿ.ಸದಾನಂದ ಗೌಡ ಉದ್ಘಾಟನೆಯನ್ನು ನೆರವೇರಿಸುವರು.ದಟ್ಟಣೆ ನಿಯಂತ್ರಣ: ಜಾಗತಿಕ ಸಮಾವೇಶವಾದ ಕಾರಣ ದೇಶ ವಿದೇಶಗಳ ಗಣ್ಯರು ನಗರಕ್ಕೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗದಂತೆ ನಿಗಾ ವಹಿಸಲು ಕ್ರಮ ತೆಗೆದುಕೊಳ್ಳಲು ಸಲಹೆ ಮಾಡಲಾಗಿದೆ.

 

ಸಂಚಾರ ದಟ್ಟಣೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇದಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಮುಖ್ಯ ಕಾರ್ಯದರ್ಶಿ, ಅಧಿಕಾರಿಗಳಿಗೆ ಸಲಹೆ ಮಾಡಿದರು. ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ ನೀಡಿದರು.ಸಮಾವೇಶಕ್ಕೆ ಮಾಡಿಕೊಂಡಿರುವ ತಯಾರಿ ಕುರಿತು ಮುಖ್ಯ ಕಾರ್ಯದರ್ಶಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. ಕರ್ನಾಟಕ ಉದ್ಯೋಗ ಮಿತ್ರದ ಕಚೇರಿಯಲ್ಲೇ ಅವರು ಅಧಿಕಾರಿಗಳ ಸಭೆ ನಡೆಸಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಕೆ.ವಿ.ರಾಜು, ಕೈಗಾರಿಕಾಭಿವೃದ್ಧಿ ಆಯುಕ್ತ ಮಹೇಶ್ವರ ರಾವ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.