ಸಕಲ ಸೌಲಭ್ಯದ ಸರ್ಕಾರಿ ಮಾದರಿ ಶಾಲೆ..!

ಬುಧವಾರ, ಜೂಲೈ 17, 2019
27 °C

ಸಕಲ ಸೌಲಭ್ಯದ ಸರ್ಕಾರಿ ಮಾದರಿ ಶಾಲೆ..!

Published:
Updated:

ಬೆಳಗಾವಿ: ರಾತ್ರಿ ಶಾಲೆಯೆಂದೇ ಹೆಸರುವಾಸಿ ಯಾಗಿದ್ದ ಸರ್ಕಾರಿ ಶಾಲೆಯೊಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲೆಗಿಂತ ಹೆಚ್ಚಿನ ಸೌಕರ್ಯ ಹೊಂದಿದೆ. ಸರ್ಕಾರಿ ಶಾಲೆ ಎಂದು ಮೂಗು ಮುರಿಯುವ ಅವಶ್ಯಕತೆ ಈಗಿಲ್ಲ. ಇಂಥ ಮಾದರಿ ಶಾಲೆಯೊಂದು ನಮ್ಮ ಮಧ್ಯದಲ್ಲಿಯೇ ಇದೆ.

ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಶಹಾಪುರದಲ್ಲಿರುವ ಚಿಂತಾಮಣ ರಾವ್ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಶಾಲೆಯೇ ಎಲ್ಲ ಸೌಕರ್ಯಗಳನ್ನು ಹೊಂದಿರುವುದು. ಇಚ್ಛಾಶಕ್ತಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ಶಾಲೆ ಸಾಕ್ಷಿ.

ರಾಜ್ಯಕ್ಕೆ ಮಾದರಿ ಎನ್ನಬಹುದಾದ ಸರ್ಕಾರಿ ಶಾಲೆ ಎಂದರೆ ಈ ಶಾಲೆ. ಬ್ರಿಟಿಷ್‌ರ ಆಡಳಿತದ ಅವಧಿಯಲ್ಲಿಯೇ ಶಿಕ್ಷಣ ಪ್ರೇಮಿಯಾಗಿದ್ದ, ಈ ಪ್ರದೇಶದ ರಾಜರಾಗಿದ್ದ ಚಿಂತಾಮಣರಾವ್ ಅವರು ಶಾಲೆ ಆರಂಭಿಸಿದರು. ತಮ್ಮ ಪತ್ನಿಯ ಹೆಸರಿನಲ್ಲೂ ಸರಸ್ವತಿ ಬಾಲಕಿಯರ ಶಾಲೆ ಆರಂಭಿಸಿದ್ದಾರೆ. ಅಂದು ಮರಾಠಿ ಮಾಧ್ಯಮದಲ್ಲಿ ಆರಂಭವಾಗಿದ್ದ ಶಾಲೆ, ಈಗ ಕನ್ನಡ ಹಾಗೂ ಉರ್ದು ಮಾಧ್ಯಮ ಸಹ ಒಳಗೊಂಡಿದೆ.

ಸ್ವಾತಂತ್ರ್ಯ ನಂತರ ಈ ಶಾಲೆಗೆ ರಾತ್ರಿ ಶಾಲೆ ಎಂಬ ಹೆಸರು ಬಂದಿತು. ಆ ಸಮಯದಲ್ಲಿ ಅನೇಕರು ರಾತ್ರಿ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ. ಆದರೆ ಈ ಶಾಲೆಯ ಅಂದಿನ ಸ್ಥಿತಿಗೂ ಮತ್ತು ಈಗಿನ ಪರಿಸ್ಥಿತಿಗೂ ಅಜ ಗಜಾಂತರ ವ್ಯತ್ಯಾಸ. ಇದಕ್ಕೆ ಈ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಕಾರಣ.

ಕಳೆದ 2009ರಲ್ಲಿ ಆರಂಭಿಸಿದ ಗುರುವಂದನಾ ಕಾರ್ಯಕ್ರಮ ಈ ಶಾಲೆಯ ಬದಲಾವಣೆಗೆ ಕಾರಣ. ಅತ್ಯಾಧುನಿಕ ಸಲಕರಣೆ ಗಳೊಂದಿಗೆ ಗುಣಮಟ್ಟದ ಶಿಕ್ಷಣಕ್ಕೂ ಒತ್ತು ನೀಡಲಾಗುತ್ತಿದೆ. ಸಧ್ಯ ಶಾಲೆಯಲ್ಲಿ 574 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ.

ಈ ಶಾಲೆ ಪ್ರತಿಯೊಂದು ಕೊಠಡಿಯಲ್ಲಿ ಹಾಗೂ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸ ಲಾಗಿದೆ. ಪ್ರಾಚಾರ್ಯರ ಕೊಠಡಿಯನ್ನು ಸಂಪೂರ್ಣ ಹವಾನಿಯಂತ್ರಿತ ಮಾಡಲಾಗಿದೆ. ಸುಮಾರು 30 ಜನ ಶಿಕ್ಷಕರಿಗೆ ಪ್ರತ್ಯೇಕವಾಗಿ ಗಣಕಯಂತ್ರ ನೀಡಲಾಗಿದೆ. ಇವುಗಳಿಗೆಲ್ಲ ಇಂಟರ್‌ನೆಟ್ ಸಂಪರ್ಕ ಕಲ್ಪಿಸಲಾಗಿದೆ.

ಶಾಲೆಯ ಆವರಣದಲ್ಲಿ ಹಾಗೂ ಕೊಠಡಿಗಳಲ್ಲಿ ಏನು ನಡೆಯುತ್ತಿದೆ ಎಂಬುದು ಮುಖ್ಯಾಧ್ಯಾಪಕರಿಗೆ ಗೊತ್ತಾಗುವುಂತೆ ಸಿಸಿ ಟಿವಿ ಅಳವಡಿಸಲಾಗಿದೆ. ಪ್ರತಿಯೊಂದು ಕೊಠಡಿ ಯಲ್ಲಿರುವ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸೂಚನೆ ನೀಡಲು ಮುಖ್ಯಾಧ್ಯಾಪಕರ ಕೊಠಡಿ ಯಲ್ಲಿ ಧ್ವನಿವರ್ಧಕದ ವ್ಯವಸ್ಥೆ ಸಹ ಮಾಡಲಾಗಿದೆ. ಈ ಶಾಲೆಯ ಪ್ರವೇಶ ದ್ವಾರದಿಂದ ಹಿಡಿದುಕೊಂಡು ಎಲ್ಲವೂ ಇಲ್ಲಿ ಯಾರು ಬಂದರು, ಹೋದರು ಎನ್ನುವುದು ಸಿಸಿ ಟಿವಿಯಲ್ಲಿ ದಾಖಲಾಗುತ್ತದೆ.

`ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ ನೀಡ ಲಾಗುತ್ತಿದೆ. ಸರ್ಕಾರಿ ಶಾಲೆಗಳೂ ಕೂಡ ಖಾಸಗಿ ಶಾಲೆಗಳಿಗಿಂತಲೂ ಕಡಿಮೆಯಿಲ್ಲ ಎಂದು ತೋರಿಸುವ ಉದ್ದೇಶದಿಂದ ಶಾಸಕ ಅಭಯ ಪಾಟೀಲ ಅನೇಕ ಯೋಜನೆಗಳನ್ನು ಹಮ್ಮಿ ಕೊಂಡಿದ್ದಾರೆ. ಶಾಸಕರು ಸಹ ಇದೇ ಶಾಲೆಯ 1984-85ನೇ ಬ್ಯಾಚ್‌ನ ವಿದ್ಯಾರ್ಥಿ ಯಾಗಿದ್ದು, ಅದಕ್ಕಾಗಿಯೇ ಹಳೆಯ ವಿದ್ಯಾರ್ಥಿ ಗಳ ಸಂಘ ಸ್ಥಾಪಿಸಿ ಇದರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ~ ಎಂದು ಪ್ರಾಚಾರ್ಯ ಎಸ್.ಬಿ.ದೊಡ್ಡಮನಿ ಹೇಳುತ್ತಾರೆ.

ರಾಜ್ಯದಲ್ಲಿಯೇ ಪ್ರಥಮವಾಗಿ ಈ ಶಾಲೆಯಲ್ಲಿ ಬಯೋ ಮೆಟ್ರಿಕ್ಸ್ ಅಳವಡಿಸ ಲಾಗಿದೆ. ಪ್ರತಿ ಮೊದಲನೇ ಶನಿವಾರ ಪಾಲಕರ ಸಭೆಯನ್ನು ಸಹ ಮಾಡಲಾಗುತ್ತದೆ. ಶಾಲಾ ಸುಧಾರಣಾ ಸಮಿತಿಯ ರಾಜಕೀಯ ತಿಕ್ಕಾಟವೂ ಇಲ್ಲ.

`ಕೋಟಿ ವೆಚ್ಚದಲ್ಲಿ ಶಾಲೆಯ ಅಭಿವೃದ್ಧಿ~

`ಕಳೆದ ಬಾರಿ ಶಾಸಕನಾದ ಸಂದರ್ಭದಲ್ಲಿ ನನ್ನನ್ನು ಶಾಲೆಗೆ ಕರೆದು ಸನ್ಮಾನ ಮಾಡಲಿದ್ದರು. ಆದರೆ ಹಿರಿಯ ಶಿಕ್ಷಕರು ರಾಜಕೀಯ ವ್ಯಕ್ತಿಗಳನ್ನು ಕರೆಯುವುದು ಬೇಡ ಎಂದಿದ್ದರು. ನಾನು ಸಹ ಸತ್ಕಾರ ಬೇಡ ಎಂದು ಹೇಳಿ, ಶಾಲೆಯ ಅಭಿವೃದ್ಧಿಗೆ ಮುಂದಾದೆ. 2009ರಲ್ಲಿ ಆಯೋಜಿಸಿದ್ದ ಗುರುವಂದನಾ ಸಮಾರಂಭ ಈ ಶಾಲೆಯ ಚಿತ್ರಣವನ್ನೇ ಬದಲಾಯಿಸಿತು. ಆ ಸಂದರ್ಭದಲ್ಲಿಯೇ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಎಂಟು ಕೊಠಡಿಗಳನ್ನು ನಿರ್ಮಿಸಲಾಯಿತು~ ಎಂದು ಶಾಸಕ ಅಭಯ ಪಾಟೀಲ ಹೇಳುತ್ತಾರೆ.

`ಶಾಲೆಯ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಕನಸು. ನಾನು ಸಹ ಇದೇ ಶಾಲೆಯ ಹಳೆಯ ವಿದ್ಯಾರ್ಥಿ. ಈಗಾಗಲೇ ಸಿಸಿ ಟಿವಿ, ಕಂಪ್ಯೂಟರ್ ಸೌಲಭ್ಯ ಸೇರಿದಂತೆ ಗುಣಮಟ್ಟದ ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದೆ. ಮುಂದಿನ ಮೂರು ತಿಂಗಳೊಳಗೆ ಇ-ಗ್ರಂಥಾಲಯ ಆರಂಭಿಸಲಾಗುವುದು. ಈಗಾಗಲೇ 1.10 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ  ಮಾಡಲಾಗಿದೆ. ಅಭಿವೃದ್ಧಿಗೆ ಶಾಸಕರ ನಿಧಿ, ಲೋಕೋಪಯೋಗಿ ಇಲಾಖೆಯಿಂದ ಅನುದಾನ ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಸಹಾಯ ಪಡೆಯಲಾಗಿದೆ~ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry