ಸಕಾರಾತ್ಮಕ ಚಿಂತನೆ ಅಗತ್ಯ

7

ಸಕಾರಾತ್ಮಕ ಚಿಂತನೆ ಅಗತ್ಯ

Published:
Updated:

ಅಸಮಾನತೆಗಳು ತುಂಬಿತುಳುಕುವ ಸಮಾಜದಲ್ಲಿ ಹೆಣ್ಣುಮಕ್ಕಳ ಪಾಲಿಗೆ ಒದಗುವ ಕಂಟಕಗಳು, ಸಂಕಟಗಳು ನೂರೆಂಟು. ಹುಟ್ಟಿದ ಮೇಲೆ ಅವುಗಳನ್ನು ಎದುರಿಸುವುದು ಇರಲಿ, ಹುಟ್ಟುವುದೇ ಬೇಡವೆನ್ನುವ ಪಕ್ಷಪಾತದ ಕಾರಣ ಬಸಿರಿನಲ್ಲೇ ಹೆಣ್ಣುಭ್ರೂಣ ಬಲಿಯಾಗುತ್ತದೆ. ನಮ್ಮ ಸಾಮಾಜಿಕ ಸ್ವಾಸ್ಥ್ಯ ಹೇಗಿದೆ ಎಂಬುದನ್ನು ತಿಳಿಯಲು ಹೆಣ್ಣಿಗೆ ಅವಳ ಕುಟುಂಬದಲ್ಲೇ ಎಷ್ಟರ ಮಟ್ಟಿಗೆ ವಿಶ್ವಾಸ ಮತ್ತು ಭದ್ರತೆ ಸಿಗುತ್ತದೆ ಎಂಬುದೂ ಬಹಳ ಮುಖ್ಯವಾದ ಅಳತೆಗೋಲು. ನಾನಾ ಕಾರಣಗಳಿಂದ ಅವುಗಳ ಕೊರತೆ ಅನುಭವಿಸುವ ಸಾವಿರಾರು ಹೆಣ್ಣುಮಕ್ಕಳು ಮನೆಯಿಂದ ಹೊರಬೀಳುತ್ತಾರೆ.ನಾಪತ್ತೆಯಾಗುವ, ಕಣ್ಮರೆಯಾಗುವ ಅಂಥ ಹೆಣ್ಣುಮಕ್ಕಳ ಪತ್ತೆ ಮಾಡುವುದು ಅತ್ಯಂತ ಕಷ್ಟದ ಕೆಲಸ. ರಾಜ್ಯದಲ್ಲಿ ಹಾಗೆ ನಾಪತ್ತೆಯಾದ ಹೆಣ್ಣುಮಕ್ಕಳ ಬಗ್ಗೆ ಒಂದು ಅಧ್ಯಯನವನ್ನು ಕೈಗೊಂಡ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಒಂದು ವಿಸ್ತೃತ ವರದಿಯನ್ನು ಗೃಹಸಚಿವರಿಗೆ ಸಲ್ಲಿಸಿದೆ. ಈ ವರದಿ ಹೇಳುವ ವಿವರಗಳು ಆತಂಕ ಹುಟ್ಟಿಸುತ್ತವೆ. 2009 ರಿಂದ 2011 ರ ಸೆಪ್ಟೆಂಬರ್ ಅಂತ್ಯದ ಅವಧಿಯಲ್ಲಿ ಅಧಿಕೃತ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 14989 ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ. ಈ ಪೈಕಿ ಕೇವಲ 6950 ಮಂದಿಯನ್ನು ಮಾತ್ರ ಪತ್ತೆ ಮಾಡಲಾಗಿದೆ. ಉಳಿದವರ ಬಗ್ಗೆ ಯಾವುದೇ ಮಾಹಿತಿ ಇಲ್ಲ.ಇವರಲ್ಲಿ ಬಹುತೇಕ ಹೆಣ್ಣುಮಕ್ಕಳು 12 ರಿಂದ 30 ವರ್ಷದೊಳಗಿನವರು. ನಮ್ಮ ರಾಜ್ಯದ ಕೇವಲ ಕೆಲವು ಜಿಲ್ಲೆಗಳ ಅಂಕಿಅಂಶಗಳೇ ಹೀಗಿದ್ದ ಮೇಲೆ ಇನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಪ್ರತಿವರ್ಷ ನಾಪತ್ತೆಯಾಗುವ ಹೆಣ್ಣುಮಕ್ಕಳ ಪ್ರಮಾಣ ಭಯ ಹುಟ್ಟಿಸುವಂತೆ ಇರುವುದು ಖಚಿತ.ಮನೆ ಅಥವಾ ಶಾಲೆಯಲ್ಲಿ ಎದುರಾಗುವ ಹೆದರಿಕೆಯಿಂದ ನಾಪತ್ತೆಯಾಗುವ ಹೆಣ್ಣುಮಕ್ಕಳು ತಮಗರಿವಿಲ್ಲದೆಯೇ ಮಾನವ ಕಳ್ಳಸಾಗಣೆಗೆ, ಲೈಂಗಿಕ ಕಾರ್ಯಕರ್ತೆಯರ ಜಾಲಕ್ಕೆ ತಳ್ಳುವ ಮೋಸಕ್ಕೆ ಬಲಿಯಾಗುವುದು ಸಾಮಾನ್ಯ.ಮನೆಯೊಳಗಿನ ಅಮಾನುಷ ದೌರ್ಜನ್ಯ, ಅವಹೇಳನ, ಅಲಕ್ಷ್ಯ, ಅನಾರೋಗ್ಯ, ಅನಪೇಕ್ಷಿತ ಪ್ರಭಾವ, ಅಂಕಗಳನ್ನು ಗಳಿಸುವ ಒತ್ತಡ ಮುಂತಾದ ಅನೇಕ ಕಾರಣಗಳು ಹೆಣ್ಣುಮಕ್ಕಳು ಮನೆ ತೊರೆಯಲು ಪ್ರಚೋದಿಸುತ್ತವೆ. ಈ ಸಂಕೀರ್ಣ ಸಾಮಾಜಿಕ ಸಮಸ್ಯೆಯನ್ನು ಎದುರಿಸಲು ಸರ್ಕಾರದ ಕ್ರಮಗಳ ಜೊತೆಗೆ ಸಮಾಜವೂ ಸಕಾರಾತ್ಮಕ ಚಿಂತನೆ ನಡೆಸಬೇಕು. ಹೆಣ್ಣುಮಕ್ಕಳನ್ನು ಬೆಳೆಸುವ ಕ್ರಮ ಕುರಿತು ಹಿರಿಯರ ದೃಷ್ಟಿಕೋನದಲ್ಲಿ ಪರಿವರ್ತನೆ ಆಗಬೇಕು. ಬೆಳೆಯುತ್ತಿರುವ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ, ಸಾಮಾಜಿಕ ಅರಿವು, ಹೆಣ್ಣುಮಕ್ಕಳ ನೆರವಿಗಿರುವ ಕಾಯಿದೆಗಳ ತಿಳಿವಳಿಕೆ, ಸರಿ ತಪ್ಪುಗಳನ್ನು ಗುರುತಿಸಿ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ಮುಂತಾದುವನ್ನು ತುಂಬುವುದು ಅತ್ಯಂತ ಅಗತ್ಯ.ಗೊಂದಲಕ್ಕೀಡಾದ ಹೆಣ್ಣುಮಕ್ಕಳಿಗೆ ಧೈರ್ಯ ತುಂಬಿ, ಮಾರ್ಗದರ್ಶನ ಮಾಡಲು ಎಲ್ಲ ಶಾಲೆಗಳಲ್ಲಿ, ಹೋಬಳಿ ಕೇಂದ್ರಗಳಲ್ಲಿ ಆಪ್ತ ಸಮಾಲೋಚನಾ ಕೇಂದ್ರಗಳನ್ನು ತೆರೆಯುವುದು ಸೂಕ್ತ. ಆದರೆ ಹುಡುಗ ಹುಡುಗಿಯರ ಮುಕ್ತ ಮನದ ಸ್ನೇಹ, ಸಂವಹನಗಳನ್ನು ಸಂಶಯದಿಂದ ನೋಡುವ ಪೊಲೀಸರ ದಾದಾಗಿರಿ ಮತ್ತು ಸಂಸ್ಕೃತಿ ರಕ್ಷಣೆಯ ಹೆಸರಿನ ನೈತಿಕ ಪೊಲೀಸ್‌ಗಿರಿ ಹೆಣ್ಣುಮಕ್ಕಳನ್ನು ಇನ್ನಷ್ಟು ಕಷ್ಟಕ್ಕೆ ದೂಡುವುದರಿಂದ ಅಂಥವನ್ನು ದೂರವಿಟ್ಟರೆ ಕ್ಷೇಮ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry