ಸಕಾರಾತ್ಮಕ ಫಲಿತಾಂಶ ಸಾಧ್ಯವೆ?

7

ಸಕಾರಾತ್ಮಕ ಫಲಿತಾಂಶ ಸಾಧ್ಯವೆ?

Published:
Updated:

ಮುಂಬೈ (ಪಿಟಿಐ): ಭಾರತ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿದಿರುವ ಸಹಾರಾ ಇಂಡಿಯಾ ಜೊತೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಮಹತ್ವದ ಸಭೆ ಭಾನುವಾರ ಇಲ್ಲಿ ನಡೆಯಲಿದ್ದು ಸಕಾರಾತ್ಮಕ ಫಲಿತಾಂಶ ಹೊರಹೊಮ್ಮುವುದೇ ಎನ್ನುವುದು ಈಗ ಆಸಕ್ತಿ ಕೆರಳಿಸಿರುವ ಪ್ರಶ್ನೆ.ಒಂದೆಡೆ ಪುಣೆ ವಾರಿಯರ್ಸ್ ವಿಷಯವಾಗಿ ಮಾತ್ರ ಮಾತನಾಡುತ್ತೇವೆಂದು ಸಹಾರಾ ಈ ಮೊದಲೇ ಸ್ಪಷ್ಟವಾಗಿ ತಿಳಿಸಿದೆ. ಆದರೆ ಪ್ರಾಯೋಜಕತ್ವದ ವಿಷಯವೇ ಬಿಸಿಸಿಐಗೆ ಮುಖ್ಯವಾಗಿದೆ. ಆದ್ದರಿಂದ ಎರಡೂ ಅಂಶಗಳ ಮೇಲೆ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚು. ಸಹಾರಾ ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ಇಂಥ ದೊಡ್ಡ ಪ್ರಾಯೋಜಕರನ್ನು ಕಳೆದುಕೊಳ್ಳಲು ಕ್ರಿಕೆಟ್ ಮಂಡಳಿಯಂತೂ ಸಿದ್ಧವಿಲ್ಲ.ಐಪಿಎಲ್ ತಂಡವಾದ ವಾರಿಯರ್ಸ್ ಹಿತಕ್ಕಾಗಿ ಮಾತುಕತೆ ನಡೆಸಲು ಒಪ್ಪಿರುವ ಸಹಾರಾ ಇಂಡಿಯಾ ಮುಖ್ಯಸ್ಥ ಸುಬ್ರೊತೊ ರಾಯ್ ಅವರು `ಪ್ರಾಯೋಜಕತ್ವ ಒಪ್ಪಂದದ ಮಾತು ಖಂಡಿತ ಬೇಡ~ ಎಂದು ಈಗಾಗಲೇ ಸ್ಪಷ್ಟವಾಗಿ ತಿಳಿಸಿದ್ದಾರೆ.ಇಂಡಿಯನ್ ಪ್ರೀಮಿಯರ್ ಲೀಗ್‌ನ ಐದನೇ ಅವತರಣಿಕೆಯ ಟ್ವೆಂಟಿ-20 ಟೂರ್ನಿಯಲ್ಲಿ ಆಡುವ ಅವಕಾಶದಿಂದ ಪುಣೆ ಆಟಗಾರರು ವಂಚಿತರಾಗಬಾರದು. ಆ ಒಂದೇ ಕಾರಣಕ್ಕಾಗಿ ಮಾತುಕತೆಗೆ ಆಸಕ್ತಿ ತೋರಿಸಲಾಗಿದೆ~ ಎಂದಿರುವ ಸಹಾರಾ ಭಾನುವಾರದ ಸಭೆಯಲ್ಲಿ ಪ್ರಾಯೋಜಕತ್ವದ ಮೇಲಿನ ಚರ್ಚೆಗೆ ಆಸಕ್ತಿ ತೋರುವಂತೆ ಮನವೊಲಿಸಲು ಬಿಸಿಸಿಐ ಅಧಿಕಾರಿಗಳು ಪ್ರಯತ್ನ ಮಾಡಲು ಸಜ್ಜಾಗಿದ್ದಾರೆ.ಹೇಗಾದರೂ ಮಾಡಿ ಸಹಾರಾ ನಂಟು ಉಳಿಸಿಕೊಳ್ಳಬೇಕೆಂದು ಬಯಸಿರುವ ಬಿಸಿಸಿಐ ಪರವಾಗಿ ಸುಬ್ರೊತೊ ರಾಯ್ ಜೊತೆಗೆ ಚರ್ಚೆ ನಡೆಸಲು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಹಾಗೂ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಸೇರಿದಂತೆ ಕ್ರಿಕೆಟ್ ಮಂಡಳಿಯ ಉನ್ನತ ಪದಾಧಿಕಾರಿಗಳ ದಂಡು ಕಾಯ್ದಿದೆ.

ಪ್ರೀಮಿಯರ್ ಸಿಂಗ್ ಆಟಗಾರರ ಹರಾಜು ವಿಷಯದಲ್ಲಿ ಎದ್ದ ಬಿರುಗಾಳಿಯ ಫಲವಾಗಿ ಅಸಮಾಧಾನಗೊಂಡ ಸಹಾರಾ ತನ್ನ ಕೋಪವನ್ನು ಭಾರತ ತಂಡದ ಪ್ರಾಯೋಜಕತ್ವ ಹಿಂದೆ ಪಡೆಯುವ ಮೂಲಕ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ ಅದು ಬಿಸಿಸಿಐ ಜೊತೆಗಿನ ತನ್ನೆಲ್ಲ ನಂಟು ಕಳಚಿಕೊಳ್ಳು ಯೋಚನೆ ಕೂಡ ಮಾಡಿದೆ. ಅದೇ ಕ್ರಿಕೆಟ್ ಮಂಡಳಿಯಲ್ಲಿ ತಳಮಳ ಉಂಟಾಗಲು ಕಾರಣ. ಹೇಗಾದರೂ ಮಾಡಿ ಮತ್ತೆ ಸಹಾರಾ ತನ್ನ ಕೈಯಿಡಿದು ಆಸರೆ ನೀಡಬೇಕೆಂದು ಬಿಸಿಸಿಐ ಬಯಸಿದೆ.ಕ್ಯಾನ್ಸರ್‌ನಿಂದ ಬಳಲಿರುವ ಯುವರಾಜ್ ಸಿಂಗ್ ಬದಲಿಗೆ ಪುಣೆಗೆ ಭಾರತದ ಬೇರೊಬ್ಬ ಖ್ಯಾತ ಆಟಗಾರನನ್ನು ನೀಡಲು ಒಪ್ಪಂದವಾದರೆ ಮುಂದಿನ ಹಾದಿ ಸುಗಮ ಆಗಬಹುದು. ಆದರೆ ಈಗಾಗಲೇ ಹರಾಜು ಪ್ರಕ್ರಿಯೆ ಮುಗಿದಿರುವ ಕಾರಣ ರವೀಂದ್ರ ಜಡೇಜಾ ಅವರನ್ನು ಈ ತಂಡಕ್ಕೆ ಕಳುಹಿಸುವುದು ಆಗದ ಮಾತು. ಆದ್ದರಿಂದ ಸಮಸ್ಯೆ ಸ್ವಲ್ಪ ಜಟಿಲವಾಗಿದೆ. ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ ಎನ್ನುವುದೇ ದೊಡ್ಡ ಸವಾಲು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry