ಸೋಮವಾರ, ಮೇ 23, 2022
24 °C

ಸಕಾರಾತ್ಮಕ ಬದಲಾವಣೆಗೆ ಮಹಿಳಾ ದಿನ: ಶಾಲಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತ ಕಳೆದ ಒಂದು ಶತಕದ ಅವಧಿಯಲ್ಲಿ ಸಾಕಷ್ಟು ಸಕಾರಾತ್ಮಕ   ಬದಲಾವಣೆಗಳು ಕಂಡು ಬಂದಿವೆ ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದರು.ಅವರು ಗುಲ್ಬರ್ಗದ ರಂಗಮಂದಿರದಲ್ಲಿ ಮಂಗಳವಾರ ಅಂತರರಾಷ್ಟ್ರೀಯ ಮಹಿಳಾದಿನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಆರ್ಥಿಕ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳು ಮುಖ್ಯವಾದ ಪಾತ್ರ ವಹಿಸುತ್ತಿವೆ. ರಾಜ್ಯದಲ್ಲಿಯೇ 1.30 ಲಕ್ಷ ಸ್ವಸಹಾಯ ಸಂಘಗಳು ಸುಮಾರು ರೂ 500 ಕೋಟಿಗಳಷ್ಟನ್ನು ಬ್ಯಾಂಕುಗಳಲ್ಲಿ ತೊಡಗಿಸಿವೆ. ಈ ನಡುವೆಯೂ ಭ್ರೂಣ ಹತ್ಯೆಯಂಥ ಅನಿಷ್ಟ ಪದ್ಧತಿ ಜಾರಿಯಲ್ಲಿರುವುದೇ ವೈರುಧ್ಯ ಹಾಗೂ ವಿಪರ್ಯಾಸವಾಗಿದೆ ಎಂದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹಿಳಾ ಸುರಕ್ಷೆಗಾಗಿ ಅನೇಕ ಯೋಜನೆಗಳನ್ನು ಆರಂಭಿಸಿವೆ.  ಅವುಗಳ ಸದ್ಬಳಕೆಯಾಗಬೇಕು. ಕಾನೂನಿನ ಅರಿವು ಹಾಗೂ ನೆರವು ಪಡೆಯುವಲ್ಲಿ ಹೆಂಗಳೆಯರೂ ಮುಂದಾ ಬರಬೇಕು ಎಂದರು.ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ದ್ವಿತೀಯ ಭಾಷೆ ಆಂಗ್ಲಕ್ಕೆ ಸಂಬಂಧಿಸಿದಂತೆ ಶಾಂತಿ ದೇಸಾಯಿ ಅವರ ಸಿಡಿಯನ್ನು ಬಿಡುಗಡೆಗೊಳಿಸಲಾಯಿತು. ಉದ್ಯಮಿ ಉಷಾ ಲಾಹೋಟಿ, ಕರಕುಶಲ ಕಲಾವಿದೆ ನರ್ಮದಾ ಚಿಂಚನಸೂರ, ಉದ್ಯೋಗಿ ಮಹಾದೇವಿ ನಂದಿಕೋಲ ಅವರನ್ನು ಸನ್ಮಾನಿಸಲಾಯಿತು. ಬಸವ ಅಂತರರಾಷ್ಟ್ರೀಯ ಸಂಸ್ಥೆ, ಲಯನ್ಸ್ ಕ್ಲಬ್ ಆಫ್ ಗುಲ್ಬರ್ಗ ನೃಪತುಂಗ, ಹಿರಿಯ ನಾಗರಿಕರ ವೇದಿಕೆ, ಹೈದರಾಬಾದ್ ಕರ್ನಾಟಕ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಲರ್ನಿಂಗ್ ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.