`ಸಕಾಲಕ್ಕೆ ಯೋಜನೆ ಪೂರ್ಣಗೊಳಿಸಿ'

7
ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದ್ಯಾಬೇರಿ ಸೂಚನೆ

`ಸಕಾಲಕ್ಕೆ ಯೋಜನೆ ಪೂರ್ಣಗೊಳಿಸಿ'

Published:
Updated:

ಹಾವೇರಿ: ಸರ್ಕಾರದ ಯೋಜನೆಗಳ ನಿಗದಿತ ಸಮಯದಲ್ಲಿ ಅನುಷ್ಠಾನಗೊಳಿಸಬೇಕಲ್ಲದೇ ಅನುದಾನವನ್ನು ಸಕಾಲಕ್ಕೆ ಬಳಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಬಿ.ದ್ಯಾಬೇರಿ ಅಧಿಕಾರಿಗಳಿಗೆ ಸೂಚಿಸಿದರು.

ಶನಿವಾರ ನಗರದ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಯೋಜನೆ ಹಾಗೂ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.ಸರ್ಕಾರದ ಯೋಜನೆಗಳಾದ ವಸತಿ ಯೋಜನೆ, ಜಲಾನಯನ ಕಾಮಗಾರಿ, ಸಂಪೂರ್ಣ ಸ್ವಚ್ಛತಾ ಅಭಿಯಾನ, ಉದ್ಯೋಗ ಖಾತ್ರಿ ಯೋಜನೆ, ಗ್ರಾಮೀಣ ಮತ್ತು ನಗರ ಕುಡಿಯುವ ನೀರು ಪೂರೈಕೆ ಯೋಜನೆಗಳಂತಹ ಕಾಮಗಾರಿಗಳನ್ನು ಸಕಾಲಕ್ಕೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ಜಿಲ್ಲೆಯಲ್ಲಿ ಶೇ 50ರಷ್ಟು ಅಂದರೆ, ಸುಮಾರು 92 ಸಾವಿರ ಹೆಕ್ಟೇರಿನಷ್ಟು ಮುಂಗಾರು ಬೆಳೆ ಹಾನಿಯಾಗಿದ್ದರಿಂದ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಪೂರೈಕೆಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು. ಬಡವರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರಧಾನ್ಯ ವಿತರಣೆ, ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಹಾಗೂ ಅಂಗನವಾಡಿ ಮಕ್ಕಳಿಗೆ ಆಹಾರ ವಿತರಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಶ್ರೀಕಾಂತ ಮೈಸೂರ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಕೊಳ್ಳಲಾಗಿದೆ. ತುಂಗಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ನೀರು ತುಂಬಿಸಿದ್ದರಿಂದ ಆ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿದ್ದು, ಫೆಬ್ರುವರಿ ಅಂತ್ಯದವರೆಗೆ ಜಿಲ್ಲೆಯ ಯಾವುದೇ ಭಾಗದಲ್ಲಿ ನೀರಿನ ತೊಂದರೆ ಇಲ್ಲ ಎಂದರು.ಬರುವ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುವುದನ್ನು ನಿರೀಕ್ಷಿಸಿ ರೂ 8 ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಿದ್ದು, ಈ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮಂಜೂರಾತಿ ನೀಡಿದ್ದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಸಭೆಗೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಜಿ. ಜಗದೀಶ ಮಾತನಾಡಿ, ಜಿಲ್ಲೆಗೆ ರೂ 1.9 ಕೋಟಿ ಅನುದಾನ ನೀಡಲಾಗಿದ್ದು, ಅದನ್ನು ಸಕಾಲಕ್ಕೆ ವೆಚ್ಚಮಾಡಬೇಕು. ಇಲ್ಲದಿದ್ದರೇ, ನಗರ ಹಾಗೂ ಪುರಸಭೆಗಳಿಂದ ಆ ಹಣ ವಾಪಸ್ ಪಡೆಯಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿ.ಪಂ. ಸಿಇಒ ಉಮೇಶ ಕುಸುಗಲ್ ಮಾತನಾಡಿ, ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 5,914 ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಈವರೆಗೆ ರೂ 35.18 ಕೋಟಿ ಕಾಮಗಾರಿಗಳನ್ನು ಕೈಕೊಂಡಿದ್ದು, 3,97,248 ದಿನಗಳ ಉದ್ಯೋಗ ಒದಗಿಸಲಾಗಿದೆ ಎಂದು ತಿಳಿಸಿದರು.ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಶಿವರಾಂ ಭಟ್ ಮಾತನಾಡಿ, ಜಾನುವಾರುಗಳಿಗೆ ಮೇವು ಒದಗಿಸಲು ರೂ 63 ಲಕ್ಷ ವೆಚ್ಚದಲ್ಲಿ ರೈತರಿಗೆ 36 ಸಾವಿರ ಮಿನಿಕಿಟ್ ಒದಗಿಸಿದೆ. ರೈತರು ಮೇವಿನ ಬೀಜ ಬಳಸಿ ಮೆಕ್ಕೆಜೋಳ, ಸೋರ್ಗಂಗನ್ನು ಬೆಳೆಯುತ್ತಿದ್ದು, ಈಗಾಗಲೇ 1.85 ಲಕ್ಷ ಟನ್ ಮೇವು ಉತ್ಪತ್ತಿಯಾಗಿದೆ. ರೈತರಿಗೆ ಲಭ್ಯವಿರುವ ಒಣ ಹಾಗೂ ಹಸಿ ಮೇವು ಮುಂದಿನ 45 ವಾರಗಳಗೆ ಸಾಕಾಗುವಷ್ಟಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 1.02 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 818 ಮತ್ತು ವಿವಿಧ ಗ್ರಾಮಗಳಲ್ಲಿ 37 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.ನಗರಸಭೆ ಆಯುಕ್ತ ಎಚ್.ಕೆ. ರುದ್ರಪ್ಪ, ಕೃಷಿ ಜಂಟಿ ನಿರ್ದೇಶಕ ಗಣೇಶ ನಾಯ್ಕ, ಡಿಡಿಪಿಐ ಎಸ್.ಬಿ. ಕೊಡ್ಲಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ತಾಲ್ಲೂಕುಗಳ ತಹಶೀಲ್ದಾ ಸಭೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry