ಸಕಾಲಕ್ಕೆ ಸ್ಪಂದಿಸದಿದ್ದರೆ ಕಠಿಣ ಕ್ರಮ

7

ಸಕಾಲಕ್ಕೆ ಸ್ಪಂದಿಸದಿದ್ದರೆ ಕಠಿಣ ಕ್ರಮ

Published:
Updated:

ರಾಮನಗರ: ಸಕಾಲ ಯೋಜನೆಯಡಿ ಬರುವ ಅರ್ಜಿಗಳನ್ನು ಆನ್‌ಲೈನ್ ಮೂಲಕ `ಅಪ್‌ಡೆಟ್~ ಮಾಡದೇ ಕಾನೂನು ಉಲ್ಲಂಘಿಸುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹಮದ್ ಸನಾವುಲ್ಲಾ ಜಿಲ್ಲೆಯ ಅಧಿಕಾರಿಗಳಿಗೆ ಎಚ್ಚರಿಸಿದರು.ಜಿಲ್ಲಾ ಕಂದಾಯ ಭವನದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಸಕಾಲ ಯೋಜನೆ ಗುಣಮಟ್ಟದಲ್ಲಿ ನಡೆಯುತ್ತಿಲ್ಲ. ಸಕಾಲದಡಿ ಸಾರ್ವಜನಿಕ ಸೇವೆಗಳನ್ನು ಕಾಲ ಮಿತಿಯೊಳಗೆ ನೀಡದಿದ್ದರೆ ಅಧಿಕಾರಿಗಳು ದಂಡ ತೆರಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ಈ ಯೋಜನೆಯಲ್ಲಿ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸಬಾರದು. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಸಂಬಳದ ಹಣವನ್ನು ದಂಡದ ರೂಪದಲ್ಲಿ ಕಳೆದುಕೊಳ್ಳಲು ಸಿದ್ಧರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಜಿಲ್ಲೆಯಲ್ಲಿ ಸಕಾಲದಡಿ ಸಲ್ಲಿಸಲಾದ 160 ಅರ್ಜಿಗಳು ವಿಲೇವಾರಿಯಾಗದೆ ಹಾಗೆಯೇ ಉಳಿದಿವೆ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು ಸರ್ಕಾರ ಈ ಯೋಜನೆ ವ್ಯಾಪ್ತಿಗೆ ಮತ್ತಷ್ಟು ಇಲಾಖೆಗಳನ್ನು ಸೇರ್ಪಡೆಗೊಳಿಸಲು ಮುಂದಾಗುತ್ತಿದ್ದರೆ, ನೀವೇಕೆ ಯೋಜನೆ ಜಾರಿಯಲ್ಲಿ ಹಿಂದೆ ಬಿದ್ದಿದ್ದೀರಿ? ನಗರಸಭೆ ಒಂದರಲ್ಲಿಯೇ ಸುಮಾರು 30 ಅರ್ಜಿಗಳು ನಿಗದಿತ ಸಮಯದಲ್ಲಿ ವಿಲೇವಾರಿಯಾಗದೆ ಹಾಗೇ ಉಳಿದಿವೆ. ಇದಕ್ಕೆ ಕಾರಣವೇನು ಎಂದು ಅವರು ನಗರಸಭೆ ಆಯುಕ್ತ ಸಿದ್ದರಾಜು ಅವರನ್ನು ಪ್ರಶ್ನಿಸಿದರು.ಕಂಪ್ಯೂಟರ್‌ನಲ್ಲಿ ತಾಂತ್ರಿಕ ದೋಷವಿದ್ದು ಇದನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಯೋಜನೆಯನ್ನು ಕಾಲಮಿತಿಯೊಳಗೆ ಜನ ಸಾಮಾನ್ಯರಿಗೆ ತಲುಪಿಸುವುದಾಗಿ ವಿವಿಧ ಇಲಾಖೆಯ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರಿಗೆ ಮನವರಿಕೆ ಮಾಡಿಕೊಟ್ಟರು.ಸಕಾಲದಲ್ಲಿ ಬಹುತೇಕ ಆದಾಯ ಪ್ರಮಾಣ ಪತ್ರಗಳನ್ನು ಕೇಳಿಕೊಂಡು ಅರ್ಜಿಗಳು ಸಲ್ಲಿಕೆಯಾಗುತ್ತವೆ. ಕೆಲವರು ವಾರಕ್ಕೊಂದು ಪ್ರಮಾಣ ಪತ್ರವನ್ನು ಪಡೆಯುವ ಕೆಲಸ ಮಾಡುತ್ತಾರೆ. ಇದು ಅಧಿಕಾರಿಗಳಿಗೂ ತೊಂದರೆಯಾಗುತ್ತಿದೆ.ಈ ಹಿನ್ನಲೆಯಲ್ಲಿ ವಿದ್ಯಾಬ್ಯಾಸಕ್ಕೆ ನೀಡುವ ಪ್ರಮಾಣ ಪತ್ರವನ್ನು 5 ವರ್ಷಗಳವರೆಗೆ ಬಳಸಿಕೊಳ್ಳಲು ಆದೇಶ ಹೊರಡಿಸಲಾಗಿದೆ.ಇನ್ನು ವಿದ್ಯಾಭ್ಯಾಸದಿಂದ ಹೊರತಾದ ಕಾರಣಗಳಿಗೆ ನೀಡುವ ಪ್ರಮಾಣ ಪತ್ರವನ್ನು ಒಬ್ಬರಿಗೆ ವರ್ಷಕ್ಕೆಒಂದೇ ಬಾರಿ ವಿತರಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಅಧಿಕಾರಿಗಳಿಗೆ ಸಮಯ ಉಳಿತಾಯವಾಗಲಿದ್ದು ಬೇರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದಾಗಿದೆ ಎಂದು ಸನಾವುಲ್ಲಾ ತಿಳಿಸಿದರು.ಸಭೆಯಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಜಿಲ್ಲೆಯಲ್ಲಿ ಒಟ್ಟು50 ಸಾವಿರ ಅರ್ಜಿಗಳು ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿದ್ದು, 31 ಸಾವಿರ ಗ್ರಾಮೀಣ ಪ್ರದೇಶದಿಂದ ಮತ್ತು 19 ಸಾವಿರ ನಗರ ಪ್ರದೇಶದಿಂದ ಬಂದಿವೆ.

 

ಪಡಿತರ ಚೀಟಿ ವಿತರಣೆ ಮಾಡಲು ಬೇಕಾದ ಭಾವಚಿತ್ರಗಳನ್ನು ತೆಗೆಯುವ ಕೆಲಸವನ್ನು ಖಾಸಗಿ ಸೈಬರ್‌ಗಳಿಗೆ ಗುತ್ತಿಗೆ ನೀಡಲಾಗಿದೆ. ಇವರಿಗೆ ಕ್ಯಾಮೆರಾಗಳನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ 187 ಮಂದಿಗೆ ಪಡಿತರ ಚೀಟಿಯನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ 9 ಸ್ಥಾನಕ್ಕೆ ಜಿಗಿದಿರುವುದಕ್ಕೆ ಸನಾವುಲ್ಲಾ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಶ್ಲಾಘಿಸಿದರು.ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು. ಅಧಿಕಾರಿಗಳು ನಿರಂತರವಾಗಿ ಕಲ್ಲು ಸಾಗಿಸುವ ವಾಹನಗಳನ್ನು ತಪಾಸಣೆ ಮಾಡಬೇಕು.ಈಗ ಕಲ್ಲು ಸಾಗಿಸಲು ಪರವಾನಗಿಯನ್ನು ಆನ್‌ಲೈನ್ ಮೂಲಕವೇ ನೀಡುವ ವ್ಯವಸ್ಥೆ ಜಾರಿಗೆ ತಂದಿರುವುದರಿಂದ ಅಧಿಕಾರಿಗಳು ಇದನ್ನು ಬಳಸಿಕೊಂಡು ಅಕ್ರಮವಾಗಿ ಕಲ್ಲು ಸಾಗಿಸುವ ಲಾರಿಗಳನ್ನು ಪತ್ತೆ ಹಚ್ಚಬಹುದಾಗಿದೆ. ಇದರ ಜತೆಗೆ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಚೆಕ್‌ಪೋಸ್ಟ್‌ಗಳಲ್ಲಿ ಅಕ್ರಮವನ್ನು ತಡೆಯಬೇಕು ಎಂದು ಸೂಚನೆ ನೀಡಿದರು.ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಉಪ ವಿಭಾಗಾಧಿಕಾರಿ ಡಾ. ಸ್ನೇಹಾ, ಜಿ.ಪಂ ಸಿಇಓ ಕೆ.ಎಸ್. ವೆಂಕಟೇಶಪ್ಪ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry