`ಸಕಾಲ'ದಲ್ಲೇ ಅರ್ಜಿ ಸ್ವೀಕಾರಕ್ಕೆ ಸೂಚನೆ

7

`ಸಕಾಲ'ದಲ್ಲೇ ಅರ್ಜಿ ಸ್ವೀಕಾರಕ್ಕೆ ಸೂಚನೆ

Published:
Updated:

ಬೆಂಗಳೂರು: ವಿವಿಧ ಸೇವೆಗಳಿಗಾಗಿ ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು `ಸಕಾಲ' ಯೋಜನೆ ಅಡಿಯಲ್ಲೇ ಸ್ವೀಕರಿಸಬೇಕು ಹಾಗೂ ಕಡ್ಡಾಯವಾಗಿ 15 ಅಂಕಿಗಳ ರಸೀದಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಸೋಮವಾರ ಇಲ್ಲಿ ತಿಳಿಸಿದರು.ಬೆಂಗಳೂರು ಉತ್ತರ ಹಾಗೂ ದಕ್ಷಿಣ ತಾಲ್ಲೂಕು ಕಚೇರಿಗಳಲ್ಲಿ ಸಕಾಲ ಯೋಜನೆ ಸರಿಯಾಗಿ ಅನುಷ್ಠಾನಗೊಂಡಿಲ್ಲ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ಮಾಡಿದ್ದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಕಾಲ ಯೋಜನೆಯ ನಾಮಫಲಕಗಳನ್ನು ಕಚೇರಿಗಳ ಹೊರಗೆ ಕಡ್ಡಾಯ ಹಾಕಬೇಕು. ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದ ಕೂಡಲೇ ರಸೀದಿ ನೀಡಬೇಕು ಎಂದು ತಿಳಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

`ಸಕಾಲ'ದಡಿ ಅರ್ಜಿಗಳ ಸ್ವೀಕಾರದಲ್ಲಿ ಬೆಂಗಳೂರು ನಗರ ಜಿಲ್ಲೆ 30ನೇ ಸ್ಥಾನದಲ್ಲಿದ್ದರೆ, ವಿಲೇವಾರಿಯಲ್ಲಿ 29ನೇ ಸ್ಥಾನದಲ್ಲಿದೆ. ರಾಜಧಾನಿಯಲ್ಲೇ ಈ ರೀತಿ ಆಗುತ್ತಿರುವುದು ಸರಿಯಲ್ಲ. ಸರಿಯಾಗಿ ಮೇಲ್ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಮಧ್ಯವರ್ತಿಗಳ ಹಾವಳಿಯಿಂದಾಗಿ ನಗರದಲ್ಲಿ ಸಕಾಲ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂಬುದು ನಿಜ. ಇದನ್ನು ಮನಗಂಡು ಕೆಲವೊಂದು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ತಂಡ ಇನ್ನು ಮುಂದೆ ಕಚೇರಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಿದೆ ಎಂದರು. ಮಧ್ಯವರ್ತಿಗಳಿಂದ ಹತ್ತಾರು ಅರ್ಜಿಗಳನ್ನು ಒಟ್ಟಿಗೆ ಸ್ವೀಕರಿಸಬಾರದು. ಅರ್ಜಿದಾರರಿಂದ ಅಗತ್ಯವಿರುವ ದಾಖಲೆಗಳನ್ನು ಪಡೆದುಕೊಂಡ ನಂತರವೇ ರಸೀದಿ ನೀಡಬೇಕು. ಕಾಲ ಮಿತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.ನಗರದ ಎಂ.ಜಿ. ರಸ್ತೆಯ ಕಿಡ್ಸ್‌ಕೆಂಪ್ ಕಟ್ಟಡದಲ್ಲಿ ಇರುವ ಸಕಾಲ ಕಚೇರಿಯನ್ನು ಈ ತಿಂಗಳ ಅಂತ್ಯದ ಒಳಗೆ ಕಂದಾಯ ಭವನಕ್ಕೆ ಸ್ಥಳಾಂತರಿಸಲಾಗುವುದು. ಸರ್ವರ್‌ನಲ್ಲಿ ದೋಷವಿದ್ದರೆ, ಸಕಾಲ ಕೇಂದ್ರ ಕಚೇರಿಗೆ ತಿಳಿಸಬೇಕು ಎಂದು ಕೆಳ ಹಂತದ ಸಿಬ್ಬಂದಿಗೆ ಸೂಚಿಸಲಾಗಿದೆ. ಸಕಾಲ ಅನುಷ್ಠಾನದ ಬಗ್ಗೆ ಸಂಘ ಸಂಸ್ಥೆಗಳಿಂದ ಮೌಲ್ಯಮಾಪನ ಮಾಡಿಸಲಾಗುವುದು ಎಂದರು.`ಪ್ರತಿ ಜಿಲ್ಲೆಯಲ್ಲಿ ನೋಡೆಲ್ ಅಧಿಕಾರಿ ನೇಮಕ'

ಬೆಂಗಳೂರು: ಕೆಳ ಹಂತದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಸೋಮವಾರ ಇಲ್ಲಿ ತಿಳಿಸಿದರು.

ವಿವಿಧ ನ್ಯಾಯಾಲಯಗಳಲ್ಲಿ 49,300 ಸಿವಿಲ್ ಪ್ರಕರಣಗಳು ಬಾಕಿ ಇದ್ದು, ಸರ್ಕಾರಿ ಕಕ್ಷಿದಾರರು ಈ ಪ್ರಕರಣಗಳಲ್ಲಿ ವಾದ ಮಾಡುತ್ತಿದ್ದಾರೆ. ಆದರೆ, ಸರ್ಕಾರಿ ವಕೀಲರು ಮತ್ತು ಕಂದಾಯ ಇಲಾಖೆ ನಡುವೆ ಸಮನ್ವಯ ಇಲ್ಲದ ಕಾರಣ ಪ್ರಕರಣಗಳ ವಿಲೇವಾರಿ ಮಂದಗತಿಯಲ್ಲಿ ಸಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry