ಗುರುವಾರ , ಮೇ 13, 2021
24 °C

ಸಕಾಲಿಕ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನಸಿಕ ಆರೋಗ್ಯ ಮಸೂದೆ, 2013ಕ್ಕೆ  ಕೇಂದ್ರ ಸಂಪುಟದ ಅಂಗೀಕಾರ ದೊರೆತಿದೆ. ಈ ಮಸೂದೆಗೆ  ಸಂಸತ್ತಿನ ಒಪ್ಪಿಗೆ ದೊರೆತಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಇರಿಸಿದಂತೆ ಆಗುತ್ತದೆ. ಮಾನಸಿಕ ರೋಗಿಗೆ ಮಾನವೀಯ ಸ್ಪರ್ಶದಿಂದ ಕೂಡಿದ ಚಿಕಿತ್ಸೆಯ ಅಗತ್ಯವನ್ನು  ಹಾಗೂ ಎಲ್ಲ ಅರ್ಹರಿಗೆ ಚಿಕಿತ್ಸೆ ಲಭ್ಯವಾಗಬೇಕು ಎಂದು ಈ ಮಸೂದೆ ಪ್ರತಿಪಾದಿಸುತ್ತದೆ. ತನಗೆ ಬೇಕಾಗಿರುವ ಚಿಕಿತ್ಸೆಯ ವಿಧಾನವನ್ನು ರೋಗಿಯೇ ನಿರ್ಧರಿಸುವ ಹಕ್ಕನ್ನೂ ಈ ಮಸೂದೆಯಲ್ಲಿ ನೀಡಲಾಗಿದೆ.ಚಿಕಿತ್ಸೆಯ ಅಂಗವಾಗಿ ಅರಿವಳಿಕೆ ಇಲ್ಲದೆ ಎಲೆಕ್ಟ್ರಿಕ್ ಶಾಕ್ ನೀಡುವುದನ್ನು ಇದು ನಿಷೇಧಿಸುತ್ತದೆ. ನಮ್ಮ ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇ 6.5ರಷ್ಟು ಜನರು ಒಂದಲ್ಲ ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ದುರದೃಷ್ಟದ ವಿಷಯ ಎಂದರೆ ಅವರಲ್ಲಿ ಬಹಳಷ್ಟು ಜನರಿಗೆ ವೈದ್ಯಕೀಯ ಚಿಕಿತ್ಸೆ ದೊರೆಯುವುದೇ ಇಲ್ಲ. ಏಕೆಂದರೆ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಸದ್ಯ ಲಭ್ಯವಿರುವುದು ಪ್ರಮುಖ ನಗರಗಳಲ್ಲಿ ಮಾತ್ರ. ಇಂತಹ ವ್ಯಕ್ತಿಗಳಿಗೆ ನೀಡಬೇಕಾಗಿರುವ ಚಿಕಿತ್ಸೆ ಬಗ್ಗೆ ಜನರಲ್ಲಿ ಅಜ್ಞಾನವಿರುವುದು ಇನ್ನೊಂದು ಸಮಸ್ಯೆ.ಮಾನಸಿಕ ರೋಗಿಗಳನ್ನು ಸರಪಳಿಯಿಂದ ಬಿಗಿಯಾಗಿ ಕಟ್ಟಿ ಹಾಕಿ ಪ್ರತ್ಯೇಕವಾಗಿಟ್ಟ ಹಲವು ಉದಾಹರಣೆಗಳೂ ನಮ್ಮ ಸಮಾಜದಲ್ಲಿವೆ. ಕುಟುಂಬದಿಂದ ಹೊರ ಹಾಕಿ ಅವರ `ವರ್ತನೆಗೆ ಶಿಕ್ಷೆ' ನೀಡ್ದ್ದಿದೂ ಇದೆ.ಪ್ರಸ್ತಾವಿತ ಮಸೂದೆ ರೋಗಿಗಳನ್ನು ಅಮಾನವೀಯವಾಗಿ  ನೋಡುವುದನ್ನು ಪ್ರತಿಬಂಧಿಸುತ್ತದೆ. ವೈದ್ಯಕೀಯ ಸೌಲಭ್ಯ ಪಡೆಯುವುದು ಆ ವ್ಯಕ್ತಿಯ ಹಕ್ಕಾಗುತ್ತದೆ. ಇದನ್ನು ನಿರಾಕರಿಸುವುದು ಅವರ ಹಕ್ಕನ್ನು ಉಲ್ಲಂಘಿಸಿದಂತೆ ಎಂದು ಮಸೂದೆಯಲ್ಲಿ ಉ್ಲ್ಲಲೇಖವಿದೆ. ಇದರ ಪ್ರಕಾರ ರೋಗಿಯ ಇಚ್ಛೆಗೆ ವಿರುದ್ಧವಾಗಿ ಆಸ್ಪತ್ರೆಗೆ ದಾಖಲು ಮಾಡುವಂತಿಲ್ಲ. ಇದರಿಂದ ತನ್ನ  ಚಿಕಿತ್ಸೆಯ ವಿಚಾರದಲ್ಲಿ ರೋಗಿಗೆ ಅತಿಯಾದ ಸ್ವಾತಂತ್ರ್ಯ ನೀಡಿದಂತಾಗುತ್ತದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಕೆಲವು ಸಂದರ್ಭಗಳಲ್ಲಿ ರೋಗಿ ತನ್ನ ತೀರ್ಮಾನವನ್ನು ತಿಳಿಸುವ ಸ್ಥಿತಿಯಲ್ಲಿರುವುದಿಲ್ಲ. ಹೀಗಾಗಿ ಈ ವಾದದ್ಲ್ಲಲೂ ಹುರುಳಿದೆ.ಆದರೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಾನಸಿಕ ಅಸ್ವಸ್ಥ ಭಾಗಿಯಾದರೆ ಚಿಕಿತ್ಸೆ ಹೆಚ್ಚು ಯಶಸ್ವಿಯಾಗುತ್ತದೆ ಎನ್ನುವುದು ತಜ್ಞರ ಅಭಿಮತ. ಮಾನಸಿಕ ಚಿಕಿತ್ಸೆಯ ವಿಚಾರದಲ್ಲಿ ಇರುವ ದೊಡ್ಡ ಅಡ್ಡಿ ಎಂದರೆ ಮಾನಸಿಕ ಅಸ್ವಸ್ಥತೆಯ ಜತೆಗೆ ತಳಕು ಹಾಕಿರುವ ಸಾಮಾಜಿಕ ಕಳಂಕ. ಇದೇ ರೋಗಿಗಳು ಮತ್ತು ಅವರ ಕುಟುಂಬದ ಜನರು ಚಿಕಿತ್ಸೆಗೆ ಹಿಂದೇಟು ಹಾಕುವುದಕ್ಕೆ  ಪ್ರಮುಖ ಕಾರಣ. ಮಾನಸಿಕ ಅಸ್ವಸ್ಥತೆ ಬಯಸಿ ಬರುವ ರೋಗವಲ್ಲ, ಅಥವಾ ರೋಗಿಯ ಯಾವುದೇ ಕೃತ್ಯದ ಫಲವಲ್ಲ. ಮಾನಸಿಕ ರೋಗಿಗೆ ಕುಟುಂಬದ ಸಹಾನುಭೂತಿ, ನೆರವು ಅತ್ಯಗತ್ಯ. ಇದು ಮಾನಸಿಕ  ಕಾಯಿಲೆ ಗುಣಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.