ಸಕಾಲ ಯೋಜನೆ: ಚಾಮರಾಜನಗರ ಜಿಲ್ಲೆಗೆ 5ನೇ ಸ್ಥಾನ

7

ಸಕಾಲ ಯೋಜನೆ: ಚಾಮರಾಜನಗರ ಜಿಲ್ಲೆಗೆ 5ನೇ ಸ್ಥಾನ

Published:
Updated:

ಚಾಮರಾಜನಗರ: ರಾಜ್ಯದ ನಾಗರಿಕರಿಗೆ ಕಾಲಮಿತಿಯೊಳಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ ಸಕಾಲ ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ.ಸಾರ್ವಜನಿಕ ಸೇವೆಗಳನ್ನು ಸಮರ್ಪಕವಾಗಿ ನಿಗಧಿತ ಸಮಯದಲ್ಲಿ ಪೂರೈಸಲು ಅನುವು ಮಾಡುವ ಸಕಾಲ ವ್ಯಾಪ್ತಿಯಡಿ ಈಗಾಗಲೇ 11ಇಲಾಖೆಗಳ 151 ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಯೋಜನೆಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಚಾಮರಾಜನಗರ ಜಿಲ್ಲೆ ಸಕಾಲ ಯೋಜನೆಯಡಿ ಸ್ವೀಕರಿಸಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ನವೆಂಬರ್ ತಿಂಗಳಿನಲ್ಲಿ ಸಕಾಲ ಯೋಜನೆಯಡಿ ನಿರ್ವಹಿಸಿರುವ ಅರ್ಜಿ ವಿಲೇವಾರಿಯಲ್ಲಿ ಜಿಲ್ಲೆ ರಾಜ್ಯದಲ್ಲೇ 5ನೇ ಸ್ಥಾನ ಪಡೆದಿದೆ.2012ರ ಏಪ್ರಿಲ್ 2ರಿಂದ ಇಲ್ಲಿವರೆಗೆ 2,39,644 ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಲಾಗಿದೆ. ಕಂದಾಯ ಇಲಾಖೆ 1,91,964 ಅರ್ಜಿಗಳನ್ನು ತೀರ್ಮಾನಿಸುವ ಮೂಲಕ ಮೊದಲನೇ ಸ್ಥಾನದಲ್ಲಿದೆ. ಸಾರಿಗೆ ಇಲಾಖೆ 20,011 ಅರ್ಜಿಗಳನ್ನು ವಿಲೇವಾರಿ ಮಾಡಿ 2ನೇ ಸ್ಥಾನದಲ್ಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 7,390, ನಗರಾಭಿವದ್ಥಿ ಪ್ರಾಧಿಕಾರ 7,031, ಒಳಾಡಳಿತ ಇಲಾಖೆ 5,846 ಅರ್ಜಿಗಳನ್ನು ಸ್ವೀಕರಿಸಿ, ವಿಲೇವಾರಿ ಮಾಡುವ ಮೂಲಕ ಕ್ರಮವಾಗಿ 3, 4 ಹಾಗೂ 5ನೇ ಸ್ಥಾನ ಪಡೆದಿವೆ.ಸಕಾಲ ವ್ಯಾಪ್ತಿಗೆ 114 ಹೊಸ ಸೇವೆ

ಸರ್ಕಾರವು ಕಳೆದ ಡಿ. 3ರಿಂದ ಜಾರಿಗೆ ಬರುವಂತೆ ಹೊಸದಾಗಿ ವಿವಿಧ ಇಲಾಖೆಗಳ 114 ಸೇವೆಗಳನ್ನು ಸಕಾಲ ವ್ಯಾಪ್ತಿಗೆ ಸೇರ್ಪಡೆ ಮಾಡಿದೆ.ಸಾರಿಗೆ, ಕಂದಾಯ, ಒಳಾಡಳಿತ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪತ್ರಾಗಾರ ಇಲಾಖೆ, ವಾರ್ತಾ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೇರಿದಂತೆ ವಿವಿಧ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ಒಳಪಡಿಸಿದೆ.ಅರ್ಜಿ ವಿಲೇವಾರಿಗೆ ಗಡುವು

ಅಂಧರ ಉಚಿತ ಬಸ್ ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತರಿಗೆ ಉಚಿತ ಪ್ರಯಾಣದ ಕೂಪನ್‌ಗಳನ್ನು 7 ದಿನಗಳ ಅವಧಿಯೊಳಗೆ ಸಾರಿಗೆ ಇಲಾಖೆ ವಿತರಿಸುವಂತೆ ಗಡುವು ವಿಧಿಸಲಾಗಿದೆ. ಕಂದಾಯ ಇಲಾಖೆಯ ವಿವಿಧ ಸೇವೆಗಳ ಅರ್ಜಿಯನ್ನು ನಿಗಧಿತ ಅವಧಿಯಲ್ಲಿ ವಿಲೇವಾರಿ ಮಾಡುವಂತೆ ಗಡುವು ನೀಡಲಾಗಿದೆ. ಜಮೀನು, ಆಸ್ತಿ ನೊಂದಣಿಗೆ ಒಂದು ದಿನ, ಖಾತೆ ಬದಲಾವಣೆಗೆ (ವಿವಾದ ರಹಿತ) 60 ದಿನ, ಯೋಜನಾ ನಿರಾಶ್ರಿತರ ದೃಢೀಕರಣ ಪತ್ರ, ಪಿಟಿಸಿಎಲ್, ಎಲ್‌ಆರ್‌ಎಫ್ ಮಂಜೂರಾತಿ, ಸಾಮಾನ್ಯ ಭೂ ಮಂಜೂರಾತಿ, ನಿರಾಪೇಕ್ಷಣಾ ದೃಢೀಕರಣ ಪತ್ರಕ್ಕೆ 21 ದಿನ, ದಢೂತಿ ಪ್ರಮಾಣ, ಪೆಟ್ರೋಲ್ ಬಂಕ್ ಸ್ಥಾಪನೆ ಅನುಮತಿಗೆ 21 ದಿನ ನಿಗದಿ ಮಾಡಲಾಗಿದೆ.ಸರ್ವೇ ವಿಭಾಗವು ಐಎಲ್‌ಆರ್, ಟಿಪ್ಪಣ್, ಪಕ್ಕಾ ಟಿಪ್ಪಣ್, ಅಟ್ಲಾಸ್, ಗ್ರಾಮ ನಕ್ಷೆ, ಖರಾಬ್ ಉತಾರ್ ನಕಲು ಪ್ರತಿಗಳನ್ನು ನೀಡಲು 7 ದಿನಗಳನ್ನು ನಿಗದಿಪಡಿಸಲಾಗಿದೆ. ಪಹಣಿ ತಿದ್ದುಪಡಿ ಕೆಲಸವನ್ನು 40 ದಿನಗಳೊಳಗೆ ಮಾಡಬೇಕಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆ ಅರ್ಜಿಗಳನ್ನು 70 ದಿನದಲ್ಲಿ ಅಂತಿಮಗೊಳಿಸಬೇಕು.ಪ್ರಕೃತಿ ವಿಕೋಪಗಳಿಂದ ಆಗುವ ಬೆಳೆ ನಷ್ಟ, ಮನೆ ಹಾನಿ ಪರಿಹಾರದ ಅರ್ಜಿಯನ್ನು 21ದಿನಗಳಲ್ಲಿ ವಿಲೇವಾರಿ ಮಾಡಬೇಕಿದೆ. ಪ್ರಕೃತಿ ವಿಕೋಪಗಳಿಂದ ಸಂಘಟಿಸುವ ಮನುಷ್ಯ ಹಾಗೂ ಪ್ರಾಣಿಗಳ ಪ್ರಾಣ ಹಾನಿ ಸಂಬಂಧ ಪರಿಹಾರ ಕೋರುವ ಅರ್ಜಿಗಳನ್ನು 15 ದಿನದಲ್ಲಿ ಅಂತಿಮಗೊಳಿಸಬೇಕು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಬಯಸಿ ಅರ್ಜಿ ಸಲ್ಲಿಸುವ ಕೂಲಿ ಕಾರ್ಮಿಕರ ನೋಂದಣಿ ಹಾಗೂ ಉದ್ಯೋಗ ಪತ್ರ ವಿತರಣೆ ಪ್ರಕ್ರಿಯೆಯನ್ನು 30ದಿನದೊಳಗೆ ನಿರ್ವಹಿಸಬೇಕು.ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಜಲಾಶಯದಲ್ಲಿ ಮೀನುಗಾರಿಕೆ ಮಾಡಲು ನೀಡುವ ಪರವಾನಗಿ ಅರ್ಜಿಗೆ 10ದಿನ, ಬೋಟುಗಳ ನೋಂದಣಿ ಪರವಾನಿಗೆ ನೀಡಲು 15ದಿನ ಹಾಗೂ ಮೀನು ಪಾಶುವಾರು ವಿಲೇವಾರಿ ಹಕ್ಕು ಆದೇಶವನ್ನು ಜಿಲ್ಲಾ ಮಟ್ಟದ ವ್ಯಾಪ್ತಿಗೆ ನೀಡಲು 45ದಿನಗಳ ಕಾಲಮಿತಿ ನಿಗಧಿ ಮಾಡಲಾಗಿದೆ.ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಮನೆ ದುರಸ್ತಿ ಮಾಡಿಕೊಡಲು 30ದಿನಗಳೊಳಗೆ ನಿರಾಪೇಕ್ಷಣಾ ಪತ್ರ ನೀಡಬೇಕಿದೆ. ಘೋಷಿತ ಕೊಳಚೆ ಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಂಡವರಿಗೆ, ಹಕ್ಕು ಪತ್ರ ಪಡೆದವರು ಸರ್ಕಾರ ನಿಗಧಿಪಡಿಸಿದ ಹಣ ಪಾವತಿಸಿದ ಫಲಾನುಭವಿಗಳಿಗೆ ಶುದ್ಧ ಕ್ರಯಪತ್ರವನ್ನು 30ದಿನಗಳೊಳಗೆ ನೀಡಬೇಕಿದೆ.ಮನೆಗಳ ಮೂಲ ಫಲಾನುಭವಿಗಳು ಮನೆಗಳನ್ನು ಮಾರಾಟ ಮಾಡಿದ ಪ್ರಕರಣಗಳಲ್ಲಿ ಹಾಲಿ ವಾಸವಿರುವ ಅಥವಾ ಖರೀದಿಸಿದ ನಿವಾಸಿಗೆ 30ದಿನದಲ್ಲಿ ಮನೆ ಹಕ್ಕು ಬದಲಾವಣೆ ಅರ್ಜಿಯನ್ನು ಅಂತಿಮಗೊಳಿಸಬೇಕಿದೆ.  ಶಿಕ್ಷಣ ಇಲಾಖೆ ನಡೆಸಲಿರುವ ವಿವಿಧ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಮರುಎಣಿಕೆ, ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಕಾರ್ಯ, ಅಂಕಪಟ್ಟಿ ವಿತರಣೆ, ವಲಸೆ ಪ್ರಮಾಣ ಪತ್ರ ಇನ್ನಿತರ ಪ್ರಮಾಣ ಪತ್ರ ನೀಡಿಕೆ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು.ಒಳಾಡಳಿತ ಇಲಾಖೆ ನೀಡಲಿರುವ ನಿರಾಪೇಕ್ಷಣಾ ಪತ್ರ, ತಪಾಸಣೆ ದೃಢೀಕರಣ ಪತ್ರ, ಕರ್ನಾಟಕ ಗೃಹ ಮಂಡಳಿ ನೀಡಲಿರುವ ಕ್ರಯಪತ್ರ, ನಕ್ಷೆ ಅನುಮೋದನೆ, ಮರುಪಾವತಿ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ರಸ್ತೆ ಅಗೆತಕ್ಕೆ ಅನುಮತಿ ನೀಡುವ ಅರ್ಜಿ, ಜಾಹಿರಾತು ಫಲಕ ಅಳವಡಿಕೆ, ಕಟ್ಟಡ ನಿರ್ಮಾಣಕ್ಕೆ ನೀಡುವ ಅನುಮತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಲಿರುವ ವಿವಿಧ ವರ್ಗಗಳ ಸಮ್ಮತಿ ಪತ್ರ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ನೀಡುವ ಮಂಜೂರಾತಿ ಸೇರಿದಂತೆ ಇನ್ನು ಹಲವು ಇಲಾಖೆಗಳ ವಿವಿಧ ಸೇವೆಗಳಿಗೆ ಸಂಬಂಧಿಸಿದ ಅರ್ಜಿಯನ್ನು ಇಂತಿಷ್ಟೇ ದಿನದಲ್ಲಿ ವಿಲೇವಾರಿ ಮಾಡುವಂತೆ ಸಕಾಲ ಯೋಜನೆಯಡಿ ಗಡುವು ನಿಗಧಿ ಮಾಡಲಾಗಿದೆ.ಹೊಸ ಸೇವೆಗಳಿಗೆ ಸಂಬಂಧಿಸಿದಂತೆ ಇಲಾಖೆಗಳಿಗೆ ಸಕಾಲ ತಂತ್ರಾಂಶದಲ್ಲಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಕ್ರಿಯೇಟ್ ಮಾಡಲಾಗಿದೆ. ಜಿಲ್ಲೆಯ ನಾಗರಿಕರು ಸಕಾಲ ಯೋಜನೆಯ ಸದುಪಯೋಗ ಮಾಡಿಕೊಳ್ಳುವ ಮೂಲಕ ನಿಗಧಿತ ಅವಧಿಯಲ್ಲಿ ಸೇವೆ ಪಡೆಯುವಂತೆ ಜಿಲ್ಲಾಧಿಕಾರಿ    ಎನ್. ಜಯರಾಂ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry