ಸಕಾಲ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ

7

ಸಕಾಲ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ

Published:
Updated:

ಕೊಪ್ಪಳ: ಸಕಾಲ ಯೋಜನೆಯಡಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 375 ಸೇವೆಗಳು ಲಭ್ಯವಿದ್ದು, ಈ ಪೈಕಿ 69 ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸಕಾಲ ಯೋಜನೆಯನ್ನು ಇನ್ನಷ್ಟು ಪರಿಣಾ­ಮಕಾರಿಯಾಗಿ ಜಾರಿಗೊಳಿಸಬೇಕು ಎಂದು ರಾಜ್ಯ ಸಕಾಲ ಮಿಷನ್ ನಿರ್ದೇಶಕ ಎಂ. ಮನೋಜ್ ಸೂಚನೆ ನೀಡಿದರು.

ಜಿಲ್ಲಾ ಆಡಳಿತ ಭವನದ ಸಭಾಂಗಣ­ದಲ್ಲಿ ಸಕಾಲ ಯೋಜನೆಯ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.ಸಾರ್ವಜನಿಕರಿಗೆ ಸರ್ಕಾರದ ಸೌಲ­ಭ್ಯ­ಗಳು ಕಾಲಕ್ಕೆ ಸರಿಯಾಗಿ, ವಿಳಂಬಕ್ಕೆ ಆಸ್ಪದ ಇಲ್ಲದಂತೆ ಒದಗಿಸುವ ಉದ್ದೇಶ­ದಿಂದ ಸಕಾಲ ನಾಗರಿಕ ಸೇವಾ ಖಾತ್ರಿ ಯೋಜನೆ ಜಾರಿಗೆ ಬಂದಿದೆ. ಆಗಸ್ಟ್ ಅಂತ್ಯದವರೆಗೆ ಕೊಪ್ಪಳ ಜಿಲ್ಲೆಯಲ್ಲಿ 7,52,732 ಅರ್ಜಿಗಳು ಸಕಾಲ ಯೋಜನೆಯಡಿ ವಿವಿಧ ಇಲಾಖೆಯಲ್ಲಿ ಸ್ವೀಕೃತಗೊಂಡು, 7,35,745 ಅರ್ಜಿ­ಗಳು ನಿಗದಿತ ಸಮಯದಲ್ಲಿ ವಿಲೇವಾರಿ­ಯಾಗಿವೆ. ಆದರೆ, ಆಗಸ್ಟ್ ತಿಂಗಳಿನಲ್ಲಿ ರಾಜ್ಯಮಟ್ಟದಲ್ಲಿ 10ನೇ ಸ್ಥಾನದಲ್ಲಿದ್ದ ಕೊಪ್ಪಳ ಜಿಲ್ಲೆ ಸೆಪ್ಟಂಬರ್‌ನಲ್ಲಿ 21ನೇ ಸ್ಥಾನಕ್ಕೆ ಕುಸಿದಿದೆ. ಗಂಗಾವತಿ ಮತ್ತು ಯಲಬುರ್ಗಾ ತಾಲ್ಲೂಕಿನಲ್ಲಿ ಬಹಳಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅಲ್ಲದೆ ವಿವಿಧ ಇಲಾಖೆಗಳು ಅರ್ಜಿಗಳನ್ನು ಸಕಾಲ ಯೋಜನೆಯಡಿ ಪಡೆಯದೆ ‘ಬೈಪಾಸ್’ ಮಾರ್ಗದಲ್ಲಿಯೇ ವಿಲೇ­ವಾರಿ ಮಾಡುತ್ತಿರುವುದು ಕಂಡು­ಬಂದಿದ್ದು, ಇದು ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ, ಅಂತಹ ಅಧಿಕಾ­ರಿಗಳು ಕಠಿಣ ಕ್ರಮ ಎದುರಿಸಬೇಕಾ­ಗುತ್ತದೆ ಎಂದು ಎಚ್ಚರಿಸಿದರು.ಸೆಪ್ಟೆಂಬರ್‌ನಲ್ಲಿ ಜಿಲ್ಲೆಯ 33 ಗ್ರಾಮ ಪಂಚಾಯಿತಿಗಳಲ್ಲಿ ಸಕಾಲದ ಅಡಿ ಒಂದೂ ಅರ್ಜಿ ಸ್ವೀಕೃತಗೊಂಡಿಲ್ಲ, 44 ಗ್ರಾ.ಪಂ.ಗಳಲ್ಲಿ 10ಕ್ಕೂ ಕಡಿಮೆ ಅರ್ಜಿಗಳು ಸ್ವೀಕೃತಗೊಂಡಿವೆ. ಗ್ರಾಮೀ­ಣಾ­ಭಿವೃದ್ಧಿ ಮತ್ತು ಪಂಚಾ­ಯತ್‌­ರಾಜ್ ಇಲಾಖೆ, ಪೌರಾಡಳಿತ ಹಾಗೂ ಕಂದಾಯ ಇಲಾಖೆಯಲ್ಲಿ ಸಕಾಲ ಯೋಜನೆಯನ್ನು ಇನ್ನಷ್ಟು ಪರಿ­ಣಾಮಕಾರಿಯಾಗಿ ಜಾರಿಗೊಳಿ­ಸಬೇಕು ಎಂದು ನುಡಿದರು.ಸಕಾಲ ಮಿಷನ್ ತರಬೇತುದಾರ ವರಪ್ರಸಾದ ರೆಡ್ಡಿ ಅವರು ಸಕಾಲ ಯೋಜನೆಯಡಿ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ಸಹಾಯಕ ಆಯುಕ್ತ ಮಂಜು­­ನಾಥ್, ಜಿಲ್ಲಾ ಸಂಖ್ಯಾ ಸಂಗ್ರ­ಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry