ಬಾಗಲಕೋಟೆ ಜಿಲ್ಲೆ ಸಕ್ಕರೆ ಹಾಗೂ ಸಿಮೆಂಟ್ ಉದ್ಯಮದಲ್ಲೂ ಮುಂಚೂಣಿಯಲ್ಲಿದೆ. ಇಲ್ಲಿನ ಆರೂ ತಾಲ್ಲೂಕುಗಳು ಒಂದೊಂದು ಬಗೆಯ ಖನಿಜ ಸಂಪತ್ತು, ಸಕ್ಕರೆ ಕಾರ್ಖಾನೆ ಹಾಗೂ ಸಿಮೆಂಟ್ ಕಾರ್ಖಾನೆಗಳನ್ನು ಹೊಂದಿವೆ.
ಹುನಗುಂದ ತಾಲ್ಲೂಕು ಬಣ್ಣದ ಶಿಲೆಗಳಿಗೆ ಪ್ರಸಿದ್ಧಿ. ಇಲ್ಲಿನ ಪಿಂಕ್ ಗ್ರಾನೈಟ್ (ರೂಬಿ ರೆಡ್ ಹಾಗೂ ಇಂಪಿರಿಯಲ್ ರೆಡ್)ಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇದೆ. ತಾಲ್ಲೂಕಿನಲ್ಲಿ ಕಬ್ಬಿಣದ ಅದಿರಿನ ನಿಕ್ಷೇಪಗಳಿವೆ. ಸಾಧಾರಣ ಗುಣಮಟ್ಟದ ಅದಿರು ಕಬ್ಬಿಣ ಹಾಗೂ ಸಿಮೆಂಟ್ ಕಾರ್ಖಾನೆಗಳಲ್ಲಿ ಬಳಕೆಯಾಗುತ್ತಿದೆ.
ಸುಣ್ಣದ ಕಲ್ಲು ಹಾಗೂ ಡೊಲೊಮೈಟ್‌ಗಳ ನಿಕ್ಷೇಪಗಳು ಬಾಗಲಕೋಟೆ, ಬಾದಾಮಿ, ಮುಧೋಳ ಹಾಗೂ ಬೀಳಗಿ ತಾಲ್ಲೂಕುಗಳಲ್ಲಿವೆ. ಸಿಮೆಂಟ್, ಸುಣ್ಣ-ಬಣ್ಣ, ಟೈಲ್ಸ್, ಸಕ್ಕರೆ, ಸ್ಟೀಲ್ ಮತ್ತಿತರ ಉದ್ಯಮಗಳಿಗೆ ಪೂರಕವಾದ ವಾತಾವರಣ ಜಿಲ್ಲೆಯಲ್ಲಿದೆ. ಜೆ.ಕೆ. ಸಿಮೆಂಟ್, ದಾಲ್ಮಿಯಾ ಸಿಮೆಂಟ್, ಕನೋರಿಯಾ ಗ್ರೂಪ್‌ನ ಬಾಗಲಕೋಟೆ ಸಿಮೆಂಟ್, ಕಾಟವಾ ಗ್ರೂಪ್ ಸಿಮೆಂಟ್, ರತ್ನಾ ಸಿಮೆಂಟ್, ಲೋಕಾಪುರ ಸಿಮೆಂಟ್, ನಿರಾಣಿ ಸಿಮೆಂಟ್, ಚನ್ನಗಿರಿ ಸಿಮೆಂಟ್ ಗ್ರೂಪ್‌ಗೆ ಸೇರಿದ ಅನೇಕ ಕಾರ್ಖಾನೆಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿವೆ.
ಸಕ್ಕರೆ ಸೀಮೆ
ಜಿಲ್ಲೆ ಸಕ್ಕರೆ ಹಾಗೂ ಬೆಲ್ಲ ತಯಾರಿಕೆಯಲ್ಲಿ ಮುಂದಿದೆ. ನೀರಾವರಿ ಸೌಲಭ್ಯ ಇರುವ ಜಮಖಂಡಿ, ಮುಧೋಳ ಹಾಗೂ ಬೀಳಗಿ ತಾಲ್ಲೂಕುಗಳಲ್ಲಿ ಕಬ್ಬು ಪ್ರಮುಖ ಬೆಳೆ. 12 ಸಕ್ಕರೆ ಕಾರ್ಖಾನೆಗಳು ಮತ್ತು ಬೆಲ್ಲ ತಯಾರಿಸುವ ಹಲವಾರು ಆಲೆಮನೆಗಳು ಇಲ್ಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.