ಭಾನುವಾರ, ಅಕ್ಟೋಬರ್ 20, 2019
27 °C

ಸಕ್ಕರೆ ಅಚ್ಚು ಹಬ್ಬಕ್ಕೆ ನೆಚ್ಚು

Published:
Updated:

ನಾಲಿಗೆ ಮೇಲಿಟ್ಟಾಕ್ಷಣ ಕರಗಿ ನೀರಾಗುವ ಸಕ್ಕರೆ ಅಚ್ಚುಗಳ ತಯಾರಿ ಈಗಾಗಲೇ ಆರಂಭವಾಗಿದೆ. ಸುಗ್ಗಿ ಹಬ್ಬ ಸಂಕ್ರಾಂತಿ ಹತ್ತಿರ ಬಂದಾಕ್ಷಣ ಸಂಪ್ರದಾಯಸ್ಥರ ಮನೆಯಲ್ಲಿ ಸಕ್ಕರೆ ಅಚ್ಚುಗಳನ್ನು ಖುದ್ದು ತಯಾರಿಸುವ ಸಂಭ್ರಮ. ಕರ್ನಾಟಕದ ವಿಶೇಷ ತಿಂಡಿಗಳಲ್ಲಿ ಸಕ್ಕರೆ ಅಚ್ಚು ಕೂಡ ಒಂದು.

 

ಸಂಕ್ರಾಂತಿ ಹಬ್ಬದಂದು ಎಳ್ಳುಬೆಲ್ಲ, ಕಬ್ಬಿನ ತುಂಡಿನೊಂದಿಗೆ ಸಕ್ಕರೆ ಅಚ್ಚನ್ನು ಗೆಳೆಯರು, ಬಂಧುಗಳ ನಡುವೆ ವಿನಿಮಯ ಮಾಡಿಕೊಳ್ಳುವುದು ಕರ್ನಾಟಕದ ಸಂಪ್ರದಾಯ. ದಕ್ಷಿಣ ಭಾರತದ ತಿನಿಸೆಂದೇ ಸಕ್ಕರೆ ಅಚ್ಚನ್ನು ಕರೆದರೂ ಅದರ ಮೂಲ ಇರುವುದು ಕರ್ನಾಟಕದಲ್ಲಿಯೇ.ತಮಿಳುನಾಡಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ `ಪೊಂಗಲ್~ ಎಂಬ ನಾಮಧೇಯ ಪ್ರಾಪ್ತವಾಗಿದೆ. ಅದರಿಂದ ಅವರಿಗೆ ಹೊಸದಾಗಿ ಬೆಳೆದ ಅಕ್ಕಿಯಲ್ಲಿ ಸಿಹಿ ಪೊಂಗಲ್ ತಯಾರಿಸಿ ಸವಿಯುವ ಸಂಭ್ರಮ. ಕನ್ನಡಿಗರಿಗೆ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು ಹಂಚುವ ಸಡಗರ. ಜೊತೆಗೆ ಉತ್ತರ ಕರ್ನಾಟಕದ ಊರುಗಳಲ್ಲಿ ಮಕ್ಕಳಿಗೆ ಮತ್ತು ನವದಂಪತಿಗಳಿಗೆ ಸಕ್ಕರೆ ಅಚ್ಚುಗಳ ಹಾರವನ್ನು ಹಾಕಿ ಆರತಿ ಎತ್ತುವುದು ವಾಡಿಕೆ.ಸಕ್ಕರೆ ಅಚ್ಚನ್ನು ತಯಾರಿಸುವುದು ಸಾವಧಾನದ ಕೆಲಸ. ಎರಡು ಗಂಟೆ ನಿರ್ದಿಷ್ಟ ಪ್ರಮಾಣದ ಸಕ್ಕರೆಯನ್ನು ಅದು ಮುಳುಗುವಷ್ಟು ನೀರಿನಲ್ಲಿ ನೆನೆಸಬೇಕು. ನಂತರ ಅದನ್ನು ಶೋಧಿಸಿ ಒಲೆಯ ಮೇಲೆ ಕರಗಲು ಬಿಡಬೇಕು. ಕರಗಿದ ಸಕ್ಕರೆ ನೀರಿಗೆ ಮೊಸರು ಅಥವಾ ಹಾಲು ಸೇರಿಸಿ ಕದಡಬೇಕು.ನಂತರ ಅದನ್ನು ತೆಗೆದು ಶೋಧಿಸಿ ಮತ್ತೆ ಕುದಿಯಲು ಇಡಬೇಕು. ಅದಕ್ಕೆ ಲಿಂಬೆ ರಸ ಹಾಕಬೇಕು. ಪುನಃ ಅದನ್ನು ತೆಗೆದು ಶೋಧಿಸಿ ಮತ್ತೆ ಕುದಿಯಲು ಇಡಬೇಕು. ಪಾಕ ಹದಕ್ಕೆ ಬಂದ ತಕ್ಷಣ ಒಲೆಯಿಂದ ಕೆಳಗಿಳಿಸಿ ಅಚ್ಚಿನ ಮಣೆಗೆ ಅದನ್ನು ಸುರಿದು ಕೆಲ ಸಮಯದ ನಂತರ ಹೊರತೆಗೆದರೆ ಸಕ್ಕರೆ ಅಚ್ಚುಗಳು ತಯಾರಾಗಿರುತ್ತವೆ.ಹೊಸ ಬೆಳೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯದೊಂದಿಗೆ ಆರಂಭವಾದ ಸಂಕ್ರಾಂತಿ ಹಬ್ಬ ಕಾಲಾನಂತರದಲ್ಲಿ ವಿವಿಧ ಬಣ್ಣ ಪಡೆದುಕೊಂಡಿತು. ಆ ವರ್ಷ ಬೆಳೆದ ಎಳ್ಳು ಬೆಲ್ಲದೊಂದಿಗೆ ಹೊಸದಾಗಿ ಬೆಳೆದ ಕಬ್ಬಿನ ತುಂಡನ್ನು ಕೊಡಲಾಗುತ್ತಿತ್ತು. ಎಳ್ಳು-ಬೆಲ್ಲದಲ್ಲಿ ಸಿಹಿಯ ಪ್ರತಿನಿಧಿಯಾಗಿ ಬೆಲ್ಲ ಇದ್ದರೂ ಸಿಹಿ ಪ್ರಮಾಣ ಹೆಚ್ಚಿರಬೇಕು ಎಂಬ ಪರಿಕಲ್ಪನೆಯಿಂದ ಕಬ್ಬಿನ ತುಂಡನ್ನು ಕೊಡಲಾಗುತ್ತಿತ್ತು. ಕಬ್ಬು ಸಿಗದ ಪಟ್ಟಣಗಳಲ್ಲಿ ಕಬ್ಬಿನ ಪ್ರತಿನಿಧಿಯಾದ ಬೆಲ್ಲದ ಅಚ್ಚನ್ನು ಹೆಚ್ಚುವರಿ ಎಂಬಂತೆ ಕೊಡುವ ಸಂಪ್ರದಾಯ ಆರಂಭವಾಯಿತು.

 

ಮಾರುಕಟ್ಟೆಯಲ್ಲಿ ಸಕ್ಕರೆ ಹೆಚ್ಚು ದೊರಕಲು ಆರಂಭವಾದ ನಂತರ ಬೆಲ್ಲದ ಜಾಗಕ್ಕೆ ಸಕ್ಕರೆ ಬಂತು. ಹಬ್ಬದ ಆಚರಣೆ ಹೆಚ್ಚು ನಾಜೂಕಾಯಿತು. ಸಕ್ಕರೆ ಜಾಗಕ್ಕೆ ಸಕ್ಕರೆ ಅಚ್ಚುಗಳು ಬಂದವು. ಇದೀಗ ಕಬ್ಬಿನ ಪ್ರತಿನಿಧಿಯಾಗಿ ಕೊಡಮಾಡಲಾಗುತ್ತಿದ್ದ ಬೆಲ್ಲ ಮತ್ತು ಸಕ್ಕರೆ ಜಾಗಕ್ಕೆ ಸಕ್ಕರೆ ಅಚ್ಚುಗಳು ಪಟ್ಟಾಗಿ ಬಂದು ಕುಳಿತು ಬಿಟ್ಟಿವೆ.ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆ ತುಂಬಾ ಕಬ್ಬಿನ ಜಲ್ಲೆಗಳಿದ್ದರೂ ಕೂಡ ಕಬ್ಬಿನೊಂದಿಗೆ ಸಕ್ಕರೆ ಅಚ್ಚನ್ನು ಕೊಡಬೇಕು ಎಂಬುದನ್ನು ಜನ ನಿಯಮದಂತೆ ಪಾಲಿಸಿಕೊಂಡು ಹೋಗುತ್ತಿದ್ದಾರೆ.ಸಕ್ಕರೆಗೆ ಮುಂಚೆ ಬೆಲ್ಲವನ್ನೇ ಹಾಲು ಅಥವಾ ಮೊಸರಿನೊಂದಿಗೆ ಕುದಿಸಿಕೊಂಡು ಪಾಕ ತಯಾರಿಸಿ ಅಚ್ಚು ಮಾಡಲಾಗುತ್ತಿತ್ತಂತೆ. ಅದಕ್ಕೆ ವಿಶಿಷ್ಟ ರುಚಿ ಇದ್ದು, ಬೆಲ್ಲದ ಬಣ್ಣವೇ ಅದಕ್ಕೂ ಇರುತ್ತಿತ್ತು. ಸಕ್ಕರೆ ಬಳಕೆ ಆರಂಭವಾದ ನಂತರ ಸಕ್ಕರೆಯಲ್ಲಿ ಅಚ್ಚುಗಳನ್ನು ತಯಾರಿಸಲಾಗುತ್ತಿದೆ. ಸಣ್ಣಸಣ್ಣ ಬೆಲ್ಲದ ಅಚ್ಚುಗಳನ್ನೇ ಹೋಲುವ ಸಕ್ಕರೆ ಅಚ್ಚುಗಳ ಜಾಗಕ್ಕೆ ಇದೀಗ ವಿವಿಧ ಆಕಾರದ, ತರಹೇವಾರಿ ಬಣ್ಣದ ಸಕ್ಕರೆ ಅಚ್ಚುಗಳು ಬಂದಿವೆ. ಮಾರುಕಟ್ಟೆಯಲ್ಲಿ ಸಿಗುವ ಸಕ್ಕರೆ ಅಚ್ಚುಗಳಿಗೆ ರಾಸಾಯನಿಕ ಬಣ್ಣಗಳನ್ನು ಹಾಕಲಾಗಿರುತ್ತದೆ.ಹಬ್ಬ ಬರುವ ಒಂದು ವಾರ ಮುಂಚೆಯೇ ಸಕ್ಕರೆ ಅಚ್ಚುಗಳು ಮಾರುಕಟ್ಟೆಯನ್ನು ಆಕ್ರಮಿಸಿವೆ. ಮಲ್ಲೇಶ್ವರ, ಗಾಂಧಿಬಜಾರ್, ಜಯನಗರ, ವಿಜಯನಗರ ಮಾರುಕಟ್ಟೆ, ಬಸವನಗುಡಿ ಅಂಗಡಿ ಸಾಲುಗಳ ಮುಂಭಾಗದಲ್ಲಿಯೇ ಪ್ರತಿಷ್ಠಾಪನೆಯಾಗಿವೆ. ಅವುಗಳಲ್ಲಿ ಕೆಲವಂತೂ ಹಲ್ಲುಗಳನ್ನೇ ಪುಡಿ ಮಾಡುವಷ್ಟು ಗಟ್ಟಿಯಾಗಿರುತ್ತವೆ. ಮೊಸರು ಮತ್ತು ನಿಂಬೆ ಹಣ್ಣಿನ ಪ್ರಮಾಣದ ಮೇಲೆ ಅಚ್ಚುಗಳ ಮೃದುತ್ವ ಅವಲಂಬಿಸಿರುತ್ತದೆ.

 

ಅವುಗಳಿಗೆ ಅತಿಯಾಗಿ ರಾಸಾಯನಿಕ ಬಣ್ಣಗಳನ್ನು ಹಾಕುವುದರಿಂದ ಸಕ್ಕರೆ ಅಚ್ಚುಗಳ ನೈಜ ರುಚಿ ಸಿಗುವುದಿಲ್ಲ. ಮನೆಯಲ್ಲೇ ಶುದ್ಧವಾದ ನೀರಿನಿಂದ ತಯಾರಿಸಿದ ಸಕ್ಕರೆ ಅಚ್ಚುಗಳನ್ನು ತಿಂದಾಗ ಮಾತ್ರ ಅದರ ಸವಿಯಾದ ರುಚಿ ಮುಂದಿನ `ಸಂಕ್ರಾಂತಿ~ ಹಬ್ಬಕ್ಕಾಗಿ ಕಾಯುವಂತೆ ಮಾಡುವುದು ಖಂಡಿತ.

 

Post Comments (+)