ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಕಾರ್ಮಿಕ ಸಂಘ ಆರೋಪ

ಸೋಮವಾರ, ಜೂಲೈ 22, 2019
27 °C

ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಕಾರ್ಮಿಕ ಸಂಘ ಆರೋಪ

Published:
Updated:

ಬ್ರಹ್ಮಾವರ: ನಗರದ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಗಿಲು ಮುಚ್ಚಿ ಸುಮಾರು ಐದು ವರ್ಷಗಳು ಕಳೆದಿವೆ. ಯಂತ್ರೋಪಕರಣಗಳು ತುಕ್ಕು ಹಿಡಿದು ಕಳಚಿ ಬೀಳುತ್ತಿವೆ. ರೈತರೂ ಕಬ್ಬು ಬೆಳೆಯನ್ನು ಸಂಪೂರ್ಣವಾಗಿ ಕೈಬಿಟ್ಟು ಬೇರೆ ಬೇರೆ ಬೆಳೆಯನ್ನು ಅವಲಂಬಿಸಿದ್ದಾರೆ.ಕಬ್ಬಿನ ಬೆಳೆ ಅವಸಾನಗೊಂಡಿರುತ್ತದೆ. ಆದಾಗ್ಯೂ ಕಾರ್ಖಾನೆಯ ಪ್ರಸ್ತುತ ಆಡಳಿತ ಮಂಡಳಿ ಇನ್ನೂ ಕಾರ್ಖಾನೆ ನಡೆಸುತ್ತೇವೆ ಎಂದು ಹೇಳಿಕೊಳ್ಳುತ್ತಿದೆ. ಕಾರ್ಖಾನೆಯೇ ಮುಚ್ಚಿರುವಾಗ ಆಡಳಿತ ಮಂಡಳಿ ಯಾವ ಉದ್ದಾರಕ್ಕೆ ಎಂದು ಕಾರ್ಖಾನೆಯ ಕಾರ್ಮಿಕ ಸಂಘ ಪ್ರಶ್ನಿಸಿದೆ.ಕಳೆದ 10 ವರ್ಷದಿಂದ ಕಾರ್ಖಾನೆಯನ್ನು ಅಭಿವೃದ್ದಿ ಪಡಿಸುವ ಯಾವುದೇ ನಿರ್ಣಯವನ್ನು ಕೈಗೊಳ್ಳದ ಆಡಳಿತ ಮಂಡಳಿಯು ಅದನ್ನು ಮುಚ್ಚಿದ್ದು ಇದೀಗ ಪುನಃ ಕಾರ್ಖಾನೆಯ ಉತ್ತಮ ದಿನದ ನಿರೀಕ್ಷೆ ಇದೆ ಎಂದು ಸಾರ್ವಜನಿಕರ ಹಾಗೂ ರೈತರ ದಾರಿ ತಪ್ಪಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಕಾರ್ಮಿಕರ ಸಂಘ ಟೀಕಿಸಿದೆ.ಕಾರ್ಖಾನೆ ಮುಚ್ಚಿ ಸುಮಾರು 5 ವರ್ಷಗಳಾದರೂ ರೈತರ ಕಬ್ಬಿನ ಹಣ, ಕಾರ್ಮಿಕರ ಬಾಕಿ ವೇತನ, ಸರ್ಕಾರದ ಸಾಲ, ತೆರಿಗೆ ಯಾವುದನ್ನೂ ಪಾವತಿಸುವ ವಿಚಾರದಲ್ಲಿ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳದೆ ಕೇವಲ ಕಾರ್ಖಾನೆಯ ಆಡಳಿತ ನಡೆಸುತ್ತಾ ಕಾರ್ಖಾನೆಯ ಸೊತ್ತುಗಳು ಸ್ವಯಾರ್ಜಿತ ಆಸ್ತಿಯಂತೆ ವರ್ತಿಸುತ್ತಿದ್ದಾರೆ.ಅಂದಿನ ಆಡಳಿತ ಮಂಡಳಿಯವರು ಕಾರ್ಖಾನೆಯ ಅಭಿವೃದ್ಧಿಗಾಗಿ ಅವಿರತ ಶ್ರಮದಿಂದ ಸರ್ಕಾರದ ಮನವೊಲಿಸಿ ಅನುದಾನ ಪಡೆದು ಕಾರ್ಖಾನೆಯನ್ನು ಒಂದು ಹಂತಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈಗಿರುವ ಆಡಳಿತ ಮಂಡಳಿಯು ಸರ್ಕಾರದಿಂದ ಕಿಲುಬು ಕಾಸನ್ನು ತರಲಾಗದೇ ಕೇವಲ ಹಿಂದಿನವರು ಮಾಡಿದ ಸಾಧನೆಯನ್ನು ತಾವು ಮಾಡಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಸಂಘ ದೂರಿದೆ.ಜಿಲ್ಲಾ ಉಸ್ತುವಾರಿ ಸಚಿವರು ವಿಧಾನಪರಿಷತ್ತಿನಲ್ಲೇ ಸಕ್ಕರೆ ಕಾರ್ಖಾನೆ ರಕ್ಷಣೆ ಕಷ್ಟ ಎಂದು ತಿಳಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಆಡಳಿತ ಮಂಡಳಿಯವರು ಆಸ್ತಿ ಮಾರಾಟ ಅಥವಾ ಕಾರ್ಖಾನೆಯ 110 ಎಕರೆ ಜಾಗವನ್ನು ಸ್ವಂತ ಮಾಡಿಕೊಳ್ಳುವ ಉದ್ದೇಶ ಹೊಂದಿದೆಯೋ ತಿಳಿಯುತ್ತಿಲ್ಲ ಎಂದು ಕಾರ್ಮಿಕರ ಸಂಘದ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry