ಸಕ್ಕರೆ ಕಾರ್ಖಾನೆ ವಿರುದ್ಧ ಹೋರಾಟಕ್ಕೆ ಸಚಿವ ಬೆಂಬಲ

7

ಸಕ್ಕರೆ ಕಾರ್ಖಾನೆ ವಿರುದ್ಧ ಹೋರಾಟಕ್ಕೆ ಸಚಿವ ಬೆಂಬಲ

Published:
Updated:
ಸಕ್ಕರೆ ಕಾರ್ಖಾನೆ ವಿರುದ್ಧ ಹೋರಾಟಕ್ಕೆ ಸಚಿವ ಬೆಂಬಲ

ಹೊಸಪೇಟೆ: ಸ್ಥಳೀಯ ಐಎಸ್‌ಆರ್ ಸಕ್ಕರೆ ಕಾರ್ಖಾನೆಯು ಕಬ್ಬು ಅರೆಯುವುದನ್ನು ತಕ್ಷಣ ಆರಂಭಿಸಬೇಕು ಮತ್ತು ರೈತರ ಬಾಕಿ ಪಾವತಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಕಾರ್ಖಾನೆ ಮೇಲೆ ಒತ್ತಡ ಹೇರಲು ರೈತರು ಶನಿವಾರ ಕರೆ ನೀಡಿದ್ದ ಹೊಸಪೇಟೆ ಬಂದ್‌ನಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರೂ ಭಾಗಿಯಾಗಿ ಪ್ರತಿಭಟನಾಕಾರರಿಗೆ ಬೆಂಬಲವಾಗಿ ನಿಂತರು.ಬಂದ್ ಪೂರ್ಣ ಯಶಸ್ವಿಯಾಯಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ವ್ಯಾಪಾರ- ವಹಿವಾಟು, ಶಾಲೆ- ಕಾಲೇಜು, ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದವು. ಪ್ರತಿಭಟನಾಕಾರರು ನಗರದಲ್ಲಿ ಮೆರವಣಿಗೆ, ಬೈಕ್ ರ‌್ಯಾಲಿ ನಡೆಸಿದರು. ನಂತರ ಕಾರ್ಖಾನೆ ಮುಂದೆ ರೈತರು ನಡೆಸಿದ ಧರಣಿಯಲ್ಲಿ ಸಚಿವರೂ ಭಾಗಿಯಾದದ್ದು ವಿಶೇಷ.ಈ ಸಂದರ್ಭದಲ್ಲಿ ಮಾತನಾಡಿದ ಆನಂದ್ ಸಿಂಗ್, `ಕಾರ್ಖಾನೆ ಆಡಳಿತ ಮಂಡಳಿಯು ರೈತರು ಕಡಿದು ಇಟ್ಟಿರುವ ಕಬ್ಬನ್ನು ಅರೆಯಲು ಮುಂದಾಗುತ್ತಿಲ್ಲ. ಜಿಲ್ಲೆಯ ಹೊರಗಿರುವ ಅನ್ಯ ಕಾರ್ಖಾನೆಗೆ ಸಾಗಿಸಲೂ ಬಿಡುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದೆ. ಸರಿಪಡಿಸಲು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ಇಲ್ಲವಾದಲ್ಲಿ ನಾನು ಸಚಿವನಾಗಿದ್ದೂ ಪ್ರಯೋಜನವಿಲ್ಲ. ರೈತರೊಂದಿಗೆ ಹೋರಾಟ ಮುಂದುವರಿಯುತ್ತೇನೆ' ಎಂದು ಹೇಳಿದರು.`ಐದಾರು ವರ್ಷಗಳಿಂದಲೂ ಈ ಕಾರ್ಖಾನೆ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಕಾರ್ಖಾನೆಯ ಈ ಧೋರಣೆಯನ್ನು ಖಂಡಿಸಲು  ಹಮ್ಮಿಕೊಂಡಿರುವ ಹೋರಾಟದಲ್ಲಿ ನಾನು ಭಾಗಿಯಾಗಿದ್ದೇನೆ. ಸರ್ಕಾರ ಇದನ್ನು ತಪ್ಪಾಗಿ ಭಾವಿಸಿ, ಸಚಿವ ಸ್ಥಾನದಿಂದ ನನ್ನನ್ನು ವಜಾ ಮಾಡಿದರೂ ಚಿಂತಿಸುವುದಿಲ್ಲ. ಹೋರಾಟಕ್ಕೆ ನಾನು ಬೆಂಬಲ ಮುಂದುವರಿಸುತ್ತೇನೆ' ಎಂದು ಗುಡುಗಿದರು.ಕಬ್ಬು ಖರೀದಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಗೆ ಗಡುವು ನೀಡಿದ್ದ ಜಿಲ್ಲಾಡಳಿತ ಪ್ರಸ್ತುತ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಕಾರ್ಖಾನೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry