ಮಂಗಳವಾರ, ಜೂನ್ 15, 2021
27 °C

ಸಕ್ಕರೆ: 6 ತಿಂಗಳಲ್ಲಿ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕ್ಕರೆ: 6 ತಿಂಗಳಲ್ಲಿ ವರದಿ

ನವದೆಹಲಿ (ಪಿಟಿಐ): ಸಕ್ಕರೆ ವಹಿವಾಟು ನಿಯಂತ್ರಣ ಮುಕ್ತಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ನೇಮಿಸಿರುವ ತಜ್ಞರ ಸಮಿತಿಯು ಮುಂದಿನ 6 ತಿಂಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ. ರಂಗರಾಜನ್ ಹೇಳಿದ್ದಾರೆ.ಕಳೆದ ಜನವರಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಸಿ ರಂಗರಾಜನ್ ನೇತೃತ್ವದಲ್ಲಿ ಈ ಸಮಿತಿ ರಚಿಸಿದ್ದರು. ಸಕ್ಕರೆ ವಲಯವನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸುವುದಕ್ಕೆ ಸಂಬಂಧಿಸಿದಂತೆ ಇರುವ ಸಾಧಕ ಬಾಧಕಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು.`ಬ್ರೆಜಿಲ್ ಸೇರಿದಂತೆ ಹಲವು ದೇಶಗಳಲ್ಲಿ ಸಕ್ಕರೆ ವಲಯವನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಲಾಗಿದೆ. ದೇಶದಲ್ಲೂ ಇದನ್ನು ಜಾರಿಗೊಳಿಸಲು ಚಿಂತಿಸುತ್ತಿದ್ದೇವೆ~ ಎಂದು ಹಿರಿಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ತಿಳಿಸಿದ್ದಾರೆ.ರಂಗರಾಜನ್, ಕೌಶಿಕ್ ಬಸು ಸೇರಿದಂತೆ, ಆಹಾರ ಮತ್ತು ಕೃಷಿ ಇಲಾಖೆಯ ಕಾರ್ಯದರ್ಶಿಗಳು, ಕೃಷಿ ವೆಚ್ಚ ಮತ್ತು ದರ ಇಲಾಖೆಯ ಅಧ್ಯಕ್ಷ (ಸಿಎಸಿಪಿ) ಅಶೋಕ್ ಗುಲಾಟಿ, ಮಾಜಿ ಕೃಷಿ ಕಾರ್ಯದರ್ಶಿ  ನಂದಕುಮಾರ್ ಮತ್ತು ಕೆ.ಪಿ ಕೃಷ್ಣನ್ ಕೂಡ ಈ ಸಮಿತಿಯಲ್ಲಿದ್ದಾರೆ.ಸದ್ಯಕ್ಕೆ ಸಕ್ಕರೆ ವಲಯವು, ಉತ್ಪಾದನೆಯಿಂದ ವಿತರಣೆಯವರೆಗೆ ಸರ್ಕಾರಿ ನಿಯಂತ್ರಣದಲ್ಲಿದೆ. ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಐಎಸ್‌ಎಂಎ)  ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳ  ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಸಿಎಫ್) ಸಕ್ಕರೆ ವಲಯವನ್ನು ನಿಯಂತ್ರಣ ಮುಕ್ತಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿವೆ. ಸಕ್ಕರೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಮತಿ ನೀಡಬೇಕು, ಸಾರ್ವಜನಿಕ ಪಡಿತರ ವಿತರಣೆಗಾಗಿ ಲೆವಿ ಸಕ್ಕರೆ ನಿಯಮ ಕೈಬಿಡಬೇಕು ಎನ್ನುವುದು ಒಕ್ಕೂಟಗಳ ಆಗ್ರಹವಾಗಿದೆ. ಈಗ ಜಾರಿಯಲ್ಲಿರುವ `ಲೆವಿ~ ನಿಯಮದ ಪ್ರಕಾರ, ಸಕ್ಕರೆ ಕಾರ್ಖಾನೆಗಳು ತಮ್ಮ ಒಟ್ಟು ಉತ್ಪಾದನೆಯ ಶೇ 10ರಷ್ಟು ಭಾಗವನ್ನು ಪಡಿತರ ವಿತರಣೆಗಾಗಿ ಸರ್ಕಾರಕ್ಕೆ ಮಾರಾಟ ಮಾಡುವುದು ಕಡ್ಡಾಯವಾಗಿದೆ. ಪಡಿತರ ಅಂಗಡಿಗಳಲ್ಲಿ ಮಾರಾಟ ಮಾಡುವ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಸರ್ಕಾರಕ್ಕೆ ಕಾರ್ಖಾನೆಗಳು ಸಕ್ಕರೆ ಮಾರಾಟ ಮಾಡಬೇಕಾಗಿದೆ.  ಈ ರೀತಿ ಪ್ರತಿ ವರ್ಷ ಒಟ್ಟು ಉತ್ಪಾದನೆಯ ಶೇ 60ರಷ್ಟು ಸಕ್ಕರೆ ಸರ್ಕಾರಕ್ಕೆ ಮಾರಾಟವಾಗುವುದರಿಂದ ಒಟ್ಟು ರೂ2,500ರಿಂದ ರೂ3 ಸಾವಿರ ಕೋಟಿಗಳಷ್ಟು ನಷ್ಟವಾಗುತ್ತಿದೆ ಎಂದೂ ಒಕ್ಕೂಟಗಳು ದೂರಿವೆ.ಸಕ್ಕರೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೆ ಆಹಾರ ಸಚಿವಾಲಯ ವಿಧಿಸಿರುವ `ತಿಂಗಳ ಬಿಡುಗಡೆ ವ್ಯವಸ್ಥೆ~ಯನ್ನೂ ಕೈಬಿಡುವಂತೆ ಆಗ್ರಹಿಸಲಾಗಿದೆ. ಸದ್ಯ ಪ್ರಪಂಚದಲ್ಲಿಯೇ ಅತಿ ಹೆಚ್ಚು ಸಕ್ಕರೆ ಬಳಸುವ ದೇಶ ಭಾರತ. ಸಕ್ಕರೆ ಉತ್ಪಾದನೆಯಲ್ಲೂ ಎರಡನೆಯ ಸ್ಥಾನದಲ್ಲಿದೆ.  ದೇಶದ ಒಟ್ಟು ಸಕ್ಕರೆ ಉತ್ಪಾದನೆಯು ಪ್ರಸಕ್ತ ವರ್ಷ 26 ದಶಲಕ್ಷ ಟನ್ ತಲುಪುವ ನಿರೀಕ್ಷೆ ಇದ್ದು, ಬೇಡಿಕೆಯು 22 ದಶಲಕ್ಷ ಟನ್‌ಗಳಷ್ಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.