ಸೋಮವಾರ, ಮೇ 23, 2022
27 °C

ಸಕ್ರಮ ಅವಧಿ ವಿಸ್ತರಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಭೂ ಕಂದಾಯ ಕಾಯ್ದೆಗೆ 2009ರಲ್ಲಿ ತಂದ ತಿದ್ದುಪಡಿಯಂತೆ ಭೂ ಪರಿವರ್ತನೆಯಾಗದ    ರೆವಿನ್ಯೂ ನಿವೇಶನಗಳಿಗೆ ಭೂ ಪರಿವರ್ತನಾ ಶುಲ್ಕ ವಿಧಿಸಿ ಸಕ್ರಮಗೊಳಿಸುವ ಅವಧಿ ಪೂರ್ಣಗೊಂಡಿದ್ದು ಈ ಅವಧಿಯನ್ನು ಎರಡು ವರ್ಷಗಳ ಅವಧಿಗೆ ವಿಸ್ತರಿಸಲು ಕೋರಿ ಮೇಯರ್  ನೇತೃತ್ವದ ನಿಯೋಗ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದೆ.ಮೇಯರ್ ಎಸ್.ಕೆ. ನಟರಾಜ್, ಆಡಳಿತ ಪಕ್ಷ ನಾಯಕ ಬಿ.ಎಸ್. ಸತ್ಯನಾರಾಯಣ, ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್. ಸದಾಶಿವ ಹಾಗೂ ಆಯುಕ್ತ ಸಿದ್ದಯ್ಯ ಅವರಿದ್ದ ನಿಯೋಗ ಸೋಮವಾರ ಕಂದಾಯ ಸಚಿವ ಜಿ.ಕರುಣಾಕರರೆಡ್ಡಿ ಅವರನ್ನು ಭೇಟಿ ಮಾಡಿ     ಇತ್ತೀಚೆಗೆ ಮನವಿ ಪತ್ರ ಸಲ್ಲಿಸಿತು.‘2008ರ ಡಿ.31ರೊಳಗೆ ಭೂಮಿಯನ್ನು ಕೃಷಿಯೇತರ ಉಪಯೋಗಕ್ಕೆ ಬೆಂಗಳೂರುನಗರ ಜಿಲ್ಲಾಧಿಕಾರಿಯವರಿಂದ ಅನುಮೋದನೆ ಪಡೆಯದೇ ವಾಸಕ್ಕೆ ಉಪಯೋಗಿಸುತ್ತಿರುವ ರೆವಿನ್ಯೂ ನಿವೇಶನಗಳಿಗೆ ಕಾಯ್ದೆಯನ್ವಯ ಭೂ ಪರಿವರ್ತನಾ ಶುಲ್ಕ ಪಡೆದು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ 2009ರಲ್ಲಿ (2ನೇ) ತಿದ್ದುಪಡಿ ತರಲಾಗಿತ್ತು. ಅದರಂತೆ 2010ರ ಸೆಪ್ಟೆಂಬರ್‌ವರೆಗೆ ಗಡುವು ನೀಡಲಾಗಿತ್ತು’ ಎಂದು ಮೇಯರ್ ತಿಳಿಸಿದರು.‘ಆದರೆ ಈ ತಿದ್ದುಪಡಿ ಬಹುಮಂದಿಯ ಗಮನಕ್ಕೆ ಬಂದಿರಲಿಲ್ಲ. ಪರಿಣಾಮ ಬಹುಪಾಲು ರೆವಿನ್ಯೂ ನಿವೇಶನದಾರರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹಾಗಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಂದ 2ನೇ ತಿದ್ದುಪಡಿ ಗಡುವು ಅವಧಿಯನ್ನು ಇನ್ನೂ ಎರಡು ವರ್ಷಗಳ ಅವಧಿಗೆ ವಿಸ್ತರಿಸುವಂತೆ ಕೋರಿ ಮನವಿಪತ್ರ ಸಲ್ಲಿಸಲಾಯಿತು’ ಎಂದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಬಗ್ಗೆ ಕಾನೂನು ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.