ಸೋಮವಾರ, ಅಕ್ಟೋಬರ್ 14, 2019
22 °C

ಸಕ್ರಿಯ ಪೌರತ್ವಕ್ಕೆ ಸಿಎಂಸಿಎ ಸಾರಥ್ಯ

Published:
Updated:

ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ, ಮಹಿಳೆಯರ ಮೇಲೆ ದೌರ್ಜನ್ಯ ಮಿತಿ ಮೀರಿದೆ. ಸಂವಿಧಾನದ ಮೌಲ್ಯಗಳು ಗಾಳಿಯಲ್ಲಿ ತೂರಿಹೋಗಿವೆ. ಪ್ರಜಾಪ್ರಭುತ್ವದ ಬುನಾದಿ ಅಲುಗಾಡತೊಡಗಿದೆ.ಈ ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದೆಲ್ಲೆಡೆ ಹಾಹಾಕಾರ ಭುಗಿಲೇಳುತ್ತದೆ. ಈ ಅರಾಜಕತೆ ಸುಧಾರಣೆ ಆಗಬೇಕಾದರೆ ಪ್ರಜಾಪ್ರಭುತ್ವದ ಮೌಲ್ಯ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಪೌರಪ್ರಜ್ಞೆಗೆ ಮಕ್ಕಳ ಚಳವಳಿ ಸಂಸ್ಥೆ (ಸಿಎಂಸಿಎ).`ಸಕ್ರಿಯ ಪೌರತ್ವ~ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂಬ ದೃಢ ಆಶಯ ಇರಿಸಿಕೊಂಡು ಇದು ಕಾರ್ಯನಿರ್ವಹಿಸುತ್ತಿದೆ. ಜನರ ಆಶೋತ್ತರಗಳನ್ನು ಈಡೇರಿಸುವುದು ಸರ್ಕಾರದ ಕರ್ತವ್ಯ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಹೊಣೆ ಸರ್ಕಾರದ್ದು. ನಾಗರಿಕರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ದೊರಸಿಕೊಡುವಂತೆ ಸರ್ಕಾರವನ್ನು ಗೋಗರೆಯುವುದಲ್ಲ.ಬದಲಾಗಿ ಅವುಗಳನ್ನು ಒದಗಿಸುವಂತೆ ಆಜ್ಞೆ ಮಾಡುವುದು. ಈ ಮನೋಭಾವ ಬೆಳೆಯಬೇಕೆಂದರೆ ನಾಗರಿಕರು ಜಾಗೃತರಾಗಬೇಕು. ಸಿಎಂಸಿಎ ಭವಿಷ್ಯದ ನಾಯಕರಾದ ವಿದ್ಯಾರ್ಥಿಗಳಲ್ಲಿ ಈ ಕೆಚ್ಚನ್ನು ಮೂಡಿಸುವ ಪ್ರಯತ್ನದಲ್ಲಿದೆ. ಸಕ್ರಿಯ ಪೌರತ್ವದ ಬಗ್ಗೆ ತಿಳಿವಳಿಕೆ ನೀಡುವುದು ಇದರ ಮೂಲ ಉದ್ದೇಶ.ಸಿಎಂಸಿಎ ಕಳೆದ 11 ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದೆ. ನಗರದ 84 ಶಾಲೆಗಳಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ. ಇಲ್ಲಿ ಮಕ್ಕಳಿಗೆ ಪ್ರಜಾಪ್ರಭುತ್ವದ ಮೌಲ್ಯ, ಸ್ಥಳೀಯ ಆಡಳಿತ, ಮಾಹಿತಿ ಹಕ್ಕು ಕಾಯ್ದೆ, ಜೀವ ವೈವಿಧ್ಯ, ಪರಿಸರ ಕಾಳಜಿ, ನಾಗರಿಕತ್ವ, ಹಕ್ಕು ಮತ್ತು ಕರ್ತವ್ಯ ಮೊದಲಾದವುಗಳ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದೆ.ಜತೆಗೆ ಕಲಿತ ಜ್ಞಾನವನ್ನು ತಮ್ಮ ನಿತ್ಯ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಅನ್ವಯಿಕ ಜ್ಞಾನವನ್ನು ಕಲಿಸಿಕೊಡುತ್ತಿದೆ. ಸಿಎಂಸಿಎ ಕಾರ್ಯನಿರ್ವಹಿಸುವ ಶಾಲಾ ಮಕ್ಕಳಿಗೆ ಇದು ಪಠ್ಯದ ಒಂದು ಭಾಗವಾಗಿ ಮಾರ್ಪಟ್ಟಿದೆ.  ಸಿಎಂಸಿಎ ಸಮಾಜದಲ್ಲಿ ಗುಣಾತ್ಮಕ ಬದಲಾವಣೆ ತರಲು ಶ್ರಮಿಸುತ್ತಿದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಹೇಗೆ ದೂರು ನೀಡಬೇಕು ಮತ್ತು ಅಗತ್ಯ ಬಿದ್ದರೆ ಶಾಂತಿಯುತವಾಗಿ ಪ್ರತಿಭಟನೆಗಳನ್ನು ಹೇಗೆ ಮಾಡಬೇಕು ಎಂಬುದನ್ನು ಸಹ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿದೆ. ಸಿಎಂಸಿಎ ಸ್ವಯಂ ಸೇವಕರು ಸಕ್ರಿಯ ಪೌರತ್ವ ಕುರಿತ ಉಪನ್ಯಾಸವನ್ನು ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಿಗೆ ತಿಳಿಸಿಕೊಡುತ್ತಾರೆ.ವಿದ್ಯಾರ್ಥಿಗಳು ಸಹ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. `ನಾನು ಸಕ್ರಿಯ ನಾಗರಿಕನಾಗುತ್ತೇನೆ~ ಮತ್ತು `ನನ್ನ ಜೀವನ; ನನ್ನ ಹೆಜ್ಜೆ~ ಎಂಬ 30 ನಿಮಿಷದ ಸಾಕ್ಷ್ಯಚಿತ್ರಗಳಲ್ಲಿ ನಟ ರಮೇಶ್ ಅರವಿಂದ್ ಹಾಗೂ ಕ್ರಿಕೆಟಿಗ ರಾಹುಲ್ ದ್ರಾವಿಡ್ ನಟಿಸಿ, ಸಕ್ರಿಯ ಪೌರತ್ವದ ಸಂದೇಶವನ್ನು ಮಕ್ಕಳಿಗೆ ತಲುಪಿಸಿದ್ದಾರೆ. ಸಿಎಂಸಿಎ ಸದಸ್ಯತ್ವ ಹೊಂದಿರುವ ಎಲ್ಲ ಮಕ್ಕಳನ್ನು ಒಂದೆಡೆ ಸೇರಿಸುವ ಸಲುವಾಗಿ ಪ್ರತಿವರ್ಷ ಸ್ಫೂರ್ತಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಇಲ್ಲಿ ಎಲ್ಲ ಮಕ್ಕಳು ಒಂದೆಡೆ ಕಲೆತು ತಾವು ಕಲಿತ ವಿಚಾರವನ್ನು ವಿನಿಮಯ ಮಾಡಿಕೊಳ್ಳುತ್ತಾರೆ.ಈ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸ್ ತರಬೇತಿ ಘಟಕ, ಅರಣ್ಯ ಮತ್ತು ಪರಿಸರ ಸಂರಕ್ಷಣೆ ಬಗ್ಗೆ, ನವೀಕರಿಸಬಹುದಾದ ಇಂಧನ, ಬಿಡಬ್ಲ್ಯೂಎಸ್‌ಎಸ್‌ಬಿ ಸೇರಿದಂತೆ ವಿವಿಧ ಇಲಾಖೆಗಳು ಪಾಲ್ಗೊಂಡು ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸುವ ಪ್ರಯತ್ನ ಮಾಡುತ್ತವೆ. ಜೊತೆಗೆ ವರ್ಷಕ್ಕೆ ಒಂದು ಬಾರಿ ಮಕ್ಕಳನ್ನು ಫೀಲ್ಡ್ ಟ್ರಿಪ್ ಎಂದು ಘನ ತ್ಯಾಜ್ಯ ನಿರ್ವಹಣೆ ಘಟಕ, ಮಳೆ ನೀರು ಕೊಯ್ಲು ಘಟಕ, ವೇಸ್ಟ್ ಮ್ಯಾನೇಜ್‌ಮೆಂಟ್, ಪ್ಲಾಸ್ಟಿಕ್ ತಯಾರಿಕಾ ಘಟಕ ಇಲ್ಲಿಗೆ ಕರೆದುಕೊಂಡು ಹೋಗಿ ಸ್ಥಳದಲ್ಲೇ ಅವುಗಳ ಒಳಿತು ಕೆಡುಕುಗಳನ್ನು ತಿಳಿಸಿಕೊಡಲಾಗುತ್ತದೆ.ಪೌರಕ್ಲಬ್: ಪ್ರತಿ ಶಾಲೆಯಲ್ಲಿ ಸಿಎಂಸಿಎಗೆ ಸೇರಿದ ವಿದ್ಯಾರ್ಥಿಗಳ ಗುಂಪು ಪೌರಕ್ಲಬ್. ಪ್ರತಿ ಕ್ಲಬ್‌ನಲ್ಲಿ 42ರಿಂದ 50 ಮಂದಿ ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ. ಈ ಕ್ಲಬ್‌ನಲ್ಲಿ ಮಕ್ಕಳಿಗೆ ಒಂದು ವರ್ಷ ಶಿಕ್ಷಣ ನೀಡಲಾಗುತ್ತದೆ. ಮಕ್ಕಳಿಗೆ ಪೌರತ್ವದ ವಿಚಾರಗಳನ್ನು ತಿಳಿಸುವ ಮೂಲಕ ಅವರ ತಂದೆ ತಾಯಿಗಳಲ್ಲೂ ಜಾಗೃತಿ ಮೂಡಿಸುವುದು ಇದರ ಹಿಂದಿನ ಉದ್ದೇಶ.  ಸಿಎಂಸಿಎ ದೇಶದಾದ್ಯಂತ 324 ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸುಮಾರು 399 ಸಿವಿಕ್ ಕ್ಲಬ್‌ಗಳನ್ನು ಹೊಂದಿದೆ. ಮಹಾ ನಗರಗಳಾದ  ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಮೈಸೂರು, ಮುಂಬೈ, ನಾಗಪುರ ಮತ್ತು ಹೊಸೂರಿನಲ್ಲಿ ಇದರ ಹರವು ಇದ್ದು, ಸುಮಾರು 19 ಸಾವಿರ ಮಕ್ಕಳು ಸದಸ್ಯರಾಗಿದ್ದಾರೆ.ಸಿಎಂಸಿಎ ಪ್ರತಿ ವರ್ಷ ನವೆಂಬರ್‌ನಲ್ಲಿ ಟ್ರಾಫಿಕ್ ದಿನಾಚರಣೆ, ಸೆಪ್ಟೆಂಬರ್‌ನಲ್ಲಿ ಪೌರ ಕಾರ್ಮಿಕ ದಿನಾಚರಣೆ ಹಮ್ಮಿಕೊಂಡು ಬರುತ್ತಿದೆ. ತಮಗೆ ಇರುವ ಸೀಮಿತ ಅವಕಾಶಗಳ ನಡುವೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವ ಪೊಲೀಸರು ಹಾಗೂ ಪೌರ ಕಾರ್ಮಿಕರ ಸೇವೆಯನ್ನು ಶ್ಲಾಘಿಸುವುದು ಈ ಆಚರಣೆ ಹಿಂದಿನ ಉದ್ದೇಶ.ಇದರ ಜೊತೆಗೆ ಸೆ.15ರಂದು ಪ್ರಜಾಪ್ರಭುತ್ವ ದಿನವನ್ನು ಸಿಎಂಸಿಎ ಆಚರಿಸಿಕೊಂಡು ಬರುತ್ತಿದೆ. ಈ ದಿನದಂದು ದುರ್ಬಲಗೊಳ್ಳುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಲು ಭವಿಷ್ಯದ ನಾಯಕರು ಕಂಡುಕೊಳ್ಳಬೇಕಾದ ಪರಿಹಾರ ಕುರಿತು ಚರ್ಚೆ ನಡೆಸುತ್ತಾರೆ.`ಮೈಸೂರು ಹಾಗೂ ಹುಬ್ಬಳ್ಳಿ ಧಾರವಾಡದಲ್ಲಿ ಸಿಎಂಸಿಎ ಕಾರ್ಯಕ್ಕೆ ಪಾಲಿಕೆಯಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ನಮಗೆ ಸರ್ಕಾರ ಅಗತ್ಯ ಆರ್ಥಿಕ ಸಹಕಾರ ನೀಡಿದರೆ ಕರ್ನಾಟಕದ ಎಲ್ಲ ಶಾಲೆ ತಲುಪುವ ಹಂಬಲ ಹೊಂದಿದ್ದೇವೆ~ ಎನ್ನುತ್ತಾರೆ ಸಿಎಂಸಿಎ ಕಾರ್ಯಕ್ರಮ ಸಂಯೋಜಕ ಪಿ.ಆರ್.ಮರಳಪ್ಪ.

Post Comments (+)