ಬುಧವಾರ, ಜೂನ್ 16, 2021
28 °C

ಸಕ್ರಿಯ ರಾಜಕಾರಣಕ್ಕೆ ಚರ್ಚ್‌ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಐಎಎನ್‌ಎಸ್‌): ದೇಶದ ಒಳಿತಿಗಾಗಿ ಕೆಲಸ ಮಾಡುವ ಸಂಸದ­ರನ್ನು ಆಯ್ಕೆ ಮಾಡುವ ರಾಜಕೀಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿ­ಯಾಗು­ವಂತೆ ಗೋವಾದ ಪ್ರಭಾವಿ ರೋಮನ್‌ ಕ್ಯಾಥೊಲಿಕ್‌ ಚರ್ಚ್‌ ಕರೆ ನೀಡಿದೆ.ಚಿಂತಿಸುವುದಕ್ಕಾಗಿ ಪ್ರಾರ್ಥನಾ ಅಭಿ­ಯಾನವನ್ನು ಆರಂಭಿಸುವಂತೆ ಮತ್ತು ಅತ್ಯುತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಗೋವಾದ ಶೇ 26ರಷ್ಟಿ­ರುವ ರೋಮನ್‌ ಕ್ಯಾಥೊಲಿಕರಿಗೆ ಗೋವಾ ಮತ್ತು ಡಾಮನ್‌ನ ಆರ್ಚ್‌ ಬಿಷಪ್‌ ಫಿಲಿಪ್‌ ನೆರಿ ಫೆರಾವೊ ಶನಿವಾರ ಬಿಡುಗಡೆಗೊಳಿಸಿದ ಸುತ್ತೋಲೆಯಲ್ಲಿ ಕರೆ ನೀಡಿದ್ದಾರೆ.ಇಂದಿನ ಪರಿಸ್ಥಿತಿಯಲ್ಲಿ ರಾಜಕೀಯ­ದಲ್ಲಿ ಸಕ್ರಿಯವಾಗಿ ಭಾಗಿಯಾಗುವುದು ‘ಅತ್ಯಂತ ಅನಿವಾರ್ಯ’ ಎಂದೂ ಸುತ್ತೋಲೆಯಲ್ಲಿ ಹೇಳಲಾಗಿದೆ. ದೇಶದ ಸಂವಿಧಾನದಲ್ಲಿ ವಿವರಿಸಿರು­ವಂತೆ ಪ್ರಜಾಪ್ರಭುತ್ವ, ಜಾತ್ಯತೀತತೆ, ಮಾನವ ಹಕ್ಕುಗಳು ಮತ್ತು ಮುಕ್ತ ಆತ್ಮಸಾಕ್ಷಿಯನ್ನು ಎತ್ತಿಹಿಡಿಯುವಂತಹ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂದು ಚರ್ಚ್‌ ಹೇಳಿದೆ.ಕಳೆದ ಗೋವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಚರ್ಚ್‌ ಉತ್ತಮ ಬಾಂಧವ್ಯ ಹೊಂದಿತ್ತು. ಇದು ಗೋವಾದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿಗೆ ನೆರವಾಗಿತ್ತು. ಆದರೆ ಕೆಲವು ದಿನಗಳ ಮೊದಲು ಚರ್ಚ್‌ ಬೆಂಬಲಿತ ಕೆಲವು ಸಾಮಾಜಿಕ ಸಂಘಟನೆಗಳು ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್ ಮತ್ತು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸಿ ಸುತ್ತೋಲೆ ಹೊರಡಿಸಿದ್ದವು.

‘ಮಾದಕ ದ್ರವ್ಯ ದಂಧೆ ನಿಯಂತ್ರಣ’

ಪಣಜಿ(ಪಿಟಿಐ): ಗೋವಾದಲ್ಲಿನ ಮಾದಕ ದ್ರವ್ಯ ಮಾಫಿ­ಯಾಕ್ಕೆ ಕಡಿವಾಣ ಹಾಕುವ ಭರವಸೆಯನ್ನು ಕಾಂಗ್ರೆಸ್‌ ಪಕ್ಷವು ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದೆ.ರಾಜ್ಯದ ಕರಾವಳಿಯ ಉದ್ದಕ್ಕೂ ಇರುವ ಮಾದಕ ದ್ರವ್ಯ ದಂಧೆ ನಿಯಂತ್ರಣ ಸೇರಿ ಇತರ ಸ್ಥಳೀಯ ವಿಚಾರ­ಗಳ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಗೋವಾ ಕಾಂಗ್ರೆಸ್‌ ಮುಖ್ಯಸ್ಥ ಜಾನ್‌ ಫರ್ನಾಂಡಿಸ್‌ ಶನಿವಾರ ಹೇಳಿದ್ದಾರೆ. ರಾಜ್ಯದಲ್ಲಿ ಮಾದಕ ವಸ್ತುಗಳ ಮಾಫಿಯಾವನ್ನು ಹತ್ತಿಕ್ಕಲು ಶಾಶ್ವತ ಕಾರ್ಯನೀತಿಯ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.ಕುತೂಹಲಕಾರಿ ಸಂಗತಿ ಎಂದರೆ, ಇಸ್ರೇಲ್‌ನ ಮಾದಕ ದ್ರವ್ಯ ದೊರೆ ಯಾನಿವ್‌ ಬೆನಾಯಿಮ್‌ ಅಲಿಯಾಸ್‌ ಅಟಾಲಾ ಅವರಿಗೆ ಆಶ್ರಯ ನೀಡಿದ ಆರೋಪಕ್ಕೆ ಸಂಬಂಧಿಸಿ  ರಾಜ್ಯ ವಿಧಾನಸಭೆಯ ಸದನ ಸಮಿತಿ ಸಲ್ಲಿಸಿ­ರುವ ವರದಿಯಲ್ಲಿ ಗೋವಾ ಉತ್ತರ  ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರವಿ ನಾಯ್ಕ್‌ ಹಾಗೂ ಅವರ ಪುತ್ರ ರಾಯ್‌ ಅವರ ಹೆಸರಿದೆ. ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ (ಸಿಇಸಿ) ನಾಯ್ಕ್‌ ಅವರ ಹೆಸರು ವರದಿಯಲ್ಲಿ ಬಂದಿರುವುದನ್ನು ಚರ್ಚಿಸಲಾಗಿದೆ. ನಾಯ್ಕ್‌ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲದಿರುವುದ­ರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಅನರ್ಹ­ಗೊಳ್ಳುವುದಿಲ್ಲ ಎಂದು ಫರ್ನಾಂಡಿಸ್‌ ಹೇಳಿದ್ದಾರೆ.ಮಾದಕ ದ್ರವ್ಯ ವಿಷಯ ಹೊರತಾಗಿ ರಾಜ್ಯಕ್ಕೆ ವಿಶೇಷ ಸ್ಥಾನಮಾನ, ಎರಡು ರಾಷ್ಟ್ರಗಳ ಪೌರತ್ವ ಹೊಂದಿರು­ವವರು ಎದುರಿ­ಸುತ್ತಿ­ರುವ ಕಷ್ಟ ನಿವಾರಿಸುವುದು, ರಾಜ್ಯ­ದಲ್ಲಿ ಕಾನೂನು ಸುವ್ಯವಸ್ಥೆಗೆ ಆದ್ಯತೆ ಸೇರಿ ಹಲವ ವಿಚಾರ­ಗಳನ್ನು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.