ಶನಿವಾರ, ಏಪ್ರಿಲ್ 10, 2021
30 °C

ಸಗಟು ಹಣದುಬ್ಬರ ಅಲ್ಪ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಗಟು ಹಣದುಬ್ಬರ ಅಲ್ಪ ಕುಸಿತ

ನವದೆಹಲಿ (ಪಿಟಿಐ): ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ದರ ಅಕ್ಟೋಬರ್‌ನಲ್ಲಿ ಅಲ್ಪ ಕುಸಿತ ಕಂಡಿದ್ದು ಶೇ 7.45ಕ್ಕೆ ಇಳಿದಿದೆ.ಸೆಪ್ಟೆಂಬರ್‌ನಲ್ಲಿ `ಡಬ್ಲ್ಯುಪಿಐ~ ಶೇ 7.81ರಷ್ಟಿತ್ತು. ಹಣದುಬ್ಬರ ತುಸು ತಗ್ಗಿದರೂ, ಆಹಾರ ಪದಾರ್ಥಗಳ ಬೆಲೆಗಳಲ್ಲಿ ಅಂತಹ ಗಮನಾರ್ಹ ವ್ಯತ್ಯಾಸವೇನೂ ಕಂಡುಬಂದಿಲ್ಲ. ಬೇಳೆ ಕಾಳು, ತರಕಾರಿ, ಗೋಧಿ, ಅಕ್ಕಿ ಧಾರಣೆ ಗರಿಷ್ಠ ಮಟ್ಟದಲ್ಲೇ ಇದೆ. ಆದರೆ, 2011ರ ಅಕ್ಟೋಬರ್‌ನಲ್ಲಿದ್ದ ಹಣದುಬ್ಬರ ಪ್ರಮಾಣಕ್ಕೆ (ಶೇ 9.87) ಹೋಲಿಸಿದರೆ ಸದ್ಯ ಸಾಕಷ್ಟು ಇಳಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.ಒಟ್ಟಾರೆ `ಡಬ್ಲ್ಯುಪಿಐ~ಗೆ ಶೇ 14.3ರಷ್ಟು ಕೊಡುಗೆ ನೀಡುವ ಆಹಾರ ಹಣದುಬ್ಬರ ದರ ಅಕ್ಟೋಬರ್‌ನಲ್ಲಿ ಶೇ 7.86ರಿಂದ ಶೇ 6.62ಕ್ಕೆ ಕುಸಿದಿದೆ.  ಆದರೆ, ಗೋಧಿ, ಬೇಳೆ ಕಾಳು ಕ್ರಮವಾಗಿ ಶೇ 19.78 ಮತ್ತು ಶೇ 14.35ರಷ್ಟು ತುಟ್ಟಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಲೂಗಡ್ಡೆ ಮತ್ತು ಅಕ್ಕಿಯ ಧಾರಣೆ ಶೇ 49 ಮತ್ತು ಶೇ 12ರಷ್ಟು ಹೆಚ್ಚಿದೆ.

ತರಕಾರಿ ಬೆಲೆ ಶೇ 7.45ರಷ್ಟು ಇಳಿದಿದೆ. ಕಾರ್ಖಾನೆ ತಯಾರಿಕೆ ವಸ್ತುಗಳಾದ ಸಿದ್ಧ ಉಡುಪು, ಪ್ಲಾಸ್ಟಿಕ್, ರಬ್ಬರ್, ಕಬ್ಬಿಣ, ಕಾಗದ ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿ ಶೇ 6ರಷ್ಟು ತುಟ್ಟಿಯಾಗಿವೆ.

 

ರಿಟೇಲ್ ಹಣದುಬ್ಬರ: ರಿಟೇಲ್ ಹಣದುಬ್ಬರ ಸೆಪ್ಟೆಂಬರ್‌ನಲ್ಲಿ ಶೇ 9.75ರಷ್ಟಾಗಿದ್ದು, ಎರಡಂಕಿ ಸಮೀಪಕ್ಕೆ ಬಂದಿದೆ. ಸಕ್ಕರೆ, ದ್ವಿದಳ ಧಾನ್ಯ, ತರಕಾರಿ, ಜವಳಿ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರ ದರ ಏರಿಕೆ ಕಂಡಿದೆ.ಹಣದುಬ್ಬರ ಇನ್ನೂ ಹಿತಕರ ಮಟ್ಟಕ್ಕೆ ತಗ್ಗದ ಹಿನ್ನೆಲೆಯಲ್ಲಿ `ಆರ್‌ಬಿಐ~ ಕಳೆದ ತಿಂಗಳು ಪ್ರಕಟಿಸಿದ ಮಧ್ಯಂತರ ತ್ರೈಮಾಸಿಕ ಹಣಕಾಸು ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು.  ಆದರೆ, ನಗದು ಮೀಸಲು ಅನುಪಾತದಲ್ಲಿ (ಸಿಆರ್‌ಆರ್) ಶೇ 0.25ರಷ್ಟು ಇಳಿಕೆ ಮಾಡುವ ಮೂಲಕ ಮಾರುಕಟ್ಟೆಗೆ ್ಙ17,500 ಕೋಟಿ ಬಂಡವಾಳ ಹರಿಯಲು ಅವಕಾಶ ಮಾಡಿಕೊಟ್ಟಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.