ಸಗಣಿ ಎರಚಾಟ: ನಾಗರಪಂಚಮಿ ವೈಶಿಷ್ಟ್ಯ

7

ಸಗಣಿ ಎರಚಾಟ: ನಾಗರಪಂಚಮಿ ವೈಶಿಷ್ಟ್ಯ

Published:
Updated:
ಸಗಣಿ ಎರಚಾಟ: ನಾಗರಪಂಚಮಿ ವೈಶಿಷ್ಟ್ಯ

ಗದಗ: ಇಲ್ಲಿನ ಗಂಗಾಪೂರ ಪೇಟೆಯ ಕುಂಬಾರ ಓಣಿಯಲ್ಲಿ ಶುಕ್ರವಾರ ಸಗಣಿ ಎರಚಾಡಿಕೊಳ್ಳುವ ಮೂಲಕ ನಾಗರಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಿದರು.ನಾಗರ ಪಂಚಮಿಯ ಮಾರನೇಯ ದಿನ ಅಂದರೆ ಕರಿಕಟ್ಟ ಅಂಬಲಿ ದಿನ ಸಗಣಿ ಎರಚಿಕೊಂಡು ಮೋಜಿನಾಟವಾಡುವುದು ಕುಂಬಾರ ಓಣಿಯಲ್ಲಿ ನೂರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.ಸಗಣಿ ಎರಚಾಟದಲ್ಲಿ ಓಣಿಯ ಎಲ್ಲರೂ ಭಾಗವಹಿಸುವುದಿಲ್ಲ. ಸುಮಾರು 18 ಮಂದಿ ಇರುವ ಎರಡು ಯುವಕರ ಗುಂಪು ಪರಸ್ಪರ ಒಬ್ಬರಿಗೊಬ್ಬರು ಸಗಣಿ ಎರಚಿಕೊಳ್ಳುತ್ತದೆ. ಇವರಲ್ಲಿ ಒಂದು ಗುಂಪು ಕಡ್ಡಾಯವಾಗಿ ಮಹಿಳೆಯರ ವೇಷ ಧರಿಸಿಕೊಂಡು ಆಟದಲ್ಲಿ ಭಾಗವಹಿಸುವುದು ಹಿಂದಿನಿಂದಲೂ ರೂಢಿಗೆ ಬಂದಿದೆ.ಓಣಿಯ ರಸ್ತೆಯಲ್ಲಿ 40 ಕಡೆ ರಾಶಿಯಾಗಿ ಇಟ್ಟಿದ್ದ ಸಗಣಿಯನ್ನು ತೆಗೆದುಕೊಂಡು ಎರಡು ಗುಂಪಿನವರು ಪರಸ್ಪರ ಎರಚಾಡಿಕೊಂಡು ಮೋಜು ಅನುಭವಿಸಿದರು. ಇದನ್ನು ನೋಡುತ್ತಾ ನಿಂತಿದ್ದ ನೂರಾರು ಜನರು ಮನದಣಿಯೇ ನಕ್ಕು ಖುಷಿ ಪಟ್ಟರು. ಹೊಸದಾಗಿ ಮದುವೆಯಾಗಿ ಮಾವನ ಮನಗೆ ಬಂದ ಅಳಿಯಂದಿರರಿಗಂತೂ ಇದೊಂದು ಹೊಸ ಅನುಭವ. ನೂತನ ಜೋಡಿಗಂತೂ ಇದು ಮನೋರಂಜನೆಯ ತಾಣವಾಗಿ ಮಾರ್ಪಟ್ಟಿತ್ತು.ಮೋಜಿನಾಟಕ್ಕೂ ಮೊದಲು ಓಣಿಯ ಗರಡಿ ಮನೆಯ ಮುಂದಿನ ರಸ್ತೆಯಲ್ಲಿ ಚಿಕ್ಕ ಮಕ್ಕಳ ಎಂಟತ್ತು ಜೋಡಿ ಕುಸ್ತಿ ಪಂದ್ಯವನ್ನು ಸಾಂಕೇತಿಕವಾಗಿ ನಡೆಸಿದರು. ನಂತರ ಹನುಮಂತ, ದುರ್ಗಾದೇವಿ ಗುಡಿಯಲ್ಲಿ ಪೂಜೆ ಸಲ್ಲಿಸಲಾಯಿತು.ಆಟದಲ್ಲಿ ಭಾಗವಹಿಸುವ ಯುವಕರು ಉಳ್ಳಾಗಡ್ಡಿ, ಬದನೆಕಾಯಿಯ ಮಾಲೆಯನ್ನು ಧರಿಸಿಕೊಂಡರು. ಸೊಂಟಕ್ಕೆ ಬೇವಿನ ತೊಪ್ಪಲು (ಸೊಪ್ಪು) ಸುತ್ತಿಕೊಂಡು ಆಟದ ಜಾಗಕ್ಕೆ ಬಂದರು. ಸುಮಾರು ಅರ್ಧ ತಾಸು ಮೋಜಿನಾಟ ನಡೆಯಿತು. ನಂತರ ಆಟದಲ್ಲಿ ಪಾಲ್ಗೊಂಡವರು ಬೇವಿನಸೊಪ್ಪನ್ನು ಮೈಗೆ ಹಚ್ಚಿಕೊಂಡು ಸ್ನಾನಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry