ಸಗಾಯ್‌ರಾಜ್-ತೇಲಾಂಗ್ ಮೇಲೆ ಎಲ್ಲರ ಕಣ್ಣು

ಬುಧವಾರ, ಜೂಲೈ 24, 2019
28 °C

ಸಗಾಯ್‌ರಾಜ್-ತೇಲಾಂಗ್ ಮೇಲೆ ಎಲ್ಲರ ಕಣ್ಣು

Published:
Updated:

ಧಾರವಾಡ: ರಾಜ್ಯದಲ್ಲಿ ಮುಂಗಾರು ಕಾಲಿಟ್ಟ ಕ್ಷಣದಲ್ಲೇ ಟೇಬಲ್ ಟೆನಿಸ್ ಋತುವೂ ಆರಂಭವಾಗಿದ್ದು, ಶುಕ್ರವಾರದಿಂದ ನಡೆಯಲಿರುವ ವರ್ಷದ ಮೊದಲ ರಾಜ್ಯ ರ‌್ಯಾಂಕಿಂಗ್ ಟೂರ್ನಿಗೆ ನಗರದ ಕಾಸ್ಮಸ್ ಕ್ಲಬ್  ಸಂಪೂರ್ಣ ಸಜ್ಜಾಗಿದೆ.ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ, ಧಾರವಾಡ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಹಾಗೂ ಕಾಸ್ಮಸ್ ಕ್ಲಬ್ ಜಂಟಿಯಾಗಿ ಸಂಘಟಿಸಿರುವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟಾರೆ ಹತ್ತು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.500ಕ್ಕೂ ಅಧಿಕ ಕ್ರೀಡಾಪಟುಗಳು ಧಾರವಾಡಕ್ಕೆ ಆಗಮಿಸಿದ್ದಾರೆ. ಪುರುಷರು, ಮಹಿಳೆಯರು, ಜೂನಿಯರ್, ಸಬ್ ಜೂನಿಯರ್, ಕೆಡೆಟ್ (ಬಾಲಕ, ಬಾಲಕಿಯರು) ಮತ್ತು ಹಿರಿಯರ (ಪುರುಷ ಮತ್ತು ಮಹಿಳೆಯರು) ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.ಕಳೆದ ವರ್ಷದುದ್ದಕ್ಕೂ ಮಿಂಚಿದ್ದ ರೈಲ್ವೇಸ್‌ನ ಸಗಾಯ್‌ರಾಜ್ ಹಾಗೂ ಕೆನರಾ ಬ್ಯಾಂಕ್‌ನ ಅನಿರ್ಬಾನ್ ತರಫ್‌ದಾರ್ ಪುರುಷರ ವಿಭಾಗದಲ್ಲಿ ಪ್ರಧಾನ ಆಕರ್ಷಣೆ ಎನಿಸಿದ್ದು, ಈ ಆಟಗಾರರು ಟೂರ್ನಿಯಲ್ಲಿ ಕ್ರಮವಾಗಿ ಮೊದಲ ಎರಡು ಶ್ರೇಯಾಂಕಗಳನ್ನು ಗಿಟ್ಟಿಸಿದ್ದಾರೆ.ಬೆಂಗಳೂರಿನ ಭಾರತೀಯ ತೈಲ ನಿಗಮ (ಐಒಸಿಎಲ್)ದ ಶ್ರೇಯಲ್ ತೇಲಾಂಗ್ ಹಿರಿಯ ಆಟಗಾರರಿಗೆ ಸೆಡ್ಡು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ವರ್ಷದಲ್ಲಿ ಈ ಆಟಗಾರ ತೋರಿದ್ದ ಸಾಧನೆ ಬೆರಳು ಕಚ್ಚುವಂತೆ ಇತ್ತು. ಕಳೆದ ಋತುವಿನಲ್ಲಿ ಜೂನಿಯರ್ ವಿಭಾಗದಲ್ಲಿ ಮಿಂಚಿದ್ದ ಬೆಳಗಾವಿಯ ಮೈತ್ರಿ ಬೇಲೂರು, ಈಗ ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಬೆಂಗಳೂರಿನ ಮಹಾವೀರ ಜೈನ್ ಕಾಲೇಜಿನ ಐಶ್ವರ್ಯ ಬಿದರಿ ಆಗ್ರ ಶ್ರೇಯಾಂಕದ ಆಟಗಾರ್ತಿಗೆ ತೀವ್ರವಾದ ಪೈಪೋಟಿ ಒಡ್ಡಲು ಸಜ್ಜಾಗಿದ್ದಾರೆ.ಕಳೆದ ವರ್ಷ ಕೆಡೆಟ್ ವಿಭಾಗದಲ್ಲಿ ಇದ್ದ ಹಲವರು ಸಬ್ ಜೂನಿಯರ್‌ಗೆ, ಸಬ್ ಜೂನಿಯರ್ ವಿಭಾಗದಲ್ಲಿ ಇದ್ದವರು ಜೂನಿಯರ್‌ಗೆ ಮತ್ತು ಜೂನಿಯರ್ ವಿಭಾಗದಲ್ಲಿ ಇದ್ದವರು ಸೀನಿಯರ್ ವಿಭಾಗಕ್ಕೆ ಬಡ್ತಿ ಪಡೆದಿದ್ದಾರೆ. ಹೀಗಾಗಿ ಅನೇಕ ಲೆಕ್ಕಾಚಾರಗಳು ಏರು-ಪೇರಾಗುವ ಸಾಧ್ಯತೆ ಇದೆ.ಬಾಲಕರ ಕಿರಿಯರ ವಿಭಾಗದಲ್ಲಿ ಯಥಾಪ್ರಕಾರ ಶ್ರೇಯಲ್ ತೇಲಾಂಗ್ ಮತ್ತು ವಿ.ಪಿ.ಚರಣ್ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಕೆಡೆಟ್ ವಿಭಾಗದಲ್ಲಿ ಬೆಂಗಳೂರಿನ ಮೇದಿನಿ ಭಟ್, ಬೆಳಗಾವಿಯ ಎಂ. ಅಕ್ಷತಾ ಅವರ ಪ್ರದರ್ಶನ ಕುತೂಹಲ ಕೆರಳಿಸಿದೆ. ಸ್ಥಳೀಯರಾದ ಸಹನಾ ಕುಲಕರ್ಣಿ, ಗಾಯತ್ರಿ ಟಂಕಸಾಲಿ, ನಿಪ್ಪಾಣಿಯಿಂದ ಬಂದ ಅಮೋಘ ಅಥಣಿ ಹಾಗೂ ಮೈಸೂರಿನ ಎಂ.ವಿ. ಸ್ಫೂರ್ತಿ ಅವರ ಆಟವನ್ನೂ ಕೌತುಕದಿಂದ ಗಮನಿಸಲಾಗುತ್ತಿದೆ.ಶುಕ್ರವಾರ ಬೆಳಿಗ್ಗೆ 9.30ಕ್ಕೆ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ದಿಲೀಪ್ ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಕಾಸ್ಮಸ್ ಕ್ಲಬ್ ಅಧ್ಯಕ್ಷ ಬಿ.ಬಿ. ಮಾಶಾಳ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry