ಸಚಿನ್‌ಗೆ ಆರ್ಡರ್ ಆಫ್ ಆಸ್ಟ್ರೇಲಿಯಾ ಗೌರವ

7

ಸಚಿನ್‌ಗೆ ಆರ್ಡರ್ ಆಫ್ ಆಸ್ಟ್ರೇಲಿಯಾ ಗೌರವ

Published:
Updated:

ನವದೆಹಲಿ (ಪಿಟಿಐ): ಸಚಿನ್ ತೆಂಡೂಲ್ಕರ್ ಸದ್ಯದಲ್ಲೇ ಆಸ್ಟ್ರೇಲಿಯಾ ಸರ್ಕಾರ ನೀಡುವ ಅತ್ಯುನ್ನತ ಗೌರವ `ಆರ್ಡರ್ ಆಫ್ ಆಸ್ಟ್ರೇಲಿಯಾ~ಕ್ಕೆ ಪಾತ್ರರಾಗಲಿದ್ದಾರೆ.

 

ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲಾರ್ಡ್ ಮಂಗಳವಾರ ಸಚಿನ್ ಹೆಸರನ್ನು ಈ ಪ್ರಶಸ್ತಿಗೆ ಸೂಚಿಸಿದ್ದಾರೆ. ಆಸ್ಟ್ರೇಲಿಯಾದ ಸಚಿವ ಸೈಮನ್ ಕ್ರೀನ್ ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ ಸಚಿನ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದು ಗಿಲಾರ್ಡ್ ಹೇಳಿದರು.ಕ್ರಿಕೆಟ್‌ನಲ್ಲಿ ಮಾಡಿರುವ ಅದ್ಭುತ ಸಾಧನೆಯನ್ನು ಪರಿಗಣಿಸಿ ಆಸೀಸ್ ಸರ್ಕಾರ ಸಚಿನ್‌ಗೆ ಈ ಗೌರವ ನೀಡುತ್ತಿದೆ. ಭಾರತದ ಕ್ರೀಡಾಪಟುವೊಬ್ಬ ಈ ಗೌರವಕ್ಕೆ ಪಾತ್ರರಾಗುತ್ತಿರುವುದು ಇದೇ ಮೊದಲು. ಆಸ್ಟ್ರೇಲಿಯಾದ ಹೊರಗಿನವರಿಗೆ ಈ ಪ್ರಶಸ್ತಿ ದೊರೆಯುವುದು ತೀರಾ ವಿರಳ.`ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಬಾಂಧವ್ಯ ಬಲಪಡಿಸುವಲ್ಲಿ ಕ್ರಿಕೆಟ್ ಮಹತ್ವದ ಪಾತ್ರ ವಹಿಸಿದೆ. ಈ ಎರಡೂ ದೇಶಗಳಲ್ಲಿ ಕ್ರಿಕೆಟ್ ಜನಪ್ರಿಯ ಕ್ರೀಡೆ. ಸಚಿನ್ ತೆಂಡೂಲ್ಕರ್ ಅವರನ್ನು ಆರ್ಡರ್ ಆಫ್ ಆಸ್ಟ್ರೇಲಿಯಾ ಪ್ರಶಸ್ತಿಯ ಮೂಲಕ ಗೌರವಿಸುತ್ತಿರುವುದು ಸಂತಸದ ವಿಚಾರ~ ಎಂದು ಗಿಲಾರ್ಡ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ 2006 ರಲ್ಲಿ ಈ ಗೌರವ ಪಡೆದಿದ್ದರು. ಇದೀಗ ಸಚಿನ್ ಇಂತಹ ಗೌರವಕ್ಕೆ ಪಾತ್ರರಾದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರರಾದ ಕ್ಲೈವ್ ಲಾಯ್ಡ (1985), ಸರ್ ಗ್ಯಾರಿ ಸೋಬರ್ಸ್ (2003) ಮತ್ತು ಬ್ರಯಾನ್ ಲಾರಾ (2009) ಅವರಿಗೂ ಈ ಗೌರವ ದೊರೆತಿದೆ.`ಈ ಗೌರವಕ್ಕೆ ಪಾತ್ರನಾಗಿರುವುದು ಹೆಮ್ಮೆಯ ಸಂಗತಿ~ ಎಂದು ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ. `ಇದರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಬಹುದು ಎಂಬ ವಿಶ್ವಾಸ ನನ್ನದು~ ಎಂದು ನುಡಿದಿದ್ದಾರೆ.ಮಿಶ್ರ ಪ್ರತಿಕ್ರಿಯೆ: ಸಚಿನ್‌ಗೆ ಈ ಗೌರವ ನೀಡಿದ ಆಸ್ಟ್ರೇಲಿಯಾ ಸರ್ಕಾರದ ಕ್ರಮಕ್ಕೆ ಆ ದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. `ಹೆರಾಲ್ಡ್ ಸನ್~ ಪತ್ರಿಕೆ `ಸಚಿನ್ ಈ ಗೌರವಕ್ಕೆ ಅರ್ಹರೇ?~ ಎಂಬ ಪ್ರಶ್ನೆಯನ್ನು ಓದುಗರ ಮುಂದಿಟ್ಟಿದೆ.

 

ಭಾರತೀಯ ಕಾಲಮಾನ ಮಂಗಳವಾರ ಸಂಜೆಯವರೆಗೆ ಈ ಪ್ರಶ್ನೆಗೆ 3101 ಮಂದಿ ಪ್ರತಿಕ್ರಿಯಿಸಿದ್ದರು. ಇದರಲ್ಲಿ ಶೇ. 43.79 ಮಂದಿ ಸಚಿನ್ ಪರ ಹಾಗೂ ಶೆ 56.21 ಅವರ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸಚಿನ್‌ಗೆ ಈ ಗೌರವ ನೀಡಿದ್ದನ್ನು `ಟ್ವಿಟರ್~ನಲ್ಲಿ ಹಲವು ಪ್ರಶ್ನಿಸಿದ್ದಾರೆ. ಏಕೆಂದರೆ 2008ರಲ್ಲಿ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಡೆದ ಹರಭಜನ್ - ಆ್ಯಂಡ್ರ್ಯೂ ಸೈಮಂಡ್ಸ್ `ಜನಾಂಗೀಯ ನಿಂದನೆ ಪ್ರಕರಣ~ದಲ್ಲಿ (ಮಂಕಿಗೇಟ್ ಪ್ರಕರಣ) ಸಚಿನ್ ಪ್ರಮುಖ ಸಾಕ್ಷಿಯಾಗಿದ್ದರು. ಮಾತ್ರವಲ್ಲ ವಿಚಾರಣೆ ಸಂದರ್ಭ ಹರಭಜನ್ ಅವರನ್ನು ಸಮರ್ಥಿಸಿಕೊಂಡಿದ್ದರು.`ಮಂಕಿಗೇಟ್ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಚಿನ್‌ಗೆ ಗಿಲಾರ್ಡ್ ಈ ಗೌರವ ನೀಡಿದ್ದು ಹೇಗೆ~ ಎಂದು ಒಬ್ಬಾತ ಪ್ರಶ್ನಿಸಿದ್ದರೆ, `ಇದು ಆಸ್ಟ್ರೇಲಿಯಾದ ಕ್ರಿಕೆಟ್‌ಗೆ ಮಾಡಿದ ಅವಮಾನ~ ಎಂದು ಇನ್ನೊಬ್ಬ ಪ್ರತಿಕ್ರಿಯಿಸಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry