ಮಂಗಳವಾರ, ನವೆಂಬರ್ 19, 2019
29 °C
ತೆಂಡೂಲ್ಕರ್‌ಗೆ ಶುಭಾಶಯಗಳ ಮಹಾಪೂರ

ಸಚಿನ್‌ಗೆ ಇಂದು 40ನೇ ಹುಟ್ಟುಹಬ್ಬ

Published:
Updated:

ಕೋಲ್ಕತ್ತ (ಪಿಟಿಐ, ಐಎಎನ್‌ಎಸ್): ಸಚಿನ್ ತೆಂಡೂಲ್ಕರ್ ಎಂಬ ಹೆಸರೇ ಕ್ರಿಕೆಟ್ ಅಭಿಮಾನಿಗಳಿಗೆ ರೋಮಾಂಚನ. ಈ ಕ್ರಿಕೆಟಿಗನಿಗೆ ಬುಧವಾರ 40ನೇ ಹುಟ್ಟುಹಬ್ಬದ ಸಂಭ್ರಮ.ಇಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯ ಈ ಸಡಗರಕ್ಕೆ ಸಾಕ್ಷಿಯಾಗಲಿದೆ.ಸಚಿನ್ ಹುಟ್ಟುಹಬ್ಬವನ್ನು ಮುಂಬೈ ಇಂಡಿಯನ್ಸ್ ತಂಡ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ. ಬೆಳಿಗ್ಗೆ ಕೇಕ್ ಕತ್ತರಿಸಿದ ಬಳಿಕ ಸಚಿನ್ ಮಾಧ್ಯಮಗಳ ಜೊತೆ ಸಂವಾದ ನಡೆಸಲಿದ್ದಾರೆ.ರಾತ್ರಿ ಎಂಟು ಗಂಟೆಗೆ ಎಂ.ಐ ತಂಡವು ಕೆಕೆಆರ್ ವಿರುದ್ಧ ಸೆಣೆಸಲಿದೆ. ಇದಕ್ಕೂ ಮೊದಲು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ವಿಶೇಷವಾಗಿ ಸಿದ್ಧಪಡಿಸಿದ 40 ಪೌಂಡ್ ತೂಕದ ಕೇಕನ್ನು ಸಚಿನ್ ಕತ್ತರಿಸಲಿದ್ದಾರೆ.ಈ ಬಗ್ಗೆ ಮಾತನಾಡಿದ ಸಿಎಬಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ, `ಸಚಿನ್ ಅವರ 100ನೇ ಹುಟ್ಟುಹಬ್ಬವನ್ನೂ ಸಿಎಬಿ ಆಚರಿಸಲಿದೆ. ಅವರಿಗೆ ನಾವು ಆರೋಗ್ಯಕರ ಮತ್ತು ಸುಂದರ ಜೀವನ ಹಾರೈಸುತ್ತೇವೆ' ಎಂದರು.ಶುಭಾಶಯಗಳ ಮಹಾಪೂರ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ, `ಸಚಿನ್‌ಗೆ ಶುಭ ಹಾರೈಸುತ್ತೇನೆ. ಕೆಕೆಆರ್ ವಿರುದ್ಧದ ಪಂದ್ಯವನ್ನು ನಾವು ಗೆದ್ದರೆ ಅವರ ಜನ್ಮದಿನದ ಆಚರಣೆ ಮತ್ತಷ್ಟು ಅರ್ಥಪೂರ್ಣವಾಗಲಿದೆ' ಎಂದರು.ಮತ್ತೊಬ್ಬ ಮಾಜಿ ನಾಯಕ ಸೌರವ್ ಗಂಗೂಲಿ, `ಸಚಿನ್ ನಾನು ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರ' ಎಂದು ಬಣ್ಣಿಸಿದರು. ಸಚಿನ್ ಅವರ ಬಾಲ್ಯದ ಕೋಚ್ 80 ವರ್ಷದ ರಮಾಕಾಂತ್ ಅಚ್ರೇಕರ್, `ನನ್ನ ಆಶೀರ್ವಾದ ಸದಾ ಸಚಿನ್‌ಗಿದೆ. ಅವನು ಆಡುತ್ತಿರುವಷ್ಟೂ ದಿನ ಸಂತೋಷದಿಂದ ಇರುತ್ತಾನೆ' ಎಂದರು.ಭಾರತ ತಂಡದ ಮಾಜಿ ವಿಕೆಟ್ ಕೀಪರ್ ನಯನ್ ಮೋಂಗಿಯಾ, `ಕ್ರಿಕೆಟ್ ಆಡಲೆಂದೇ ದೇವರು ಸಚಿನ್ ಅವರನ್ನು ಭೂಮಿಗೆ ಕಳುಹಿಸಿದರು. ಅವರಿಗೆ ಒಳ್ಳೆಯದಾಗಲಿ' ಎಂದು ಹಾರೈಸಿದರು.ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್, `ಸಚಿನ್ ಭಾರತದ ಡಾನ್ ಬ್ರಾಡ್ಮನ್' ಎಂದು ಪ್ರಶಂಸೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್, `ಸಚಿನ್ ಒಬ್ಬ ದಂತಕಥೆ. ಅವರ ಕುರಿತು ಬೇರೇನು ಹೇಳಲು ಸಾಧ್ಯ..?. ಅವರಿಗೆ 40 ವರ್ಷವಾಯ್ತಾ..?' ಎಂದಿದ್ದಾರೆ.ಶ್ರೀಲಂಕಾದ ಬ್ಯಾಟ್ಸ್‌ಮನ್ ದಿಲ್ಶಾನ್, `ಅವರು ಮತ್ತಷ್ಟು ಐಪಿಎಲ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡುವಂತಾಗಲಿ. ಇದರಿಂದ ಯುವ ಆಟಗಾರರಿಗೆ ಮಾರ್ಗದರ್ಶನ ಸಿಗುತ್ತದೆ' ಎಂದರು.ಅಂಧ ವಿದ್ಯಾರ್ಥಿಗಳ ಸಂಭ್ರಮ

ಸಚಿನ್ ತೆಂಡೂಲ್ಕರ್ ಅವರ 40ನೇ ಹುಟ್ಟುಹಬ್ಬವನ್ನು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್  ಒಂದು ದಿನ ಮುಂಚಿವಾಗಿ ವಿಶೇಷವಾಗಿ ಆಚರಿಸಿತು.10 ಪೌಂಡ್ ತೂಕದ ಕೇಕನ್ನು `ನರೇಂದ್ರಪುರ ರಾಮಕೃಷ್ಣ ಮಿಷನ್ ಅಂಧರ ಶಾಲೆ ಮತ್ತು ಲೈಟ್ ಹೌಸ್'ನ 100 ಅಂಧ ವಿದ್ಯಾರ್ಥಿಗಳು ಕತ್ತರಿಸಿದರು. ಈ ಬಗ್ಗೆ ಮಾಧ್ಯಮಗಳಿಗೆ ಸಂದೇಶ ಕಳುಹಿಸಿದ ಸಿಎಬಿ ತೆಂಡೂಲ್ಕರ್ ಶತಾಯುಷಿ ಆಗಲಿ ಎಂದು ಹಾರೈಸಿತು.

ಪ್ರತಿಕ್ರಿಯಿಸಿ (+)