ಮಂಗಳವಾರ, ನವೆಂಬರ್ 19, 2019
25 °C

ಸಚಿನ್‌ಗೆ ಮಕ್ಕಳ ನಾಲ್ಕು ಪ್ರಶ್ನೆಗಳು

Published:
Updated:

ಅದು ಮಕ್ಕಳಿಗಾಗಿಯೇ ಐಟಿಸಿ ಆಹಾರ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮ. ಅಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಮಕ್ಕಳ ನಡುವೆ ಬೇರಾರೂ ಮಾತನಾಡುವಂತೆ ಇರಲಿಲ್ಲ. ಸನ್‌ಫೀಸ್ಟ್ ಡ್ರೀಮ್ ಕ್ರೀಮ್ `ಈಟ್ ಅಂಡ್ ಮೀಟ್ ಸಚಿನ್' ಸ್ಫರ್ದೆಯಲ್ಲಿ ಗೆದ್ದ ಮಕ್ಕಳಿಗೆ ಎಲ್ಲಿಲ್ಲದ ಪುಳಕ. ಸಚಿನ್ ಮೊಗದಲ್ಲಿ ಮಕ್ಕಳಷ್ಟೇ ಮುಗ್ಧ ಮಂದಹಾಸ. ದೇಶದ 32 ನಗರಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಸುಮಾರು 13 ಲಕ್ಷ ಮಕ್ಕಳು ಪಾಲ್ಗೊಂಡಿದ್ದರೂ ಆಯ್ಕೆಯಾಗಿದ್ದು ಹತ್ತು ಮಕ್ಕಳು ಮಾತ್ರ. ಹೀಗಾಗಿ ಆ ಮಕ್ಕಳ ಪೋಷಕರಲ್ಲಿ ತಮ್ಮ ಮಕ್ಕಳ ಕುರಿತು ತುಂಬು ಹೆಮ್ಮೆ. ಸಿಕ್ಕ ಒಂದು ಅಪೂರ್ವ ಅವಕಾಶವನ್ನು ಸೆರೆಹಿಡಿಯಲು ಅವರೆಲ್ಲರ ಕೈಯಲ್ಲಿದ್ದ ಕ್ಯಾಮೆರಾಗಳು ಕಾಯುತ್ತಿದ್ದವು.ಐಟಿಸಿ ಫುಡ್ ವಿಭಾಗದ ಕಾರ್ಯನಿರ್ವಾಹಕ ಚಿತ್ತರಂಜನ್ ಹಾಗೂ ಸಚಿನ್ ವೇದಿಕೆ ಮೇಲೆ ಇದ್ದರು. ಕಾರ್ಯಕ್ರಮವನ್ನು ಮಕ್ಕಳಿಗೆ ಹಿತವೆನಿಸುವಂತೆ ಚಾರು ಶರ್ಮ ನಿರೂಪಿಸುತ್ತಿದ್ದರು. ಸಚಿನ್ ಭೇಟಿಯಾಗುವ ತವಕದಲ್ಲಿ ಮಕ್ಕಳು, ಪೋಷಕರು. ಒಬ್ಬರಾದ ಮೇಲೆ ಒಬ್ಬರ ಹೆಸರು ಮೈಕುಗಳಲ್ಲಿ ಮೊಳಗಿತು. ಸಚಿನ್ ಪುಟ್ಟ ಬ್ಯಾಟ್ ಮೇಲೆ ತಮ್ಮ ಹಸ್ತಾಕ್ಷರ ಹಾಕಿ, ಪ್ರಶಸ್ತಿ ಪ್ರಮಾಣ ಪತ್ರವನ್ನು ಮಕ್ಕಳಿಗೆ ನೀಡಿ ಪುಟ್ಟ ಮಕ್ಕಳಷ್ಟೇ ಎತ್ತರಕ್ಕೆ ಬಾಗಿ ಮೊಗದ ತುಂಬ ನಗು ತುಂಬಿಕೊಂಡು ಕ್ಯಾಮೆರಾಗಳಿಗೆ ಪೋಸು ನೀಡುತ್ತಿದ್ದರು. ದೇಶದ ನಾನಾ ಮೂಲೆಯಿಂದ ಬಂದಿದ್ದವರಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದ್ದ ಅರುಣ್ ವಿನೋದಿಯಾ, ಆಶಿಶ್ ಜೆಸ್ಪಾಲ್ ಹಾಗೂ ವಿ.ಆರ್. ದೀಕ್ಷಾ ಕೂಡ ಇದ್ದರು. ಹೀಗೆ ಸಚಿನ್‌ಗೆ ಹಸ್ತಲಾಘವ ಮಾಡಿದ ಮಕ್ಕಳಲ್ಲಿ ನಾಲ್ಕು ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಚಿನ್ ಅವರನ್ನು ತಲಾ ಒಂದೊಂದು ಪ್ರಶ್ನೆ ಕೇಳುವ ಅವಕಾಶ ದೊರೆತಿತ್ತು.ನಿಮ್ಮನ್ನು ಕ್ರಿಕೆಟ್‌ನ ದೇವರು ಎಂದು ಕರೆಯುತ್ತಾರೆ. ಹಾಗಿದ್ದರೆ ನಿಮಗೆ ಮಾದರಿ ವ್ಯಕ್ತಿಗಳು ಯಾರು?

-ಶಿಲ್ಪಾ ಜೋಸೆಫ್, ತಿರುವನಂತಪುರ

ನಾನು ಯಾವ ದೇವರೂ ಅಲ್ಲ. ಅದು ಜನರು ಹೇಳುವ ಮಾತು. ಇಷ್ಟು ಸಾಧನೆಗಳನ್ನು ಮಾಡಲು ನನಗೂ ಗುರುಗಳು, ಮಾದರಿ ವ್ಯಕ್ತಿಗಳಿದ್ದಾರೆ. ಈ ಹಂತದಲ್ಲಿ ನಾನು ನೆನಪಿಸಿಕೊಳ್ಳುವ ಇಬ್ಬರು ಮಹಾನ್ ವ್ಯಕ್ತಿಗಳೆಂದರೆ... ನಾನು ಆಗ ಕ್ರಿಕೆಟ್‌ನ ಕನವರಿಕೆಯಲ್ಲಿದ್ದೆ. ಸುನಿಲ್ ಗಾವಸ್ಕರ್ ಅವರ ಪ್ರತಿಯೊಂದು ಆಟ, ಬ್ಯಾಟಿಂಗ್ ಶೈಲಿ ನನ್ನ ಮನಸೂರೆಗೊಂಡಿತ್ತು. ಅವರ ಶೈಲಿಯನ್ನು ಅನುಕರಿಸುತ್ತಿದ್ದೆ. ನಂತರ ಬೆಳೆಯುತ್ತಾ ಹೋದಂತೆ ವಿವಿಯನ್ ರಿಚರ್ಡ್ಸ್ ನನಗೆ ಮಾದರಿಯಾದರು. ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ, ಆಯಾಸವಿಲ್ಲದೆ ಚೆಂಡನ್ನು ಸಿಕ್ಸರ್ ಎತ್ತುವ ರೀತಿ ನನಗೆ ಮೆಚ್ಚುಗೆಯಾದವು. ಈ ಇಬ್ಬರು ಶ್ರೇಷ್ಠ ಕ್ರಿಕೆಟಿಗರು ನನ್ನ ಮಾದರಿ ವ್ಯಕ್ತಿಗಳು.ನೂರನೇ ಶತಕ ದಾಖಲಿಸಲು ಸಾಕಷ್ಟು ಸಮಯ ತೆಗೆದುಕೊಂಡಿರಿ. ಅದು ಸಾಧ್ಯವಾಗದೇ ಇದ್ದಾಗ ನಿಮ್ಮ ಮನಸ್ಸಿನಲ್ಲಿ ಬಂದ ಮೊದಲ ಯೋಚನೆ ಏನು?

ರಶ್ಮಿ, ಚೆನ್ನೈ

(ಇಡೀ ಸಭೆಯೇ ನಗೆಗಡಲಿನಲ್ಲಿ ತೇಲಿತು. ಸಚಿನ್‌ಗೂ ನಗು ತಡೆಯಲಾಗಲಿಲ್ಲ. ಸ್ವಲ್ಪ ಸಾವರಿಸಿಕೊಂಡು...) ನೂರನೇ ಶತಕ ದಾಖಲಿಸಿದಾಗ ನಾನು ಕುಣಿದು ಕುಪ್ಪಳಿಸಲಿಲ್ಲ. ಬದಲಿಗೆ ಮೇಲೆ ನೋಡಿದೆ. ದೇವರೇ, ಈ ಗಳಿಗೆಗಾಗಿ ಇಷ್ಟು ಸಮಯ ತೆಗೆದುಕೊಂಡಿದ್ದಾದರೂ ಏಕೆ? ಎಂದು ಪ್ರಶ್ನಿಸಿದೆ. ನನ್ನ ಪ್ರಯತ್ನ ಹಾಗೂ ಅಭ್ಯಾಸದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡವನಲ್ಲ. ಕಠಿಣ ಅಭ್ಯಾಸ, ನಿರಂತರ ಪ್ರಯತ್ನವಿದ್ದರೂ ಕೆಲವು ಕ್ಷಣಗಳಿಗಾಗಿ ಕಾಯಲೇಬೇಕಾಗುತ್ತದೆ.ಅಷ್ಟೊಂದು ಕ್ರಿಕೆಟ್ ಅಭಿಮಾನಿಗಳು ಈ ಒಂದು ಸಾಧನೆಗಾಗಿ ಕಾಯುತ್ತಿರುವಾಗ ಅದನ್ನು ಈಡೇರಿಸಲು ತಡವಾಗಿದ್ದು ನನಗೂ ಬೇಸರ ತಂದಿತು. ಆದರೆ ಸಾಧನೆ ಎಂಬ ಹಾದಿಯಲ್ಲಿ ಪ್ರತಿಯೊಬ್ಬರಿಗೂ ಮೊದಲು ಇರಬೇಕಾದ್ದು ತಾಳ್ಮೆ ಹಾಗೂ ಗುರಿಯತ್ತ ಸಾಗುವ ದೃಢಸಂಕಲ್ಪ.ನೀವು ಕ್ರಿಕೆಟರ್ ಆಗದಿದ್ದರೆ ಬೇರೆ ಏನಾಗುತ್ತಿದ್ದಿರಿ?

-ದಯಾಶ್ರೀ, ಪುಣೆ

ಕ್ರಿಕೆಟ್ ಬಿಟ್ಟರೆ ನನ್ನ ಮುಂದೆ ಬೇರೆ ಯಾವ ಉತ್ತಮ ಆಯ್ಕೆಯೂ ಇರಲಿಲ್ಲ. ಕ್ರಿಕೆಟ್ ನನ್ನ ಉಸಿರು. ಅದರೊಂದಿಗೆ ವಿದ್ಯಾಭ್ಯಾಸವನ್ನು ಕೂಡ ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಯೋಜನೆ ಕೈಕೊಟ್ಟಿತು. ಕತ್ತಲಾದರೂ ಕ್ರಿಕೆಟ್ ಬ್ಯಾಟ್ ಹಿಡಿದು ಆಡುತ್ತಿದ್ದ ನನಗೆ ವಿದ್ಯೆ ಅಷ್ಟಾಗಿ ಒಲಿಯಲಿಲ್ಲ. ಕ್ರಿಕೆಟ್ ಬಿಟ್ಟರೆ ನಾನು ಆಯ್ಕೆ ಮಾಡಿಕೊಳ್ಳುತ್ತಿದ್ದ ಮತ್ತೊಂದು ಕ್ಷೇತ್ರ ಟೆನ್ನಿಸ್. ಮನೆಯ ಟೆರೆಸ್ ಮೇಲೆ ನಾನು, ಅಣ್ಣ ಅಜಿತ್ ಟೆನ್ನಿಸ್ ಆಡುತ್ತಿದ್ದೆವು. ನನ್ನ ಒಂದು ಕೈಯಲ್ಲಿ ಕ್ರಿಕೆಟ್ ಬ್ಯಾಟ್, ಮತ್ತೊಂದರಲ್ಲಿ ಟೆನ್ನಿಸ್ ಬ್ಯಾಟ್ ಹಿಡಿದು ಅಣ್ಣ ಎಸೆಯುತ್ತಿದ್ದ ಚೆಂಡುಗಳನ್ನು ಎದುರಿಸುತ್ತಿದ್ದೆ. ಎರಡೂ ಕ್ರೀಡೆಗಳ ಮೇಲೆ ನನಗೆ ಎಲ್ಲಿಲ್ಲದ ಪ್ರೀತಿ. ಈಗಲೂ ನಾನು ವಿಶ್ವಶ್ರೇಷ್ಠರ ಟೆನ್ನಿಸ್ ಆಟಗಾರರ ಪಂದ್ಯಗಳನ್ನು ವೀಕ್ಷಿಸುತ್ತೇನೆ.ಸಚಿನ್ ಅವರ ಈ ಮಾತಿಗೆ ಪ್ರತಿಕ್ರಿಯಿಸಿದ ಚಾರು ಶರ್ಮ, `ಸದ್ಯ, ಪೀಟ್ ಸಾಂಪ್ರಸ್, ರೋಜರ್ ಫೆಡರರ್ ಮುಂತಾದವರು ಬದುಕಿದರು' ಎಂದು ತಮಾಷೆ ಮಾಡಿದರು.ನೀವು ಭಾರತ ಕ್ರಿಕೆಟ್‌ನ ಜರ್ಸಿ ಹಾಗೂ ಕ್ಯಾಪ್ ತೊಟ್ಟು ಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಮೈದಾನ ಪ್ರವೇಶಿಸಿದಾಗ ಮನಸ್ಸಿನಲ್ಲಿ ಹರಿದಾಡಿದ ವಿಚಾರಗಳೇನು?

-ಆಕಾಶ್, ಕೊಯಮತ್ತೂರು

ಭಾರತ ಕ್ರಿಕೆಟ್‌ನ ಜರ್ಸಿ ಹಾಗೂ ಕ್ಯಾಪ್ ತೊಟ್ಟು ದೇಶಕ್ಕಾಗಿ ಆಡುವುದು ನನ್ನ ಜೀವನದ ಪರಮ ಗುರಿಯಾಗಿತ್ತು. ನನ್ನ ಬಳಿ ಎಷ್ಟು ಬಟ್ಟೆಗಳಿದ್ದರೂ ಅದನ್ನು ತೊಟ್ಟಾಗ ಆದ ಆ ಖುಷಿಯನ್ನು ಇಂದಿಗೂ ಮರೆಯಲಾರೆ. ನನ್ನಾಸೆ ಈಡೇರಿದ ಖುಷಿಯಲ್ಲಿ ಕ್ರೀಡಾಂಗಣದಲ್ಲಿ ಏನು ನಡೆಯುತ್ತಿದೆ ಎಂಬುದು ಗಮನಕ್ಕೆ ಬರಲಿಲ್ಲ. ಒಂದು ಕಡೆಯಿಂದ ವಿಶ್ವ ಶ್ರೇಷ್ಠ ಅನುಭವಿ ಬೌಲರ್ ವಾಸಿಂ ಅಕ್ರಂ, ಮತ್ತೊಂದು ಬದಿಯಿಂದ ಆ ಕಾಲದಲ್ಲಿ ಜಗತ್ತಿನ ಅತಿ ವೇಗದ ಬೌಲರ್ ವಕಾರ್ ಯೂನಿಸ್ ದಾಳಿಯನ್ನು ನಾನು ಎದುರಿಸಬೇಕಿತ್ತು. ಶಾಲೆ, ರಣಜಿ ಹಾಗೂ ಇರಾನಿ ಟ್ರೋಫಿಗಳಿಗಾಗಿ ಆಡಿ ಶತಕಗಳನ್ನು ಗಳಿಸಿದ್ದ ನಾನು ಅದೇ ಧಾಟಿಯಲ್ಲೇ ಆ ಪಂದ್ಯವನ್ನೂ ಆಡಿದೆ. ದಾಳಿಯನ್ನು ಎದುರಿಸಲು ಆಕ್ರಮಣವೇ ಸೂಕ್ತ ಮಾರ್ಗ ಎಂದರಿತ ನಾನು ತಾಳ್ಮೆ ಮರೆತು ಆಕ್ರಮಣಕ್ಕಿಳಿದೆ. ಹದಿನೈದು ರನ್ನುಗಳನ್ನು ಗಳಿಸಿ ಔಟಾದೆ.ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು ಡ್ರೆಸ್ಸಿಂಗ್ ಕೋಣೆಯನ್ನು ಪ್ರವೇಶಿಸಿದೆ. ಆಗ ಕೋಚ್ ಆಗಿದ್ದ ಚಂದು ಬೋರ್ಡೆ ಅವರಲ್ಲಿ, `ಹೀಗೇಕಾಯಿತು' ಎಂದು ಪ್ರಶ್ನಿಸಿದೆ. `ಮುಂದೆ ಹೋಗುತ್ತಾ ನೀನು ಕಲಿಯುತ್ತೀಯಾ' ಎಂದು ಬೆನ್ನುತಟ್ಟಿದರು. `ಆ ಹದಿನೈದು ರನ್ನುಗಳನ್ನು ಗಳಿಸುವವರೆಗೂ ನಾನು ಕ್ರೀಸ್‌ನಲ್ಲಿ ಉಳಿದಿದ್ದಾದರೂ ಹೇಗೆ?' ಎಂದು ಈಗಲೂ ನನಗೆನಿಸುತ್ತದೆ.

ಇಷ್ಟು ಪ್ರಶ್ನೆಗಳಿಗೆ ಉತ್ತರಿಸಿದ ಸಚಿನ್ ಬಿಗಿ ಬಂದೋಬಸ್ತ್‌ನಲ್ಲಿ ಹೋಟೆಲ್‌ನ ತಮ್ಮ ಕೊಠಡಿಯತ್ತ ಹೆಜ್ಜೆ ಹಾಕಿದರು.

 

ಪ್ರತಿಕ್ರಿಯಿಸಿ (+)