ಬುಧವಾರ, ಏಪ್ರಿಲ್ 21, 2021
23 °C
`ನಿವೃತ್ತಿ ನಿರ್ಧಾರ ಅವರಿಗೇ ಬಿಟ್ಟುಬಿಡಿ'

ಸಚಿನ್‌ಗೆ ಸೂಕ್ತ ಗೌರವ ನೀಡಿ: ಕುಂಬ್ಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿನ್‌ಗೆ ಸೂಕ್ತ ಗೌರವ ನೀಡಿ: ಕುಂಬ್ಳೆ

ನವದೆಹಲಿ (ಪಿಟಿಐ): ಸಚಿನ್ ತೆಂಡೂಲ್ಕರ್ ನಿವೃತ್ತಿ ನಿರ್ಧಾರ ಪ್ರಕಟಿಸಬೇಕೇ? ಬೇಡವೇ? ಎಂಬ ಚರ್ಚೆಯ ಕಾವು ದಿನಕಳೆದಂತೆ ಹೆಚ್ಚುತ್ತಿದೆ. ಆದರೆ ಭಾರತ ತಂಡದಲ್ಲಿ ಸಚಿನ್ ಅವರ ಸ್ಥಾನವನ್ನು ಪ್ರಶ್ನಿಸುತ್ತಿರುವ ಟೀಕಾಕಾರರಿಗೆ ಪ್ರತ್ಯುತ್ತರ ನೀಡಿರುವ ಅನಿಲ್ ಕುಂಬ್ಳೆ, `ಸಚಿನ್‌ಗೆ ಅರ್ಹ ಗೌರವ ನೀಡಿ' ಎಂದಿದ್ದಾರೆ.

ಸಚಿನ್ ಈಗ ಒತ್ತಡದಲ್ಲಿ ಸಿಲುಕಿದ್ದಾರೆ. ಇಂತಹ ಸದರ್ಭದಲ್ಲಿ ಅವರ ವಿರುದ್ಧ ಬೆರಳು ತೋರಿಸುವ ಬದಲು, ಬೆಂಬಲ ನೀಡುವುದು ಅಗತ್ಯ ಎಂದು ಭಾರತ ತಂಡದ ಮಾಜಿ ಸ್ಪಿನ್ನರ್ ಹೇಳಿದರು.

`ಸಚಿನ್ ಏಕಾಂಗಿಯಾಗಿ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಭಾರತ ತಂಡದ ಸೋಲಿಗೆ ಅವರೊಬ್ಬರು ಮಾತ್ರ ಎಂದೂ ಕಾರಣವಾಗಿಲ್ಲ. ಭವಿಷ್ಯದ ಬಗ್ಗೆ ಏನು ನಿರ್ಧಾರ ಕೈಗೊಳ್ಳಬೇಕು ಎಂಬ ಸ್ವಾತಂತ್ರ್ಯವನ್ನು ಅವರಿಗೇ ನೀಡಬೇಕು.ಏಕೆಂದರೆ ಅವರಷ್ಟು ಸಾಧನೆಯನ್ನು ಬೇರೆ ಯಾರೂ ಮಾಡಿಲ್ಲ. ಯಾವುದೇ ಆಟಗಾರ 192 ಟೆಸ್ಟ್ ಪಂದ್ಯಗಳನ್ನಾಡಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಯಾರೂ 34,000 ರನ್ ಪೇರಿಸಿಲ್ಲ, ಅಥವಾ 100 ಶತಕ ಗಳಿಸಿಲ್ಲ. ಆದ್ದರಿಂದ ಅವರಿಗೆ ಸಲ್ಲಬೇಕಿರುವ ಗೌರವ ನೀಡಿ' ಎಂದು ತಮ್ಮ ಅಂಕಣದಲ್ಲಿ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

`ಕಳೆದ 23 ವರ್ಷಗಳ ಕಾಲ ಅವರು ಜನರ ಕನಸುಗಳನ್ನು ನಿಜಗೊಳಿಸಲು ಶ್ರಮಪಟ್ಟರು. ಜನರ ಮನಸ್ಸಿನಲ್ಲಿ ಭಾವನಾತ್ಮಕವಾಗಿ ಸ್ಥಾನ ಪಡೆದರು. ಆದ್ದರಿಂದ ನಾವು ಅವರಿಗೆ ಭಾವನಾತ್ಮಕ ಸ್ಥಾನ ನೀಡಬೇಕು' ಎಂದಿದ್ದಾರೆ.

`ಸಚಿನ್ ಒಬ್ಬ ಶ್ರೇಷ್ಠ ಆಟಗಾರ. ರನ್ ಗಳಿಸುವುದು ಹೇಗೆ ಎಂಬುದನ್ನು ಅವರಿಗೆ ಯಾರೂ ತಿಳಿಸಿಕೊಡಬೇಕಿಲ್ಲ. ಈ ಕಠಿಣ ಪರಿಸ್ಥಿತಿಯಲ್ಲಿ ಅವರಿಗೆ ಎಲ್ಲರ ಬೆಂಬಲ ಅಗತ್ಯ. ಹಾಗಾದಲ್ಲಿ ಅವರಿಂದ ಹೆಚ್ಚಿನ ರನ್ ನಿರೀಕ್ಷಿಸಬಹುದು. ಸಚಿನ್ ಮತ್ತೆ ಹಳೆಯ ಲಯ ಕಂಡುಕೊಳ್ಳುವರು ಎಂಬ ಪೂರ್ಣ ವಿಶ್ವಾಸ ನನಗಿದೆ' ಎಂದು ಕರ್ನಾಟಕದ ಮಾಜಿ ಆಟಗಾರ ಹೇಳಿದ್ದಾರೆ.

`ಇತ್ತೀಚಿನ ಒಂದು ವರ್ಷದಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ ಎಂಬ ಕಾರಣಕ್ಕೆ ಸಚಿನ್ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ. ಹೌದು. ಕೆಲ ಸಮಯಗಳಿಂದ ಸಚಿನ್ ಉತ್ತಮ ಫಾರ್ಮ್‌ನಲ್ಲಿ ಇಲ್ಲ. ಆದರೆ ಈ ಅವಧಿಯಲ್ಲಿ ಭಾರತ ತಂಡದ ಇತರರ ಆಟಗಾರರ ಪ್ರದರ್ಶನ  ಹೇಗಿತ್ತು ಎಂಬುದನ್ನು ನೋಡಬೇಕು.

ಸಚಿನ್ ಮಾತ್ರವಲ್ಲ, ಭಾರತ ತಂಡ ಇತರರೂ ಇತ್ತೀಚಿನ ದಿನಗಳಲ್ಲಿ ಟೆಸ್ಟ್‌ನಲ್ಲಿ ಉತ್ತಮ ಆಟ ಆಡಿಲ್ಲ. ಆದ್ದರಿಂದ ಭಾರತದ ಕಳಪೆ ಪ್ರದರ್ಶನಕ್ಕೆ ಸಚಿನ್ ಅವರನ್ನು ಮಾತ್ರ ದೂರುವುದು ಸರಿಯಲ್ಲ' ಎಂಬ ಅಭಿಪ್ರಾಯವನ್ನು ಕುಂಬ್ಳೆ ವ್ಯಕ್ತಪಡಿಸಿದ್ದಾರೆ.ಯಾರೂ ಒತ್ತಡ ಹೇರಬಾರದು: ಗಂಭೀರ್

ನವದೆಹಲಿ (ಪಿಟಿಐ):
ಆಸ್ಟ್ರೇಲಿಯಾ ತಂಡದ ಆಟಗಾರ ರಿಕಿ ಪಾಂಟಿಂಗ್ ನಿವೃತ್ತಿ ಪ್ರಕಟಿಸಿರುವ ಕಾರಣ ಸಚಿನ್ ತೆಂಡೂಲ್ಕರ್ ಕೂಡಾ ನಿವೃತ್ತಿ ಪ್ರಕಟಿಸಲಿ ಎಂಬ ಕೂಗು ಕೇಳಿಬಂದಿದೆ. ಆದರೆ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ತಂಡದ ಹಿರಿಯ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ.

`ಸಚಿನ್ ನಿವೃತ್ತಿಯಾಗಲಿ ಎಂದು ಯಾರೂ ಒತ್ತಡ ಹೇರಬಾರದು. ಯಾವಾಗ ನಿವೃತ್ತಿಯಾಗಬೇಕು ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಪಾಂಟಿಂಗ್ ನಿವೃತ್ತಿಯಾಗಿರುವ ಕಾರಣ ಸಚಿನ್ ಕೂಡಾ ವಿದಾಯ ಹೇಳಲಿ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಇದು ವೈಯಕ್ತಿಕ ವಿಚಾರ. ಸಚಿನ್ ಮತ್ತು ಪಾಂಟಿಂಗ್ ಬೇರೆ ಬೇರೆ ದೇಶಕ್ಕೆ ಸೇರಿದವರು. ಇಬ್ಬರದೂ ವಿಭಿನ್ನ ವ್ಯಕ್ತಿತ್ವ. ಆದ್ದರಿಂದ ಇವರ ನಡುವೆ ಹೋಲಿಕೆ ಮಾಡುವಂತಿಲ್ಲ' ಎಂದು ಗಂಭೀರ್ ನುಡಿದಿದ್ದಾರೆ.

`ಡ್ರೆಸಿಂಗ್ ಕೊಠಡಿಯಲ್ಲಿ ಸಚಿನ್ ಅವರ ಸಾನಿಧ್ಯ ಹೆಚ್ಚಿನ ಬದಲಾವಣೆಗೆ ಕಾರಣವಾಗುತ್ತದೆ. ಅವರು ಸದ್ಯದಲ್ಲೇ ಫಾರ್ಮ್ ಕಂಡುಕೊಳ್ಳುವರು' ಎಂಬ ವಿಶ್ವಾಸವನ್ನು ಗಂಭೀರ್ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.