ಸಚಿನ್ ಆಯ್ಕೆ; ಬಿಸಿಸಿಐ ಮುಂದಿದೆ ಸವಾಲು

7
ಕ್ರಿಕೆಟ್: ಪಾಕಿಸ್ತಾನ ವಿರುದ್ಧದ ಸರಣಿಗೆ ಇಂದು ಭಾರತ ತಂಡದ ಆಯ್ಕೆ

ಸಚಿನ್ ಆಯ್ಕೆ; ಬಿಸಿಸಿಐ ಮುಂದಿದೆ ಸವಾಲು

Published:
Updated:

ಬೆಂಗಳೂರು: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆಯುತ್ತಾರಾ?

-ಸದ್ಯಕ್ಕೆ ಇದು ಮಿಲಿಯನ್ ಡಾಲರ್ ಪ್ರಶ್ನೆ.  ಕ್ರಿಕೆಟ್ ವಲಯದಲ್ಲಿ ಈ ಪ್ರಶ್ನೆ ಎಷ್ಟೊಂದು ಕಾವು ಪಡೆದುಕೊಂಡಿದೆಯೆಂದರೆ, ಪಾಕ್ ವಿರುದ್ಧ ಭಾರತ ಗೆಲುವು ಸಾಧಿಸುತ್ತದೆಯೋ ಇಲ್ಲವೋ ಅದು ನಂತರದ ಮಾತು. ಆದರೆ, ಮುಂಬೈಕರ್ ತಂಡದಲ್ಲಿ ಸ್ಥಾನ ಪಡೆಯುತ್ತಾರೊ ಇಲ್ಲವೊ ಎನ್ನುವ ಸಂಗತಿ ಕ್ರಿಕೆಟ್ ಪ್ರೇಮಿಗಳ ಮಧ್ಯೆ ಹರಿದಾಡುತ್ತಿದೆ. ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.ಸಚಿನ್ ಅವರನ್ನು ಮುಟ್ಟುವ ಧೈರ್ಯ ಆಯ್ಕೆ ಸಮಿತಿಗೆ ಇಲ್ಲವಾದರೂ, ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದರು. ಇದಕ್ಕೆ ಅಂಕಿಅಂಶಗಳೇ ಸಾಕ್ಷಿ. ಟೆಸ್ಟ್ ಸರಣಿಯಲ್ಲಿ ನಾಲ್ಕು ಪಂದ್ಯಗಳಿಂದ ಗಳಿಸಿದ್ದು 112 ರನ್ ಮಾತ್ರ. ಬ್ಯಾಟಿಂಗ್ ಸರಾಸರಿ 18.66. ಆದ್ದರಿಂದ ಸಚಿನ್ ಕೆಲ ಹಿರಿಯ ಆಟಗಾರರ ಟೀಕೆಗೂ ಗುರಿಯಾಗಿದ್ದಾರೆ. ವಿಪರ್ಯಾಸವೆಂದರೆ,  ಕೆಲ ಹಿರಿಯ ಆಟಗಾರರು `ಲಿಟಲ್ ಚಾಂಪಿಯನ್' ಬೆಂಬಲಕ್ಕೆ ನಿಂತಿದ್ದಾರೆ.ನಿವೃತ್ತಿಯ ಮಾತು:

ಆಂಗ್ಲರ ಬಳಗದ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ನಾಗಪುರದಲ್ಲಿ ಸಚಿನ್ ನಿವೃತ್ತಿ ಪ್ರಕಟಿಸುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಉಹಾಪೋಹ ಕೇಳಿ ಬಂದಿತ್ತು. ಪತ್ನಿ ಅಂಜಲಿ ನಾಗಪುರಕ್ಕೆ ಬಂದಿದ್ದೂ ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿತ್ತು. ಆದರೆ, ಸಚಿನ್ ಮಾತ್ರ ಬ್ಯಾಟಿಂಗ್ ಮುಗಿಸಿ ಪೆವಿಲಿಯನ್ ಸೇರಿಕೊಂಡರು. ಟೀಕೆ ಮಾಡಿದವರಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ.ಇದೇ ವರ್ಷ ರಾಹುಲ್ ದ್ರಾವಿಡ್ ಹಾಗೂ ವಿ.ವಿ.ಎಸ್. ಲಕ್ಷ್ಮಣ್ ನಿವೃತ್ತಿ ಪ್ರಕಟಿಸಿದರು. ಆದ್ದರಿಂದ ಸಚಿನ್ ನಿವೃತ್ತಿಗೆ 2012 ಸಾಕ್ಷಿಯಾಗಬಹುದು ಎಂದು ಗುಸು ಗುಸು ಚರ್ಚೆ ಆರಂಭಗೊಂಡಿತ್ತು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಸಹ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿದ್ದು, ಸಚಿನ್ ಅವರನ್ನು ಇನ್ನಷ್ಟು ಒತ್ತಡಕ್ಕೆ ಒಳಗಾಗುವಂತೆ ಮಾಡಿತು.`ವರ್ಷ 38 ಆಯಿತು. ದೇಹ ಸ್ಪಂದಿಸುತ್ತಿಲ್ಲ. ಸರಿಯಾಗಿ ಫಿಟ್‌ನೆಸ್ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕ್ರಿಕೆಟ್ ಅಂಗಣದಿಂದ ಹಿಂದೆ ಸರಿಯುತ್ತಿದ್ದೇನೆ' ಎಂದು `ಪಂಟರ್' ವಿದಾಯದ ಸಮಯದಲ್ಲಿ ಹೇಳಿದ್ದರು. ಇದೇ ಸಂದರ್ಭದಲ್ಲಿ `ಸಚಿನ್‌ಗೂ 39 ದಾಟಿಯಾಗಿದೆಯಲ್ಲಾ' ಎಂದು ಮಾಜಿ ಕ್ರಿಕೆಟಿಗರು ಚಾಟಿ ಬೀಸಿದ್ದರು. ಆದರೆ, `ಶತಕಗಳ ಶತಕ'ದ ಸರದಾರ ಮಾತ್ರ ತುಟಿ ಬಿಚ್ಚಲಿಲ್ಲ.ಬೌಲ್ಡ್ ಸಂಕಟ: ಸಚಿನ್ ಪದೇ ಪದೇ ಬೌಲ್ಡ್ ಆಗುತ್ತಿರುವುದು ಸಹ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಅವರ ಬ್ಯಾಟಿಂಗ್ ರಕ್ಷಣಾ ಕೋಟೆಯಲ್ಲಿ ಎದುರಾಳಿ ತಂಡದ ಬೌಲರ್‌ಗಳು ಸುಲಭವಾಗಿ ನುಗ್ಗಲು ಸಾಧ್ಯವಾಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಆರು ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಮೂರು ಸಲ ಬೌಲ್ಡ್ ಆಗಿದ್ದಾರೆ.ಪಾಕ್ ವಿರುದ್ಧವೇ ಅಂತಿಮ ಪಂದ್ಯ: ಸಚಿನ್ ಈ ಸಲದ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದು ಕೊನೆಯ ಏಕದಿನ ಪಂದ್ಯವಾಗಿತ್ತು. ಏಷ್ಯಾಕಪ್‌ನಲ್ಲಿಯೇ ಮುಂಬೈಕರ್ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ `ಶತಕಗಳ ಶತಕ' ಸಾಧನೆ ಮಾಡಿದ್ದರು.ವಾಹಿನಿಗಳ ವಿಶ್ಲೇಷಣೆ: ಪಾಕ್ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸಚಿನ್ ಆಡಲಿದ್ದಾರೆ ಎಂದು ವಾಹಿನಿಗಳು ವಿಶ್ಲೇಷಣೆ ಮಾಡಿವೆ.

`ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧದ ಮಹತ್ವದ ಸರಣಿಯಾದ ಕಾರಣ ಸಚಿನ್ ಆಡುತ್ತಾರೆ. ನಿವೃತ್ತಿಯ ಬಗ್ಗೆ ನಂತರ ನಿರ್ಧಾರ ಕೈಗೊಳ್ಳುತ್ತಾರೆ' ಎನ್ನುವ ಅಭಿಪ್ರಾಯಗಳು ವಾಹಿನಿಗಳಲ್ಲಿ ಹರಿದಾಡುತ್ತಿವೆ. 23 ವರ್ಷಗಳ ವೃತ್ತಿ ಬದುಕಿನಲ್ಲಿ ಸಚಿನ್ ಮಹಾನ್ ಸಂಕಷ್ಟದ ಸಂದರ್ಭ ಎದುರಿಸುತ್ತಿದ್ದಾರೆ. ಆದರೂ, ಅವರು ಮೌನ ಮುರಿದಿಲ್ಲ. ಆದರೆ, ಆಯ್ಕೆದಾರರು ಸಚಿನ್‌ಗೆ `ಕೈ' ಕೊಡುವ ಧೈರ್ಯ ತೋರಲಿದ್ದಾರೆಯೆ ಎನ್ನುವ ಪ್ರಶ್ನೆಗೆ ಭಾನುವಾರ ಉತ್ತರ ಸಿಗಲಿದೆ.

ಇಂದು ತಂಡದ ಆಯ್ಕೆ

ಮುಂಬೈ: ಪಾಕಿಸ್ತಾನ ವಿರುದ್ಧದ ಎರಡು ಪಂದ್ಯಗಳ ಟ್ವೆಂಟಿ-20 ಹಾಗೂ ಏಕದಿನ ಕ್ರಿಕೆಟ್ ಸರಣಿಗೆ ಭಾರತ ತಂಡದ ಆಯ್ಕೆ ಭಾನುವಾರ ಮುಂಬೈನಲ್ಲಿ ನಡೆಯಲಿದೆ. ಇಂಗ್ಲೆಂಡ್ ಎದುರು ಟೆಸ್ಟ್ ಸರಣಿಯಲ್ಲಿ ದೋನಿ ಬಳಗ ಹೀನಾಯ ಸೋಲು ಕಂಡ ಬಳಿಕ ಸಂದೀಪ್ ಪಾಟೀಲ್ ಸಾರಥ್ಯದ ಆಯ್ಕೆ ಸಮಿತಿ ಇದೇ ಮೊದಲ ಸಲ ಸಭೆ ಸೇರುತ್ತಿದೆ. ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಮೊದಲ ಟ್ವೆಂಟಿ-20 ಪಂದ್ಯ ನಡೆದರೆ, ಅಹಮದಾಬಾದ್‌ನಲ್ಲಿ ಡಿ. 28ರಂದು ಎರಡನೇ ಹಾಗೂ ಅಂತಿಮ ಪಂದ್ಯ ಜರುಗಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry