ಸೋಮವಾರ, ನವೆಂಬರ್ 18, 2019
27 °C
ಕ್ರೀಡಾ ಸಂವಾದ

ಸಚಿನ್ ಇನ್ನಷ್ಟು ಕಾಲ ಮುಂದುವರಿಯಲಿ

Published:
Updated:

ನಲವತ್ತು ವಸಂತ ಕಳೆದರೂ ಇನ್ನೂ ಹದಿ ಹರೆಯದವರಂತೆ ಮೈದಾನದಲ್ಲಿ ಹುಮ್ಮಸ್ಸಿನಿಂದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಇನ್ನಷ್ಟೂ ಕಾಲ ಭಾರತ ತಂಡದಲ್ಲಿ ಉಳಿಸಿಕೊಳ್ಳುವುದು ಸೂಕ್ತ. ಇವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿದಾಗ ನಾವೆಲ್ಲಾ ಅಪಾರ ನಿರಾಸೆ ಅನುಭವಿಸಿದ್ದೆವು. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಮುಂದುವರಿಯಲಿ ಎನ್ನುವುದೇ ನನ್ನ ಅಭಿಲಾಷೆ. ಅವರಿಗೆ ವಯಸ್ಸಾದರೂ ಅವರ ಆಟಕ್ಕೆ ಮುಪ್ಪಾಗಿಲ್ಲ.

-ಎಚ್.ಎಸ್.ಸಂತೋಷ ಕುಮಾರ್, ಕೊಕ್ಕನೂರು, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ.ನಿವೃತ್ತಿಗೆ ಒತ್ತಾಯ ಬೇಡ

ಸಚಿನ್ ಇತ್ತೀಚೆಗಿನ ದಿನಗಳಲ್ಲಿ `ಫಾರ್ಮ್' ಕಳೆದುಕೊಂಡಿರಬಹುದು. ಆದರೆ ಅವರು ಯಾವುದೇ ಕ್ಷಣದಲ್ಲಿಯೂ ಎದ್ದು ಬರುವ   ಫೀನಿಕ್ಸ್‌ನಂತಹ ಆಟಗಾರ. ಭಾರತದ ಮಟ್ಟಿಗೆ ಈಚೆಗೆ ಹೆಚ್ಚು ಮಂದಿ ಟೆಸ್ಟ್ ನೋಡುತ್ತಿದ್ದಾರೆಂದರೆ ಅದಕ್ಕೆ ಕಾರಣ ಸಚಿನ್ ಎಂಬ ಆಕರ್ಷಣೆ. ಸಚಿನ್ ಹೆಚ್ಚೆಂದರೆ ಇನ್ನೊಂದೆರಡು ವರ್ಷ ಆಡಿ ತಾವೇ ನಿವೃತ್ತಿ ಪ್ರಕಟಿಸಬಹುದು. ಹಾಗೆಯೇ ಮಾಡಲಿ ಬಿಡಿ. ನಾವು ಅವರ ನಿವೃತ್ತಿಗೆ ಒತ್ತಾಯ ಹೇರುವುದು ಬೇಡ.

-ಎ.ಸಿ.ಸತೀಶಅಂತರವಳ್ಳಿ  ಜ್ಞಾನಭಾರತಿ, ಬೆಂಗಳೂರು.ಕಿರಿಯರಿಗೆ ಹಾದಿ ಮಾಡಿಕೊಡಲಿ

ಪ್ರತಿಯೊಬ್ಬ ಆಟಗಾರನೂ ಒಂದು ದಿನ ನಿವೃತ್ತನಾಗಲೇ ಬೇಕು. ಅದಕ್ಕೆ ಸಚಿನ್ ಕೂಡಾ ಹೊರತಲ್ಲ. ಅವರು ಶತಕಗಳ ಶತಕ ಗಳಿಸಿದಾಗಲೇ ನಿವೃತ್ತಿ ಪ್ರಕಟಿಸಿದ್ದರೆ ಒಳ್ಳೆಯದಿತ್ತು. ಹಿಂದೆಲ್ಲಾ ಅವರು ಟೀಕಾಕಾರರಿಗೆ ತಮ್ಮ ಬ್ಯಾಟಿನ ಮೂಲಕವೇ ಉತ್ತರ ನೀಡಿದ್ದರು. ಆದರೆ ಈಗ ಅವರ ವಯಸ್ಸು ಮತ್ತು ದೇಹ ಅಂತಹ ಉತ್ತರ ನೀಡಲು ಸ್ಪಂದಿಸುತ್ತಿಲ್ಲ. ಇನ್ನಾದರೂ ನಿವೃತ್ತಿ ಪ್ರಕಟಿಸಿ ಕಿರಿಯರಿಗೆ ಹಾದಿ ಮಾಡಿಕೊಡಲಿ.

-ಜಿ.ಒ.ತಿಪ್ಪೇಸ್ವಾಮಿ, ಕಳಸ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

ದೋನಿಗೆ `ಬಲಿ'ಯಾಗಲು ಕಾಯುವುದೇಕೆ ?

ಸಚಿನ್ ಇನ್ನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುವುದು ಸೂಕ್ತ. ಈಗಾಗಲೇ ದ್ರಾವಿಡ್, ಸೆಹ್ವಾಗ್, ಲಕ್ಷ್ಮಣ್, ಗಂಗೂಲಿ, ಗಂಭೀರ್ ಅವರಂತಹ ಘಟಾನುಘಟಿ ಆಟಗಾರರನ್ನೆಲ್ಲಾ `ಬಲಿ' ಪಡೆದಿರುವ ದೋನಿಯವರು ಸಚಿನ್ ಅವರನ್ನು ಸುಮ್ಮನೆ ಬಿಡುತ್ತಾರೆಯೇ ? ಮುಂದೊಂದು ದಿನ ದೋನಿಯ ಪಿತೂರಿಗೆ ಸಿಲುಕಿ ತಂಡದಿಂದ ಹೊರಬೀಳುವುದಕ್ಕಿಂತ ಗೌರವಯುತವಾಗಿ ಈಗಲೇ ಅವರು ನಿವೃತ್ತಿ ಪ್ರಕಟಿಸುವುದು ಒಳ್ಳೆಯದು.

-ಬಿ.ಜಿ.ಮಹಂತೇಶ್, ಬೇವಿನಹಳ್ಳಿ,ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ.ನಿವೃತ್ತರಾಗುವುದೇ ಉತ್ತಮ ತೀರ್ಮಾನ


ಪ್ರಸಕ್ತ ರಾಜ್ಯಸಭಾ ಸದಸ್ಯರಾಗಿರುವ ಸಚಿನ್ ಭಾರತ ರತ್ನ ಪ್ರಶಸ್ತಿಗೆ ನೂರಕ್ಕೆ ನೂರರಷ್ಟು ಅರ್ಹರು. ತಮ್ಮ ಕ್ರಿಕೆಟ್ ಬದುಕಿನ ಕೊನೆಯ ದಿನಗಳಲ್ಲಿ ಟೀಕೆಗೆ ಒಳಗಾಗಿ ಹೆಸರು ಕೆಡಿಸಿಕೊಳ್ಳುವುದಕ್ಕಿಂತ, ಬೇಗ ನಿವೃತ್ತಿ ಪ್ರಕಟಿಸುವುದು ಉತ್ತಮ. ಈಚೆಗೆ ಐಪಿಎಲ್ ಪಂದ್ಯಗಳಲ್ಲಿ ಹೊಸ ಮುಖಗಳು ಬೆಳಕಿಗೆ ಬರುತ್ತಿವೆ. ಅಂತಹವರಲ್ಲಿ ಪ್ರತಿಭಾವಂತರಿಗೆ ರಾಷ್ಟ್ರ ತಂಡದಲ್ಲಿ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಸಚಿನ್ ತೆರೆಯ ಮರೆಗೆ ಸರಿಯುವುದೇ ಸೂಕ್ತ.

-ಜಿ.ಎಂ.ವಿವೇಕಾನಂದ,ಜಮಖಂಡಿ, ಬಾಗಲಕೋಟೆ ಜಿಲ್ಲೆ.

ಪ್ರತಿಕ್ರಿಯಿಸಿ (+)