`ಸಚಿನ್ ಇನ್ನಷ್ಟು ವರ್ಷ ಟೆಸ್ಟ್ ಆಡಲಿ'

7
ಅಂಪೈರ್ ತೀರ್ಪು ಪರಿಶೀಲನಾ ಪದ್ಧತಿ: ಐಸಿಸಿ ನಿಲುವಿಗೆ ರಣತುಂಗಾ ಅಸಮಾಧಾನ

`ಸಚಿನ್ ಇನ್ನಷ್ಟು ವರ್ಷ ಟೆಸ್ಟ್ ಆಡಲಿ'

Published:
Updated:
`ಸಚಿನ್ ಇನ್ನಷ್ಟು ವರ್ಷ ಟೆಸ್ಟ್ ಆಡಲಿ'

ಬೆಂಗಳೂರು: `ಚುಟುಕು ಆಟ ಟ್ವೆಂಟಿ-20 ಕ್ರಿಕೆಟ್‌ನ ಅಬ್ಬರದಲ್ಲಿ ಟೆಸ್ಟ್ ಮಾದರಿಯಂತಹ ಕ್ರಿಕೆಟ್ ಉಳಿಯಬೇಕಾದರೆ ಸಚಿನ್ ತೆಂಡೂಲ್ಕರ್ ಅವರಂತಹ ಆಟಗಾರರು ಇನ್ನಷ್ಟು ವರ್ಷ ಆಡಬೇಕು' ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗಾ ಅಭಿಪ್ರಾಯ ಪಟ್ಟರು.`ಸಚಿನ್ 24 ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಾ ಬಂದಿದ್ದಾರೆ. ಅವರು ಇತ್ತೀಚಿಗೆ ಏಕದಿನ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದು ಸೂಕ್ತ ನಿರ್ಧಾರವೇ ಆಗಿತ್ತು. ಆದರೆ, ಇನ್ನೂ ಎರಡು ಮೂರು ವರ್ಷ ಟೆಸ್ಟ್ ಆಡುತ್ತಾರೆ ಎನ್ನುವ ವಿಶ್ವಾಸವಿದೆ. 39 ವರ್ಷವಾದರೂ ಆಟದ ಬಗ್ಗೆ ಅವರು ಹೊಂದಿರುವ ಪ್ರೀತಿ ಮೆಚ್ಚುವಂಥದ್ದು' ಎಂದು ರಣತುಂಗಾ ಶ್ಲಾಘಿಸಿದರು.ಶ್ರೀಲಂಕಾ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸನತ್‌ಜಯಸೂರ್ಯ, ಲಂಕಾ ಕ್ರಿಕೆಟ್ ಮಂಡಳಿ ಸಿಇಒ ನಿಶಾಂತ್ ರಣತುಂಗಾ ಪಾಲ್ಗೊಂಡಿದ್ದರು. 1996ರಲ್ಲಿ ಲಂಕಾ ವಿಶ್ವಕಪ್ ಗೆದ್ದಾಗ ಅರ್ಜುನ್  ರಣತುಂಗಾ ತಂಡದ ನಾಯಕರಾಗಿದ್ದರು.ಸಚಿನ್ ಟೆಸ್ಟ್‌ಗೆ ನಿವೃತ್ತಿ ಪ್ರಕಟಿಸಿದರೆ ಈ ಮಾದರಿ ಸತ್ವ ಕಳೆದುಕೊಳ್ಳುತ್ತದೆ ಎಂದು ಗುರುವಾರ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಣತುಂಗಾ ಹೇಳಿದ್ದರು. ಈ ಕುರಿತು ಸ್ಪಷ್ಟನೆ ನೀಡಿದ ಅವರು, `ಟೆಸ್ಟ್‌ನಿಂದ ಸಚಿನ್ ನಿವೃತ್ತಿಯಾದರೆ ಟೆಸ್ಟ್ ಮಾದರಿ ಸತ್ವ ಕಳೆದುಕೊಳ್ಳುತ್ತದೆ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿಲ್ಲ. ಅನುಭವಿ ಆಟಗಾರರು ಇನ್ನಷ್ಟು ವರ್ಷ ಟೆಸ್ಟ್ ಆಡಬೇಕು ಎಂಬುದು ನನ್ನ ಮಾತಿನ ಆಶಯವಾಗಿದೆ' ಎಂದೂ ಅವರು ನುಡಿದರು.`ಪರಿಪೂರ್ಣ ಕ್ರಿಕೆಟಿಗರಾಗಬೇಕಾದರೆ ಟ್ವೆಂಟಿ-20 ಮಾದರಿ ಬೆನ್ನು ಹತ್ತಬಾರದು. ಇದಕ್ಕೆ ಸುನಿಲ್ ಗಾವಸ್ಕರ್, ಸಚಿನ್, ಜಿ. ವಿಶ್ವನಾಥ್, ಮಹಮ್ಮದ್ ಅಜರುದ್ದೀನ್, ದಿಲೀಪ್ ವೆಂಗ್‌ಸರ್ಕರ್ ಅವರಂಥಹ ಕ್ರಿಕೆಟಿಗರೇ ಸಾಕ್ಷಿ. ಭಾರತ ಸದಾ ಕಾಲ ನನ್ನ ನೆನಪಿನಂಗಳದಲ್ಲಿ ಹಸಿರಾಗಿರುತ್ತದೆ. ಏಕೆಂದರೆ, ಈ ದೇಶ  ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್ ಅವರಂತಹ ಪ್ರತಿಭಾನ್ವಿತರನ್ನು ಪಡೆದಿದೆ' ಎಂದು ಹೇಳಿದರು.ಅಸಮಾಧಾನ: ವಿವಾದಿತ ಅಂಪೈರ್ ತೀರ್ಪು ಪರಿಶೀಲನಾ ಪದ್ಧತಿಯನ್ನು (ಡಿಆರ್‌ಎಸ್) ಕಡ್ಡಾಯವಾಗಿ ಜಾರಿಗೆ ತರಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಿಂದೇಟು ಹಾಕುತ್ತಿರುವುದಕ್ಕೆ ರಣತುಂಗಾ ಅಸಮಾಧಾನ ವ್ಯಕ್ತಪಡಿಸಿದರು.

`ಫೀಲ್ಡ್ ಅಂಪೈರ್‌ಗಳಿಂದ ಆಗುವ ತಪ್ಪುಗಳನ್ನು ತಪ್ಪಿಸಲು ಡಿಆರ್‌ಎಸ್ ಅಗತ್ಯವಿದೆ. ಆದರೆ, ಬಿಸಿಸಿಐ ಕೂಡಾ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ಕುರಿತಂತೆ ಬಿಸಿಸಿಐಯನ್ನು ಟೀಕಿಸುವುದಿಲ್ಲ. ಎಲ್ಲಾ ದೇಶಗಳು ಈ ಪದ್ಧತಿಯನ್ನು ಒಪ್ಪಿಕೊಳ್ಳಬೇಕು' ಎಂದು ನುಡಿದರು.ತೀರ್ಮಾನವಿಲ್ಲ:  `ಸರ್ಕಾರ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿಚಾರದಲ್ಲಿ ಹಸ್ತಕ್ಷೇಪ ಮಾಡದೇ ಇದ್ದರೆ ಮಾತ್ರ ಮುಂಬರುವ ಚುನಾವಣೆಯಲ್ಲಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ಈ ಕುರಿತು ಲಂಕಾಕ್ಕೆ ತೆರಳಿದ ಮೇಲೆ ತೀರ್ಮಾನ ಕೈಗೊಳ್ಳುತ್ತೇನೆ' ಎಂದು ಮಾಜಿ ಅವರು ಹೇಳಿದರು.ಕ್ರೀಡೆ-ರಾಜಕಾರಣ ಬೇರೆ ಬೇರೆ...

`ರಾಜಕಾರಣ ಬೇರೆ, ಕ್ರೀಡೆಯೇ ಬೇರೆ ದಯವಿಟ್ಟು ಕ್ರೀಡೆಯಲ್ಲಿ ರಾಜಕಾರಣ ಒಂದು ಮಾಡಬೇಡಿ' ಎಂದು ರಣತುಂಗಾ ಮನವಿ ಮಾಡಿದರು.20ನೇ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಚೆನ್ನೈ ಆತಿಥ್ಯ ವಹಿಸುವುದಿಲ್ಲ ಎಂದು ತಮಿಳುನಾಡು  ಮುಖ್ಯಮಂತ್ರಿ ಜಯಲಲಿತಾ ಗುರುವಾರ ಹೇಳಿರುವ ಹಿನ್ನೆಲೆಯಲ್ಲಿ ಅವರು ಈ ಮಾತು ಹೇಳಿದರು.`ಕ್ರೀಡೆಯಲ್ಲಿ ಮೊದಲಿನಿಂದಲೂ ಭಾರತ ಹಾಗೂ ಶ್ರೀಲಂಕಾ ಉತ್ತಮ ಬಾಂಧವ್ಯ ಹೊಂದಿದೆ. ರಾಜಕೀಯ ಕಾರಣಕ್ಕೆ ಈ ಬಾಂಧವ್ಯ ಮುರುಟಿ ಹೋಗದಿರಲಿ. ತಮಿಳುನಾಡು ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು' ಎಂದೂ ಅವರು ನುಡಿದರು.ಎಲ್‌ಟಿಟಿಇ ಮುಖ್ಯಸ್ಥನಾಗಿದ್ದ ಪ್ರಭಾಕರನ್ ಅವರ ಮಗನನ್ನು ಶ್ರೀಲಂಕಾ ಸೈನಿಕರು ಅಮಾನುಷವಾಗಿ ಕೊಲೆ ಮಾಡಿದ್ದಾರೆಂದು ಆರೋಪಿಸಿರುವ ತಮಿಳುನಾಡು ಸರ್ಕಾರ ಏಷ್ಯನ್ ಅಥ್ಲೆಟಿಕ್ಸ್‌ಗೆ ಆತಿಥ್ಯ ವಹಿಸುವುದರಿಂದ ಹಿಂದೆ ಸರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry